Shikhar Dhawan with India and Australia flag
Shikhar Dhawan with India and Australia flag  Facebook
ಸುದ್ದಿಗಳು

ಶಿಖರ್ ಧವನ್ ವಿಚ್ಛೇದನ ದಾವೆ: ಭಾರತದ ನ್ಯಾಯಾಲಯಗಳ ಬಗ್ಗೆ ಆಸ್ಟ್ರೇಲಿಯಾ ಕೋರ್ಟ್ ಹೇಳಿಕೆ ಅಲ್ಲಗಳೆದ ದೆಹಲಿ ನ್ಯಾಯಾಲಯ

Bar & Bench

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ರಿಕೆಟ್‌ ಪಿಚ್‌ನ ಆಚೆಗೊಂದು ಸೆಣಸಾಟ ನಡೆಯುತ್ತಿದೆ. ಅದು ನ್ಯಾಯಾಲಯಗಳಿಗೆ ಸಂಬಂಧಿಸಿದ ಸಂಘರ್ಷ. ತನ್ನ ಪರಿತ್ಯಕ್ತ ಪತ್ನಿ ಆಯೆಷಾ ಮುಖರ್ಜಿ ವಿರುದ್ಧ ಭಾರತೀಯ ಕ್ರಿಕೆಟಿಗ ಶಿಖರ್ ಧವನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ದೆಹಲಿಯ ಕೌಟುಂಬಿಕ ನ್ಯಾಯಾಲಯ ಆಸ್ಟ್ರೇಲಿಯಾದ ಕೋರ್ಟ್‌ ಒಂದು ಭಾರತೀಯ ನ್ಯಾಯಾಲಯ ಮತ್ತು ನ್ಯಾಯಾಂಗದ ಬಗ್ಗೆ ನೀಡಿರುವ ಹೇಳಿಕೆಯನ್ನು ಖಂಡಿಸಿದೆ.

ಭಾರತದಲ್ಲಿ ನ್ಯಾಯಾಲಯಗಳು ಇನ್ನೂ ಸ್ವಾತಂತ್ರ್ಯಪೂರ್ವದಲ್ಲಿವೆ ಎಂಬ ಮನೋಭಾವದಿಂದ ವಿದೇಶಿ ನ್ಯಾಯಾಲಯಗಳು ಹೊರಬರಬೇಕು ಎಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್‌ ಕುಮಾರ್‌ ಗುರುವಾರ ಹೇಳಿದರು.

“ಭಾರತೀಯ ನ್ಯಾಯಾಲಯ ಅಗತ್ಯವಿರುವ ಕಡೆಗಳಲ್ಲೆಲ್ಲಾ ವೀಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸುತ್ತಿದೆ. ಭಾರತ 1947ರಲ್ಲಿ ಸ್ವಾತಂತ್ರ್ಯ ಪಡೆದಿದ್ದು ಅಂದಿನಿಂದ ಇಂದಿನವರೆಗೆ ಜೀವನದ ಎಲ್ಲಾ ಹಂತಗಳಲ್ಲಿ ತಂತ್ರಜ್ಞಾನವನ್ನು ಅನ್ವಯಿಸುವಲ್ಲಿ ಮಹತ್ವದ ಸುಧಾರಣೆಗಳನ್ನು ತಂದಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಹೀಗಾಗಿ ಭಾರತೀಯ ನ್ಯಾಯಾಲಯಗಳು ಇನ್ನೂ ಸ್ವಾತಂತ್ರ್ಯಪೂರ್ವದಲ್ಲಿವೆ ಎಂಬ ತಪ್ಪು ಕಲ್ಪನೆಯಲ್ಲಿ ಯಾರೂ ಉಳಿಯಬಾರದು” ಎಂದು ನ್ಯಾಯಾಧೀಶರು ತಮ್ಮ ಒಂಬತ್ತು ಪುಟಗಳ ಆದೇಶದಲ್ಲಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಫೆಡರಲ್ ಸರ್ಕ್ಯೂಟ್ ಮತ್ತು ಕೌಟುಂಬಿಕ ನ್ಯಾಯಾಲಯ ಫೆಬ್ರವರಿ 2ರಂದು ದೆಹಲಿಯ ಪಟಿಯಾಲ ಹೌಸ್ ಕೌಟುಂಬಿಕ ನ್ಯಾಯಾಲಯದಲ್ಲಿ ತನ್ನ ಪತ್ನಿ ವಿರುದ್ಧ ಹೂಡಿರುವ ಮೊಕದ್ದಮೆ ಹಿಂಪಡೆದು ತನ್ನ ನ್ಯಾಯಾಂಗ ವ್ಯಾಪ್ತಿಗೆ ಸಲ್ಲಿಸುವಂತೆ ಧವನ್‌ಗೆ ಸೂಚಿಸಿತ್ತು.

ಆಯೆಷಾ ಮುಖರ್ಜಿ ಅವರು ಮೆಲ್ಬರ್ನ್ ಮೂಲದ ಕಿಕ್ ಬಾಕ್ಸರ್ ಆಗಿದ್ದು, ಜೀವನಾಂಶಕ್ಕಾಗಿ ಆಸ್ಟ್ರೇಲಿಯಾ ನ್ಯಾಯಾಲಯದ ಮೊರೆ ಹೋಗಿದ್ದರು. ಇತ್ತ ಶಿಖರ್‌ ಧವನ್‌ ವಿಚ್ಛೇದನ ಮತ್ತು ಮಗುವಿನ ಪಾಲನೆಗಾಗಿ ದೆಹಲಿಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.  

ಪೋಷಕರ ವ್ಯಾಜ್ಯ ಅಥವಾ ಪಾಲನೆ ವಿಷಯಗಳ ಬಗ್ಗೆ ಭಾರತದ ನ್ಯಾಯಾಲಯಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂದು ತಮಗೆ ತಿಳಿದಿಲ್ಲ ಎಂದಿದ್ದ ಆಸ್ಟ್ರೇಲಿಯಾ ನ್ಯಾಯಾಲಯ, ಧವನ್‌ ಮತ್ತು ಆಯೆಷಾ ಇಬ್ಬರೂ ಇಂಗ್ಲಿಷ್‌ ಬಲ್ಲವರಾಗಿರುವುದರಿಂದ ಹಾಗೂ ಧವನ್‌ ಅವರು ವೀಡಿಯೊ ಕಾನ್ಫರೆನ್ಸ್‌ ಬಳಸುವುದರಿಂದ ಅವರು ಭಾರತದ ಬದಲಿಗೆ ಆಸ್ಟ್ರೇಲಿಯಾದಲ್ಲಿ ತಮ್ಮ ದಾವೆ ಮುಂದುವರಿಸಬಹುದು ಎಂದು ಹೇಳಿತ್ತು.

ಆಸ್ಟ್ರೇಲಿಯಾ ನ್ಯಾಯಾಲಯದ ಅವಲೋಕನಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ದೆಹಲಿಯ ಕೌಟುಂಬಿಕ ನ್ಯಾಯಾಲಯ ಈ ಹೇಳಿಕೆ “ಭಾರತದ ಕಾನೂನು ಮತ್ತು ಭಾರತದಲ್ಲಿ ಪ್ರಚಲಿತದಲ್ಲಿರುವ ಪರಿಸ್ಥಿತಿಗಳ ಬಗೆ ಅನುಚಿತ ತಿಳಿವಳಿಕೆ ಇರುವುದನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದೆ. ಭಾರತದ ನ್ಯಾಯಾಲಯಗಳೂ ಇಂಗ್ಲಿಷ್‌ನಲ್ಲಿಯೇ ತೀರ್ಪು ನೀಡುತ್ತವೆ ಎಂದಿರುವ ದೆಹಲಿ ನ್ಯಾಯಾಲಯ ಪ್ರತಿವಾದಿ ಆಯೆಷಾ ಅವರು ಭಾರತದ ವಿಚಾರಣೆ ಅರ್ಥಮಾಡಿಕೊಳ್ಳಲು ಮತ್ತು ಭಾಗವಹಿಸಲು ಯಾವುದೇ ತೊಂದರೆ ಇಲ್ಲ ಎಂದಿದೆ.

ಧವನ್ ಮತ್ತು ಆಯೆಷಾ ಇಬ್ಬರೂ ಧರ್ಮದಿಂದ ಹಿಂದೂಗಳಾಗಿರುವುದರಿಂದ ಮತ್ತು ಅವರ ಮಗ ಜೋರಾವರ್ ಕೂಡ ಹಿಂದೂ ಆಗಿರುವುದರಿಂದ, ದಂಪತಿ ದೆಹಲಿಯಲ್ಲಿ ತಮ್ಮ ವ್ಯಾಜ್ಯವನ್ನು ಮುಂದುವರಿಸಬೇಕು ಎಂದು ಅದು ವಿವರಿಸಿದೆ.

ಭಾರತೀಯ ಕಾನೂನು ಮತ್ತು ಭಾರತದಲ್ಲಿ ಪ್ರಚಲಿತದಲ್ಲಿರುವ ಇತರೆ ಅಂಶಗಳ ಬಗ್ಗೆ ಮನ್ನಣೆ ನೀಡದಿರುವುದನ್ನು ಆಸ್ಟ್ರೇಲಿಯಾದ ನ್ಯಾಯಾಲಯದ ಆದೇಶ ಪ್ರತಿನಿಧಿಸುತ್ತದೆಯಾದ್ದರಿಂದ ತಾನು (ದೆಹಲಿ ನ್ಯಾಯಾಲಯ) ವಿಚಾರಣೆ ಮುಂದುವರೆಸದಂತೆ ನಿರ್ದೇಶಿಸುವ ಅದು ನೀಡಿರುವ ಆದೇಶಕ್ಕೆ ಧವನ್‌ ಒಳಪಟ್ಟಿಲ್ಲ ಎಂದು ದೆಹಲಿ ನ್ಯಾಯಾಲಯ ಹೇಳಿದೆ.