ಸುದ್ದಿಗಳು

ಒಂದೇ ನ್ಯಾಯಾಲಯದ ವಿಭಿನ್ನ ಪೀಠಗಳು ನೀಡುವ ಅಸ್ಥಿರ ತೀರ್ಪುಗಳು ನ್ಯಾಯಾಂಗದ ವಿಶ್ವಾಸಾರ್ಹತೆ ಅಲುಗಿಸುತ್ತವೆ: ಸುಪ್ರೀಂ

ವೈವಾಹಿಕ ವಿಚಾರಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

Bar & Bench

ನ್ಯಾಯಾಲಯದ ಬೇರೆ ಬೇರೆ ಪೀಠಗಳಿಂದ ಬರುವ ಅಸ್ಥಿರ ತೀರ್ಪುಗಳು ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಅಲುಗಾಡಿಸುತ್ತವೆ ಮತ್ತು ಮೊಕದ್ದಮೆಯನ್ನು ಜೂಜಾಟದ ಮಟ್ಟಕ್ಕೆ ಇಳಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ವೈವಾಹಿಕ ಕ್ರೌರ್ಯದ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೊಯ್‌ಮಲ್ಯ ಬಾಗ್ಚಿ ಅವರಿದ್ದ ಪೀಠವು ವಿಚಾರಣೆ ನಡೆಸುತ್ತಿತ್ತು. ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ಪೀಠವು ಪತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿತ್ತು. ಆದರೆ ಅದೇ ಹೈಕೋರ್ಟ್‌ನ ಸಮನ್ವಯ ಪೀಠ ಗಂಡನ ಕಡೆಯವರ ವಿರುದ್ಧ ಪ್ರಕರಣ ಮುಂದುವರಿಸಲು ಅನುಮತಿ ನೀಡಿತ್ತು.

ಗಂಡನ ಕಡೆಯವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲು ನಿರಾಕರಿಸುವ ಆದೇಶವನ್ನು ಈ ಹಿಂದೆಯೇ ನೀಡಲಾಗಿದ್ದರೂ, ಪತಿಯ ವಿರುದ್ಧದ ವಿಚಾರಣೆ ರದ್ದುಗೊಳಿಸುವಾಗ ಹೈಕೋರ್ಟ್ ಅದನ್ನು ಉಲ್ಲೇಖಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಮನ್ವಯ ಪೀಠದ ಹಿಂದಿನ ತೀರ್ಪನ್ನು ಉಲ್ಲೇಖಿಸುವುದು ಮತ್ತು ಭಿನ್ನ ತೀರ್ಪು ನೀಡಲು ಕಾರಣ ಏನು ಎಂಬುದನ್ನು ವಿವರಿಸುವುದು ನ್ಯಾಯಮೂರ್ತಿಗಳ ಕರ್ತವ್ಯವಾಗಿತ್ತು ಎಂದು ನ್ಯಾಯಾಲಯ ಹೇಳಿತು.

"ಹಾಗೆ ಮಾಡಲು ವಿಫಲವಾದರೆ ನ್ಯಾಯಾಂಗ ಔಚಿತ್ಯ ಮತ್ತು ಶಿಸ್ತನ್ನು ಉಲ್ಲಂಘಿಸಿದಂತಾಗುತ್ತದೆ. ನ್ಯಾಯಾಂಗದ ತೀರ್ಪುಗಳಲ್ಲಿ ಸ್ಥಿರತೆ ಎಂಬುದು ಜವಾಬ್ದಾರಿಯುತ ನ್ಯಾಯಾಂಗದ ಲಕ್ಷಣವಾಗಿದೆ. ವಿಭಿನ್ನ ಪೀಠಗಳಿಂದ ಹೊರಬರುವ ಅಸಮಂಜಸ ತೀರ್ಪುಗಳು ಸಾರ್ವಜನಿಕ ನಂಬಿಕೆಯನ್ನು ಅಲುಗಾಡಿಸುತ್ತವೆ ಮತ್ತು ಮೊಕದ್ದಮೆಯನ್ನು ಜೂಜಾಟದ ಮಟ್ಟಕ್ಕೆ ಇಳಿಸುತ್ತವೆ. ಇದು ನ್ಯಾಯದ ಸ್ಪಷ್ಟ ಹರಿವನ್ನು ಹಾಳುಮಾಡುವ ಫೋರಂ ಶಾಪಿಂಗ್‌ನಂತಹ (ಅನುಕೂಲಕರ ತೀರ್ಪಿಗಾಗಿ ತಮಗೆ ಬೇಕಾದ ನ್ಯಾಯಮೂರ್ತಿಗಳ ಪೀಠವನ್ನು ಆಯ್ಕೆ ಮಾಡಿಕೊಳ್ಳಲು ಕಕ್ಷಿದಾರರಿಗೆ ದೊರೆಯುವ ಅಕ್ರಮ ಅವಕಾಶ) ತೀವ್ರ ಕಪಟ ರೂಢಿಗಳಿಗೆ ಎಡೆ ಮಾಡಿಕೊಡುತ್ತದೆ. ಆಕ್ಷೇಪಾರ್ಹ ಆದೇಶ ನ್ಯಾಯಾಂಗದ ಚಂಚಲತೆ ಮತ್ತು ಅನಿಯಂತ್ರಿತತೆಯ ದುಷ್ಪರಿಣಾಮದಿಂದ ಬಳಲುತ್ತಿದ್ದು ಈ ಕಾರಣದಿಂದಾಗಿಯೂ ಅದನ್ನು ರದ್ದುಗೊಳಿಸಬಹುದು" ಎಂದು ಅದು ವಿವರಿಸಿದೆ.

2024ರಲ್ಲಿ ಹೈಕೋರ್ಟ್‌ನಿಂದ ಐಪಿಸಿ ಸೆಕ್ಷನ್ 498ಎ ಮತ್ತಿತರ ಸೆಕ್ಷನ್‌ಗಳಡಿ ಪತಿಯ ವಿರುದ್ಧದ ಪ್ರಕರಣ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ದೂರುದಾರೆ-ಪತ್ನಿ ಸಲ್ಲಿಸಿದ್ದ ಮೇಲ್ಮನವಿ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ.

ಹೈಕೋರ್ಟ್‌ನ ತೀರ್ಪುಗಳನ್ನು ಒಪ್ಪದ ಸುಪ್ರೀಂ ಕೋರ್ಟ್, ಮಹಿಳೆಯ ಮೇಲೆ ಆಕೆಯ ಪತಿ ಮತ್ತು ಗಂಡನ ಕಡೆಯವರು ಮೆಣಸಿನ ಪುಡಿ ಎಸೆದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಗಾಯದ ಪ್ರಮಾಣಪತ್ರ ಮಾತ್ರವಲ್ಲದೆ ನೆರೆಹೊರೆಯವರ ಹೇಳಿಕೆಯೂ ಪೂರಕವಾಗಿದೆ ಎಂದಿತು.

ಹೀಗಾಗಿ, ಕಾನೂನು ಪುರಾವೆಗಳಿಲ್ಲದ ಕಾರಣಕ್ಕೆ ವಿಚಾರಣೆಯನ್ನು ರದ್ದುಗೊಳಿಸಬಹುದಾದ ಪ್ರಕರಣ ಇದಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಇದಲ್ಲದೆ, ವೈವಾಹಿಕ ನ್ಯಾಯಾಲಯದಲ್ಲಿ ವಿಚಾರಣೆಗಳು ಬಾಕಿ ಇರುವುದರಿಂದ, ವಿಚಾರಣೆ ದುರುದ್ದೇಶಪೂರಿತವಾಗಿದೆ ಮತ್ತು ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ಹೈಕೋರ್ಟ್ ಹೇಳಿದ್ದನ್ನು ನ್ಯಾಯಾಲಯ ಟೀಕಿಸಿತು.

"ಪತ್ನಿಯ ಮೇಲಿನ ಕ್ರೌರ್ಯವನ್ನು ಒಳಗೊಂಡಿರುವ ಅಪರಾಧಗಳು ಸದಾ ವೈವಾಹಿಕ ವ್ಯಾಜ್ಯಗಳಿಂದ ಉದ್ಭವಿಸುತ್ತವೆ. ಅದರಂತೆ, ಪಕ್ಷಕಾರರ ನಡುವೆ ವೈವಾಹಿಕ ವಿಚಾರಣೆ ಬಾಕಿ ಇರುವುದರಿಂದ, ವೈದ್ಯಕೀಯ ಪುರಾವೆಗಳು ಮತ್ತು ಸ್ವತಂತ್ರ ಸಾಕ್ಷಿಯಿಂದ ಬೆಂಬಲಿತವಾದ ಹಲ್ಲೆಯನ್ನು ಆರೋಪಿಸಿ ಕ್ರಿಮಿನಲ್ ವಿಚಾರಣೆಯನ್ನು ಸಾಬೀತುಪಡಿಸುವುದು ದುರುದ್ದೇಶ ಮತ್ತು ನ್ಯಾಯಾಲಯದ ದುರುಪಯೋಗ ಎಂದು ತೀರ್ಮಾನಿಸಲು ಸಾಧ್ಯವಿಲ್ಲ" ಎಂದು ಅದು ಹೇಳಿದೆ.

ಹೀಗಾಗಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ ನ್ಯಾಯಾಲಯ ಪತಿಯ ವಿರುದ್ಧದ ವಿಚಾರಣೆ ಪುನರಾರಂಭಿಸುವಂತೆ ಆದೇಶಿಸಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Renuka_v_State_of_Karnataka_and_Anr.pdf
Preview