Justice DY Chandrachud
Justice DY Chandrachud 
ಸುದ್ದಿಗಳು

ಕಾನೂನಿನೊಂದಿಗೆ ವ್ಯವಹರಿಸುವಾಗ ಸ್ತ್ರೀವಾದಿ ಚಿಂತನೆ ಅಳವಡಿಸಿಕೊಳ್ಳಿ: ಕಾನೂನು ಪದವೀಧರರಿಗೆ ನ್ಯಾ. ಚಂದ್ರಚೂಡ್ ಸಲಹೆ

Bar & Bench

ಹೊಸ ಕಾನೂನು ಪದವೀಧರರು ಕಾನೂನಿನೊಂದಿಗೆ ವ್ಯವಹರಿಸುಔಾಗ ಸ್ತ್ರೀವಾದಿ ಚಿಂತನೆ  ಅಳವಡಿಸಿಕೊಳ್ಳಬೇಕು ಎಂದು ನ್ಯಾ. ಡಿ ವೈ ಚಂದ್ರಚೂಡ್ ಶನಿವಾರ ಸಲಹೆ ನೀಡಿದರು.

ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ (ಎನ್‌ಎಲ್‌ಯು ದೆಹಲಿ) ಒಂಬತ್ತನೇ ಘಟಿಕೋತ್ಸವದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಎಲ್ಲಾ ಚಿನ್ನದ ಪದಕಗಳನ್ನು ವಿದ್ಯಾರ್ಥಿನಿಯರೇ ಪಡೆದಿರುವುದನ್ನು ಗಮನಿಸಿದರು. ಈ ಚಿನ್ನದ ಪದಕಗಳು ನಾವು ಜೀವಿಸುತ್ತಿರುವ ಕಾಲಮಾನದ ಮತ್ತು ಭವಿಷ್ಯದ ದ್ಯೋತಕಗಳು ಎಂದರು.

“ಪದಕದ ವಿಚಾರದಲ್ಲಿ ಅವರು ತೋರಿಸಿರುವ ಸಾಮರ್ಥ್ಯವು ನಮ್ಮ ಸಮಾಜದಲ್ಲಿನ ವಾಸ್ತವಿಕ ಬದಲಾವಣೆಗಳಿಗೆ ಕಾರಣವಾಗುವಂತಹ ಪರಿಸ್ಥಿತಿಯನ್ನು ನಾವು ಹೇಗೆ ಸೃಜಿಸಲಿದ್ದೇವೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲು, ಆಲೋಚಿಸಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುವೆ," ಎಂದು ಅವರು ಹೇಳಿದರು.

Justice DY Chandrachud

ಭಾಷಣದ ಪ್ರಮುಖಾಂಶಗಳು

  • ಬಹುತೇಕ ಎಲ್ಲಾ ಪ್ರಶಸ್ತಿಗಳು ಪುರುಷರಿಂದ ಸ್ಥಾಪಿತವಾಗಿದ್ದು ಅದು ಪುರುಷ ಪ್ರಧಾನವೂ, ಅತೀವ ಪಿತೃಪ್ರಧಾನವೂ ಆಗಿದ್ದ ವೃತ್ತಿ ಮತ್ತು ಸಮಾಜಗಳ 'ಭೂತಕಾಲದ' ಸೂಚಕವಾಗಿವೆ.

  • ಯುವತಿಯರು ತೋರಿಸಿರುವ ಸಾಮರ್ಥ್ಯವನ್ನು ಭಾರತೀಯ ಸಮಾಜದಲ್ಲಿ ಮನ್ವಂತರವಾಗಿ ಮಾರ್ಪಡಿಸುವುದು ನಮ್ಮ ಕಾಲದ ಸವಾಲು.  

  • ಕಾನೂನಿಗೆ ಔಪಚಾರಿಕ ವಿಧಾನಗಳನ್ನು ಶಾಶ್ವತಗೊಳಿಸದೆ ದೈನಂದಿನ ಜೀವನಕ್ಕಾಗಿ ಕಷ್ಟಪಡುವ ಜನರ ಜೀವನವನ್ನು ತನ್ನ ಕೇಂದ್ರದಲ್ಲಿರಿಸಿಕೊಳ್ಳುವ ನ್ಯಾಯಿಕತೆಯನ್ನು ಅಳವಡಿಸಿಕೊಳ್ಳಲು ಶ್ರಮವಹಿಸಬೇಕು. ಅದೇ ನ್ಯಾಯದ ವಿಮೋಚನೆಯಾಗಿದೆ.

  • ನ್ಯಾಯಾಂಗದಲ್ಲಿನ ವೃತ್ತಿಯು ಮಹಿಳೆಯರಿಗೆ ಎದೆಗುಂದಿಸುವ, ಸವಾಲಿನ ಸಂಗತಿಯಾಗಿದೆ. ಆದರೂ ಅವರ ಅಸೀಮ ಸಮರ್ಪಣೆಯ ಮುಂದೆ ಅಡೆತಡೆಗಳು ದೊಡ್ಡದಲ್ಲ.

  • ವೃತ್ತಿ ನೀಡುವ ಕಡಿಮೆ ವೇತನದಿಂದಾಗಿ ಅನೇಕ ಮಹತ್ವಾಕಾಂಕ್ಷಿ ವೃತ್ತಿಪರರು ದಾವೆಗಳ ನಿರ್ವಹಣೆಯಿಂದ ದೂರ ಉಳಿಯುತ್ತಿರುವುದು ಕಾನೂನು ವೃತ್ತಿಯ ದುರದೃಷ್ಟಕರ ವಾಸ್ತವಾಂಶವಾಗಿದೆ. ಸ್ಥಾಪಿತ ಸಮುದಾಯಗಳಿಗೆ ಸೇರದ ವೃತ್ತಿಪರರಿಗೆ ಕಾನೂನು ಕ್ಷೇತ್ರ ಅದರಲ್ಲಿಯೂ ವಿಶೇಷವಾಗಿ ದಾವೆಯ ಕ್ಷೇತ್ರವು ಎದೆಗುಂದಿಸಬಹುದು.

  • ನ್ಯಾಯದ ಧ್ಯೇಯವನ್ನು ಮತ್ತಷ್ಟು ಹೆಚ್ಚಿಸಲು ವಕೀಲ ವೃತ್ತಿಯನ್ನು ಹೆಚ್ಚು ಒಳಗೊಳ್ಳುವಂತೆ ಮಾಡಲು ಮತ್ತು ಲಭ್ಯವಾಗಲು ಯುವ ವಕೀಲರು ಮುಂದಾಗಬೇಕು.

  • ವಕೀಲ ವೃತ್ತಿಯ ಊಳಿಗಮಾನ್ಯ ವ್ಯವಸ್ಥೆಯನ್ನು ಒಡೆದು, ಅದರ ನಂಟು ಇಲ್ಲದವರಿಗೆ  ಅದನ್ನು ತಲುಪಿಸಿ ಪ್ರಜಾಪ್ರಭುತ್ವೀಕರಣಕ್ಕೆ ಎಳೆಸಬಲ್ಲ ಅಗಾಧ ಪ್ರತಿಭೆಗಳು ದೇಶದಲ್ಲಿವೆ.

  • ನಮ್ಮ ಸಂವಿಧಾನ ಪ್ರತಿಪಾದಿಸಿರುವ ಆದರ್ಶಗಳನ್ನು ಆಧರಿಸಿ ಹೊಸ ಭವಿಷ್ಯ ರೂಪಿಸಲು ಕಾನೂನು ಒಂದು ಸಾಧನ.

  • ಒಳಿತು ಅಥವಾ ಕೆಡುಕಿನ ಸಾಧನವಾಗಿ ಕಾನೂನನ್ನು ಬಳಸಬಹುದು. ಇದು ಅದನ್ನು ನಿರ್ವಹಿಸುವ, ನಿಭಾಯಿಸುವ, ಅರ್ಥೈಸುವ ಮತ್ತು ಅದರೊಂದಿಗೆ ತೊಡಗಿಕೊಳ್ಳವವರ ನಡುವಿನ ವ್ಯತ್ಯಾಸದಲ್ಲಿದೆ.  

  • ನೀವು ಪಡೆದುದಕ್ಕಿಂತ ತುಸು ಉತ್ತಮ ರೀತಿಯಲ್ಲಿ ಕಾನೂನು ಕ್ಷೇತ್ರವನ್ನು ರೂಪಿಸಿ ಹೋಗುವ ಹೊಣೆಗಾರಿಕೆ ನಿಮ್ಮದಾಗಿರುತ್ತದೆ.