Supreme Court and Bihar Map 
ಸುದ್ದಿಗಳು

ಎಸ್‌ಐಆರ್‌ ಜಗತ್ತಿನ ಇತಿಹಾಸದಲ್ಲಿಯೇ ಅತಿ ದೊಡ್ಡ ಮತದಾನದ ನಿರಾಕರಣೆ: ಸುಪ್ರೀಂನಲ್ಲಿ ಯೋಗೇಂದ್ರ ಯಾದವ್‌ ವಿಶ್ಲೇಷಣೆ

ಮತದಾರರ ಪಟ್ಟಿಯಲ್ಲಿ ದೇಶದ ಪ್ರಜೆಗಳು ಮತ್ತು ಪ್ರಜೆಗಳಲ್ಲದವರನ್ನು ಸೇರಿಸುವುದು ಅಥವಾ ಹೊರಗಿಡುವುದು ಭಾರತೀಯ ಚುನಾವಣಾ ಆಯೋಗದ (ಇಸಿಐ) ವ್ಯಾಪ್ತಿಗೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್‌.

Bar & Bench

ಮತದಾರರ ಪಟ್ಟಿಯಲ್ಲಿ ದೇಶದ ಪ್ರಜೆಗಳು ಮತ್ತು ಪ್ರಜೆಗಳಲ್ಲದವರನ್ನು ಸೇರಿಸುವುದು ಅಥವಾ ಹೊರಗಿಡುವುದು ಭಾರತೀಯ ಚುನಾವಣಾ ಆಯೋಗದ (ಇಸಿಐ) ವ್ಯಾಪ್ತಿಗೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ಆಧಾರ್ ಕಾರ್ಡ್ ಪೌರತ್ವದ ನಿರ್ಣಾಯಕ ಪುರಾವೆಯಲ್ಲ ಎಂದು ಇಸಿಐ ಹೇಳಿದ್ದು ಸರಿ ಎಂಬುದಾಗಿ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ಆದೇಶಿಸಿ ಇಸಿಐ ಜೂನ್ 24ರಂದು ನೀಡಿದ್ದ ನಿರ್ದೇಶನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ವಿಚಾರಣೆಯ ವೇಳೆ ಪೀಠವು, ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ಸಮಯದಲ್ಲಿ ಇಸಿಐ ಪುರಾವೆಯಾಗಿ ಕೇಳಿದ ಬಹುತೇಕ ದಾಖಲೆಗಳು ಬಿಹಾರದ ಜನರ ಬಳಿ ಇಲ್ಲ ಎಂಬ ವಾದವನ್ನು ಕೂಡ ಒಪ್ಪಲಿಲ್ಲ.

"ಇದು ನಂಬಿಕೆಯ ಕೊರತೆ ಇರುವ ಪ್ರಕರಣವಷ್ಟೇ" ಎಂದು ನ್ಯಾಯಮೂರ್ತಿ ಕಾಂತ್ ಇಂದಿನ ಕಲಾಪದ ವೇಳೆ ಹೇಳಿದರು.

ಇಂದು ಮೊದಲಿಗೆ ವಾದಿಸಿದ ಅರ್ಜಿದಾರರ ಪರ ವಕೀಲ ಹಿರಿಯ ವಕೀಲ ಕಪಿಲ್ ಸಿಬಲ್, ಚುನಾವಣಾ ಅಧಿಕಾರಿಗಳು ಜೀವಂತ ಇರುವ 12  ಮಂದಿಯನ್ನು ಸತ್ತಿರುವಂತೆ ಬಿಂಬಿಸಿದ್ದಾರೆ ಎಂದು ಆಕ್ಷೇಪಿಸಿದರು.

ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಪ್ರಸ್ತುತ ಪ್ರಕಟಿಸಿರುವುದು ಕರಡು ಪಟ್ಟಿಯಷ್ಟೇ, ಇಷ್ಟು ದೊಡ್ಡ ಕಾರ್ಯದಲ್ಲಿ ಖಂಡಿತ ದೋಷಗಳು ಇರುತ್ತವೆ ಎಂದರು. ಇದಕ್ಕೆ ನ್ಯಾಯಾಲಯವು "ಎಷ್ಟು ಜನರನ್ನು ಸತ್ತ ವ್ಯಕ್ತಿಗಳೆಂದು ಗುರುತಿಸಲಾಗಿದೆ ಎಂದು ನಾವು ನಿಮ್ಮನ್ನು (ಇಸಿಐ) ಕೇಳಬೇಕಿದೆ... ನಿಮ್ಮ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಿರಬೇಕಲ್ಲವೇ" ಎಂದು ಮಾಹಿತಿ ಕೇಳಿತು.

ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಎಸ್‌ಐಆರ್ ಈಗಾಗಲೇ ಸಾಮೂಹಿಕವಾಗಿ ಮತದಾರರನ್ನು ಹೊರಗಿಡುತ್ತಿದೆ ಎಂದು ಹೇಳಿದರು. ಆದರೆ ನ್ಯಾಯಾಲಯ ಸಾಮೂಹಿಕವಾಗಿ ಹೊರಗಿಡಲಾಗುತ್ತಿದೆ ಎಂಬುದು ವಾಸ್ತವಾಂಶ ಮತ್ತು ಅಂಕಿ ಅಂಶಗಳನ್ನು ಆಧರಿಸಿರಬೇಕು ಎಂದಿತು.

ಮತ್ತೊಬ್ಬ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರ ವಾದವೊಂದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವುದು ಇಲ್ಲವೇ ಬಿಡುವುದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ ಎಂದಿತು. 

ಕರಡು ಪಟ್ಟಿಯನ್ನು ಹುಡುಕಲು ಸಾಧ್ಯವಾಗದಂತೆ ಮಾಡಿರುವ ನಿರ್ಧಾರವನ್ನು ವಕೀಲ ಪ್ರಶಾಂತ್ ಭೂಷಣ್ ಪ್ರಶ್ನಿಸಿದರು. ಯಾವುದೇ ಕಾರಣವಿಲ್ಲದೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒಗಳು) ಏನಿಲ್ಲವೆಂದರೂ ಶೇ 10ರಿಂದ 12ರಷ್ಟು ಮತದಾರರನ್ನು ಪಟ್ಟಿಯಿಂದ ತಿರಸ್ಕರಿಸಿದ್ದಾರೆ ಎಂದರು.

Supreme Court, Bihar SIR and Yogendra Yadav

ಪ್ರೊ.‌ ಯೋಗೇಂದ್ರ ಯಾದವ್ ಮಾತಿಗೆ ಕಿವಿಯಾದ ಪೀಠ

ವಿಚಾರಣೆಯ ಕೊನೆಯಲ್ಲಿ, ಚುನಾವಣಾ ವಿಶ್ಲೇಷಕ ಪ್ರೊ. ಯೋಗೇಂದ್ರ ಯಾದವ್ ಅವರನ್ನು ಕೂಡ ಪೀಠವು ಆಲಿಸಿತು. ಎಸ್‌ಐಆರ್ ಉದ್ದೇಶಪೂರ್ವಕವಾಗಿ ಸಾಮೂಹಿಕವಾಗಿ ಮತದಾರರನ್ನು ಪಟ್ಟಿಯಿಂದ ಹೊರಗಿಡಲು ಕಾರಣವಾಗುತ್ತಿದೆ ಎಂದು ಅವರು ಹೇಳಿದರು. ಇಡೀ ಪ್ರಕ್ರಿಯೆ "ಭಯಾನಕ" ಎಂದ ಅವರು ಎಸ್ಐಆರ್ ಮತದಾರರ ಹಕ್ಕು ನಿರಾಕರಣೆಯ ಅತಿದೊಡ್ಡ ಕ್ರಿಯೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆಯ ವೇಳೆ ಚುನಾವಣಾ ಅಧಿಕಾರಿಗಳು ಸತ್ತಿದ್ದಾರೆಂದು ಘೋಷಿಸಿರುವ ಇಬ್ಬರು ವ್ಯಕ್ತಿಗಳನ್ನು ನ್ಯಾಯಾಲಯಕ್ಕೆ ಕರೆತಂದಿದ್ದ ಅವರು, ಪೀಠವನ್ನು ಉದ್ದೇಶಿಸಿ, "ದಯವಿಟ್ಟು ಅವರನ್ನೊಮ್ಮೆ ನೋಡಿ. ಇವರನ್ನು ನಿಧನರಾಗಿದ್ದಾರೆ ಎಂದು ಘೋಷಿಸಲಾಗಿದೆ. ಆದರೆ, ಇವರು ಹಾಗೆ ಕಾಣಿಸುತ್ತಿಲ್ಲ, ಬದುಕಿದ್ದಾರೆ... ನೋಡಿ," ಎಂದು ಪೀಠದ ಗಮನಸೆಳೆದರು.

ಈ ವೇಳೆ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಕೇಶ್‌ ದ್ವಿವೇದಿ, ಯಾದವ್‌ ಅವರ ನಡೆಯನ್ನು "ಡ್ರಾಮಾ" ಎಂದು ಕರೆದರು.

ನ್ಯಾ. ಬಾಗ್ಚಿ ಅವರು, "ಇದೊಂದು ಉದ್ದೇಶಪೂರ್ವಕವಲ್ಲದ ತಪ್ಪಿರಬಹುದು," ಎಂದರು.

ಜಗತ್ತಿನ ಇತಿಹಾಸದಲ್ಲಿಯೇ ಅತಿ ದೊಡ್ಡ ಮತದಾನ ನಿರಾಕರಣೆಯ ಕಾರ್ಯವನ್ನು ನಾವು ಕಾಣುತ್ತಿದ್ದೇವೆ. 65 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ. ಭಾರತದ ಇತಿಹಾಸದಲ್ಲಿಯೇ ಹಿಂದೆಂದೂ ಹೀಗೆ ಘಟಿಸಿಲ್ಲ. ಹೀಗೆ ಮುಂದುರಿದರೆ ಇದು 1 ಕೋಟಿಯನ್ನು ದಾಟಲಿದೆ.
ಪ್ರೊ. ಯೋಗೇಂದ್ರ ಯಾದವ್‌

ಯೋಗೇಂದ್ರ ಯಾದವ್‌ ಅವರು ತಮ್ಮ ಮಂಡನೆಯ ವೇಳೆ, ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮತದಾರರ ಪಟ್ಟಿಗೆ ಒಂದೇ ಒಂದು ಹೆಸರು ಹೊಸದಾಗಿ ಸೇರ್ಪಡೆಯಾಗದ ಎಸ್‌ಐಆರ್‌ ಪ್ರಕ್ರಿಯೆ ನಡೆದಿದೆ ಎಂದು ಗಮನಸೆಳೆದರು.

ಮುಂದುವರೆದು, "ಚುನಾವಣಾ ಆಯೋಗ ರಾಜ್ಯದುದ್ದಕ್ಕೂ ಪ್ರಕ್ರಿಯೆಯನ್ನು ನಡೆಸಿದ್ದಾರಾದರೂ ಒಂದೇ ಒಂದು ಹೊಸ (ಹೆಸರು) ಸೇರ್ಪಡೆಯಾಗಿಲ್ಲ... ಜಗತ್ತಿನ ಇತಿಹಾಸದಲ್ಲಿಯೇ ಅತಿ ದೊಡ್ಡ ಮತದಾನ ನಿರಾಕರಣೆಯ ಕಾರ್ಯವನ್ನು ನಾವು ಕಾಣುತ್ತಿದ್ದೇವೆ. 65 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ. ಭಾರತದ ಇತಿಹಾಸದಲ್ಲಿಯೇ ಹಿಂದೆಂದೂ ಹೀಗೆ ಘಟಿಸಿಲ್ಲ. ಹೀಗೆ ಮುಂದುರಿದರೆ ಇದು 1 ಕೋಟಿಯನ್ನು ದಾಟಲಿದೆ," ಎಂದು ನ್ಯಾಯಪೀಠದ ಮುಂದೆ ಆತಂಕ ವ್ಯಕ್ತಪಡಿಸಿದರು.

ಯಾದವ್ ಅವರು ಪರಿಷ್ಕರಣೆಯ ಕುರಿತಾದ ತಮ್ಮ ವಿಶ್ಲೇಷಣೆಯನ್ನು ನೀಡಿದ್ದಕ್ಕಾಗಿ ಪೀಠವು ಅವರಿಗೆ ಧನ್ಯವಾದ ಅರ್ಪಿಸಿತು. ವಿಚಾರಣೆ ಬುಧವಾರವೂ ಮುಂದುವರಿಯಲಿದೆ.