AR Rahman
AR Rahman 
ಸುದ್ದಿಗಳು

ತೆರಿಗೆ ವಂಚನೆ: ಎ ಆರ್ ರೆಹಮಾನ್ ವಿರುದ್ಧ ಮದ್ರಾಸ್ ಹೈಕೋರ್ಟ್ ಮೊರೆ ಹೋದ ಆದಾಯ ತೆರಿಗೆ ಇಲಾಖೆ

Bar & Bench

ಸಂಗೀತ ಸಂಯೋಜಕ ಎ ಆರ್ ರೆಹಮಾನ್ ಅವರು 3.47 ಕೋಟಿ ರೂಪಾಯಿಯಷ್ಟು ವೃತ್ತಿಪರ ಶುಲ್ಕಕ್ಕೆ ತೆರಿಗೆ ಸಂದಾಯ ಮಾಡದ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ಶುಕ್ರವಾರ ನೋಟೀಸ್ ಜಾರಿ ಮಾಡಿದೆ.

‘ಎ ಆರ್ ರೆಹಮಾನ್ ಪ್ರತಿಷ್ಠಾನ’ಕ್ಕೆ 3.45 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ರೆಹಮಾನ್ ಅವರು ದೇಣಿಗೆಯಾಗಿ ನೀಡುವ ಮೂಲಕ ತೆರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು. ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಆದೇಶವನ್ನು ಪ್ರಶ್ನಿಸಿ ಚೆನ್ನೈನ ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿಂದೆ ನ್ಯಾಯಾಧೀಕರಣ ರೆಹಮಾನ್ ಪರವಾಗಿ ತೀರ್ಪು ನೀಡಿತ್ತು.

ರೆಹಮಾನ್ ಬ್ರಿಟನ್ ಮೂಲದ ಲೆಬರಾ ಮೊಬೈಲ್ಸ್ ಜೊತೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದರು.

ವಿಶೇಷ ರಿಂಗ್‌ಟೋನ್‌ಗಳು ಮತ್ತು ಹಾಡುಗಳ ಸಂಯೋಜನೆ ಸೇರಿದಂತೆ ನೀಡಲಾದ ಸೇವೆಗಳಿಗಾಗಿ, ಅವರು 2010-2011ರ ಅವಧಿಯಲ್ಲಿ ಲೆಬರಾ ಮೊಬೈಲ್‌ಗಳಿಂದ 7,50,000 ಅಮೆರಿಕನ್ ಡಾಲರ್ ಅಥವಾ 3,47,77,200 ರೂಗಳನ್ನು ಪಡೆದಿದ್ದಾರೆಂದು ಹೇಳಲಾಗಿದೆ.

2011-12ರ ಮೌಲ್ಯಮಾಪನ ವರ್ಷದಲ್ಲಿ ಇದನ್ನು “ವೃತ್ತಿಪರ ಶುಲ್ಕ” ದ ಅಡಿಯಲ್ಲಿ ರೆಹಮಾನ್ ಅವರಿಗೆ ತೆರಿಗೆ ವಿಧಿಸಲು ಈ ಹಣವನ್ನು ಪರಿಗಣಿಸಬೇಕು.

ಆದರೆ, ಈ ವೃತ್ತಿಪರ ಸ್ವೀಕೃತಿಗಳನ್ನು 2011-12ರ ಆದಾಯ ತೆರಿಗೆ ರಿಟರ್ನ್‌ಗಳಲ್ಲಿ ರೆಹಮಾನ್ ನಮೂದಿಸಿರಲಿಲ್ಲ.

3.47 ಕೋಟಿ ರೂ.ಗಳನ್ನು ರೆಹಮಾನ್ ತಮ್ಮ ವೈಯಕ್ತಿಕ ಗಳಿಕೆಯ ವೃತ್ತಿಪರ ಶುಲ್ಕವಾಗಿ ಪಡೆಯುವ ಬದಲು, ತೆರಿಗೆ-ವಿನಾಯಿತಿ ಸೌಲಭ್ಯ ಹೊಂದಿರುವ ಎ. ಆರ್ ರೆಹಮಾನ್ ಫೌಂಡೇಶನ್‌ಗೆ ನೀಡಿದ್ದರು.

ಬೇರೆ ರೀತಿಯಲ್ಲಿ ಹೇಳುವುದಾದರೆ, ಆದಾಯ ತೆರಿಗೆ ಇಲಾಖೆಯು "ವೃತ್ತಿಪರ ಶುಲ್ಕ" ಎಂದು ಸ್ವೀಕರಿಸಬೇಕಾದ ಮೊತ್ತವನ್ನು ಎ ಆರ್ ರೆಹಮಾನ್ ಪ್ರತಿಷ್ಠಾನಕ್ಕೆ "ದೇಣಿಗೆ" ರೂಪದಲ್ಲಿ ನೀಡಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಎ.ಆರ್. ರೆಹಮಾನ್ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿಯೂ ಆಗಿರುವ ರೆಹಮಾನ್ , ತನ್ನದೇ ಆದ ಆದಾಯವನ್ನು ಲೆಕ್ಕಹಾಕುವ ಮಾರ್ಗವಾಗಿ ಪ್ರತಿಷ್ಠಾನವನ್ನು ಬಳಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಈ ಮನವಿಯ ಮೇರೆಗೆ ನ್ಯಾಯಮೂರ್ತಿಗಳಾದ ಟಿ.ಎಸ್.ಶಿವಾಗ್ನಂ ಮತ್ತು ಭವಾನಿ ಸುಬ್ಬರೊಯನ್ ಅವರಿದ್ದ ನ್ಯಾಯಪೀಠ ನೋಟಿಸ್ ನೀಡಿದೆ.

2011-12 ರ ವರ್ಷದಲ್ಲಿ ತಮ್ಮ ಆದಾಯ ಸುಮಾರು 16 ಕೋಟಿ ರೂಪಾಯಿ ಎಂದು ರೆಹಮಾನ್ ಆದಾಯ ತೆರಿಗೆಗೆ ಮಾಹಿತಿ ನೀಡಿದ್ದರು. ಬಳಿಕ ಇದನ್ನು ಪರಿಶೀಲಿಸಿದ ಇಲಾಖೆ ಅವರ ಆದಾಯದ ಮೊತ್ತ 18 ಕೋಟಿಗಳಷ್ಟಾಗುತ್ತದೆ ಎಂದು ಲೆಕ್ಕ ಹಾಕಿತ್ತು. ಅಲ್ಲದೆ ರೆಹಮಾನ್ ತಮ್ಮ ಆದಾಯದ ಕೆಲ ಮೊತ್ತದ ಬಗ್ಗೆ ಮಾಹಿತಿ ನೀಡಿಲ್ಲ ಎಂಬುದು ಇಲಾಖೆಯ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿತ್ತು. 2018ರಲ್ಲಿ ಆ ಮೊತ್ತಕ್ಕೆ ತೆರಿಗೆ ಪಡೆಯುವಂತೆ ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿ ರೆಹಮಾನ್ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮೊರೆ ಹೋಗಿದ್ದರು. ನ್ಯಾಯಾಧಿಕರಣ ರೆಹಮಾನ್ ಪರವಾಗಿ ತೀರ್ಪು ನೀಡಿತ್ತು. ಈ ತೀರ್ಪು ಸೂಕ್ತವಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಈಗ ಹೈಕೋರ್ಟ್ ಮೆಟ್ಟಿಲೇರಿದೆ.