ಸುದ್ದಿಗಳು

ವಾಣಿಜ್ಯ ಮಧ್ಯಸ್ಥಿಕೆ ವಕೀಲರಿಗೆ ಸೇರಿದ 38 ಸ್ಥಳಗಳಲ್ಲಿ ಐಟಿ ಅಧಿಕಾರಿಗಳಿಂದ ಪರಿಶೀಲನೆ; ₹5.5 ಕೋಟಿ ನಗದು, ದಾಖಲೆ ವಶ

ವಿವಾದಗಳನ್ನು ಬಗೆಹರಿಸಲು ತನ್ನ ಕಕ್ಷಿದಾರರಿಂದ ನಗದು ರೂಪದಲ್ಲಿ ಗಣನೀಯ ಪ್ರಮಾಣದಲ್ಲಿ ವಕೀಲರು ಹಣ ಸ್ವೀಕರಿಸುತ್ತಿದ್ದರು ಎಂದು ಶಂಕಿಸಲಾಗಿದೆ.

Bar & Bench

ವಾಣಿಜ್ಯ ಮಧ್ಯಸ್ಥಿಕೆ ಮತ್ತು ಪರ್ಯಾಯ ವಿವಾದ ನಿರ್ಣಯ ಕ್ಷೇತ್ರದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಚಂಡೀಗಢ ಮೂಲದ ವಕೀಲರೊಬ್ಬರ ಮನೆ ಹಾಗೂ ಸಂಬಂಧಪಟ್ಟ ವಿವಿಧ ಸ್ಥಳಗಳಲ್ಲಿ ಗುರುವಾರ ಆದಾಯ ತೆರಿಗೆ ಅಧಿಕಾರಿಗಳು ಕೈಗೊಂಡ ದಾಳಿ ವೇಳೆ ಅಪಾರ ಪ್ರಮಾಣದ ನಗದು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯ ಮುಂದುವರಿದೆ ಎನ್ನಲಾಗಿದೆ.

ವಿವಾದಗಳನ್ನು ಬಗೆಹರಿಸಲು ತನ್ನ ಕಕ್ಷಿದಾರರಿಂದ ನಗದು ರೂಪದಲ್ಲಿ ಗಣನೀಯ ಪ್ರಮಾಣದಲ್ಲಿ ವಕೀಲರು ಹಣ ಸ್ವೀಕರಿಸುತ್ತಿದ್ದರು ಎಂದು ಶಂಕಿಸಲಾಗಿದೆ ಎಂದು ಮಾಧ್ಯಮ ಮಾಹಿತಿ ಸಂಸ್ಥೆ (ಪಿಐಬಿ) ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. “ದೆಹಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ಮತ್ತು ಹರಿಯಾಣದ ವಿವಿಧ 38 ಸ್ಥಳಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ₹5.5 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. 10 ಲಾಕರ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಕಳೆದ ಕೆಲವು ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ನಗದು ವರ್ಗಾವಣೆ ಮತ್ತು ಹೂಡಿಕೆಯ ಬಗೆಗಿನ ದಾಖಲೆಗಳು ಪತ್ತೆಯಾಗಿವೆ. ವಕೀಲರು ಅಥವಾ ಅವರ ಸಂಬಂಧಿಗಳ ಡಿಜಿಟಲ್ ದತ್ತಾಂಶದಲ್ಲಿ ದಾಖಲೆಯಿಲ್ಲದ ಹಣದ ಗಣನೀಯ ವರ್ಗಾವಣೆ ಕಂಡುಬಂದಿದೆ. ಹಣ ವರ್ಗಾವಣೆಯಲ್ಲಿ ಭಾಗಿಯಾದವರು ಲೇವಾದೇವಿಗಾರರು ಮತ್ತು ಬಿಲ್ಡರ್ ಗಳಾಗಿದ್ದು, ಅವರ ದಾಖಲೆಗಳು ಲಭ್ಯವಾಗಿವೆ,” ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ₹117 ಕೋಟಿ ನಗದು ಶುಲ್ಕ ಸ್ವೀಕರಿಸಿರುವ ವಕೀಲರು ದಾಖಲೆಗಳಲ್ಲಿ ₹21 ಕೋಟಿ ಪಡೆದಿರುವುದಾಗಿ ವಿವರಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸಾರ್ವಜನಿಕ ಉದ್ದಿಮೆ ಜೊತೆ ಮಧ್ಯಸ್ಥಿಕೆ ವಹಿಸಲು ಮೂಲಭೂತ ಸೌಕರ್ಯ ಮತ್ತು ಎಂಜಿನಿಯರಿಂಗ್ ಕಂಪೆನಿಯಿಂದ ₹100 ಕೋಟಿ ನಗದು ಸ್ವೀಕರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.

ದಾಖಲೆಯಿಲ್ಲದ ಅಕ್ರಮ ಹಣವನ್ನು ವಸತಿ ಮತ್ತು ವಾಣಿಜ್ಯ ಸಮುಚ್ಚಯ ಖರೀದಿಸಲು ತೊಡಗಿಸಲಾಗಿದ್ದು, ಅವುಗಳನ್ನು ಶಾಲೆಗಳನ್ನು ನಡೆಸುತ್ತಿರುವ ಟ್ರಸ್ಟ್‌ ಗಳ ವಶಕ್ಕೆ ನೀಡಲಾಗಿದೆ. “ಕಳೆದ ಎರಡು ವರ್ಷಗಳಲ್ಲಿ ಪ್ರತಿಷ್ಠಿತ ಪ್ರದೇಶಗಳಲ್ಲಿ ಆಸ್ತಿ ಖರೀದಿಸಲು ₹100 ಕೋಟಿ ನಗದು ತೊಡಗಿಸಿರುವ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ವಕೀಲರು ಮತ್ತು ಅವರ ಸಹವರ್ತಿಗಳು ಹಲವು ಶಾಲೆ ಮತ್ತು ಆಸ್ತಿಗಳನ್ನು ಖರೀದಿಸಲು ₹100 ಕೋಟಿ ನಗದು ವೆಚ್ಚ ಮಾಡಿದ್ದಾರೆ. ನೂರಾರು ಕೋಟಿ ರೂಪಾಯಿ ಬೆಲೆಬಾಳುವ ವಸತಿಗಳನ್ನೂ ವಕೀಲರು ಖರೀದಿಸಿದ್ದಾರೆ.” ಎಂದು ವಿವರಿಸಲಾಗಿದೆ.

Ministry of Finance Press Release