ದೆಹಲಿ ಮಧ್ಯಸ್ಥಿಕೆ ಸಪ್ತಾಹ 2024 ಉದ್ಘಾಟನಾ ಸಮಾರಂಭದಲ್ಲಿ ಸಿಜೆಐ ಚಂದ್ರಚೂಡ್
ದೆಹಲಿ ಮಧ್ಯಸ್ಥಿಕೆ ಸಪ್ತಾಹ 2024 ಉದ್ಘಾಟನಾ ಸಮಾರಂಭದಲ್ಲಿ ಸಿಜೆಐ ಚಂದ್ರಚೂಡ್  
ಸುದ್ದಿಗಳು

ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯಲ್ಲಿ ಭಾರತೀಯ ಮಧ್ಯಸ್ಥಿಕೆದಾರರಿಗೆ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ: ಸಿಜೆಐ ಚಂದ್ರಚೂಡ್

Bar & Bench

ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯಲ್ಲಿ ಭಾರತೀಯ ಮಧ್ಯಸ್ಥಿಕೆದಾರರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯದಿರುವ ಬಗ್ಗೆ ಬುಧವಾರ ಬೇಸರ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮಧ್ಯಸ್ಥಿಕೆ ಪ್ರಕ್ರಿಯೆಗಳಲ್ಲಿ ಪಕ್ಷಪಾತ ತೊಡೆದುಹಾಕಲು ಹೆಚ್ಚಿನ ವೈವಿಧ್ಯತೆ ತರುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಸುಪ್ರೀಂ ಕೋರ್ಟ್‌, ದೆಹಲಿ ಹೈಕೋರ್ಟ್‌ ಹಾಗೂ ದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಸಹಯೋಗದಲ್ಲಿ ಬುಧವಾರದಿಂದ ಮಾರ್ಚ್‌ 10ರವರೆಗೆ ಸರ್ವೋಚ್ಚ ನ್ಯಾಯಾಲಯ ಹಾಗೂ ದೆಹಲಿ ಉಚ್ಚ ನ್ಯಾಯಾಲಯದ ಆವರಣದಲ್ಲಿ ನಡೆಯುತ್ತಿರುವ ದೆಹಲಿ ಮಧ್ಯಸ್ಥಿಕೆ ಸಪ್ತಾಹ (ಡಿಎಡಬ್ಲ್ಯು) 2024ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತೀಯ ಪಕ್ಷಕಾರರು ಇಲ್ಲದ ವ್ಯಾಜ್ಯಗಳಲ್ಲಿ ಅರ್ಹ ಭಾರತೀಯ ಮಧ್ಯಸ್ಥಿಕೆದಾರರನ್ನು ಏಕೆ ನೇಮಿಸಿಕೊಳ್ಳುತ್ತಿಲ್ಲ ಎಂಬುದಕ್ಕೆ ಕಾರಣವೇನು ಎಂಬುದು ತಿಳಿಯುತ್ತಿಲ್ಲ ಎಂದು ಅವರು ತಿಳಿಸಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯಲ್ಲಿ ಮಧ್ಯಸ್ಥಿಕೆದಾರರಾಗಿ ಆಯ್ಕೆಯಾದ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ಉತ್ತರ ಅಮೆರಿಕ ಮತ್ತು ಪಶ್ಚಿಮ ಯೂರೋಪಿಗೆ ಸೇರಿದವರು.

  • ಅಂತಾರಾಷ್ಟ್ರೀಯ ವಾಣಿಜ್ಯ ಮಹಾಮಂಡಳ ನೇಮಿಸಿದ ಮಧ್ಯಸ್ಥಿಕೆದಾರರಲ್ಲಿ ಅರ್ಧದಷ್ಟು ಮಂದಿ ಐದು ದೇಶಗಳಾದ ಅಮೆರಿಕ, ಇಂಗ್ಲೆಂಡ್‌, ಸ್ವಿಜರ್‌ಲೆಂಡ್‌, ಫ್ರಾನ್ಸ್‌ ಹಾಗೂ ಜರ್ಮನಿಯಿಂದ ಬಂದವರು.

  • ಸಾಂಪ್ರದಾಯಿಕವಾಗಿ ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಶ್ವೇತ ವರ್ಣೀಯ ಮಧ್ಯವಯಸ್ಕ ತಲೆಗಳೇ ತುಂಬಿವೆ.

  • ಅಮೆರಿಕದ ರ‍್ಯಾಪ್‌ ಕಲಾವಿದ ಜೇ-ಜೀ ಒಳಗೊಂಡ ವಾಣಿಜ್ಯ ಪ್ರಕರಣವು ವೈವಿಧ್ಯತೆಯ ಕೊರತೆ ಮತ್ತು ಪಕ್ಷಪಾತದ ಆತಂಕ ಸೃಷ್ಟಿಸಿತ್ತು. ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ಆಫ್ರಿಕನ್‌ ಅಮೆರಿಕನ್ನರು ಇಲ್ಲ ಎಂದು ಅವರು ಆರೋಪಿಸಿದ್ದರು. ಅಂತಿಮವಾಗಿ ವ್ಯಾಜ್ಯ ಆಲಿಸುವ ಸಮಿತಿಗೆ ಆಫ್ರಿಕನ್‌ ಅಮೆರಿಕನ್‌ ಮಧ್ಯಸ್ಥಿಕೆದಾರರನ್ನು ನೇಮಕ ಮಾಡಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಸಂಸ್ಥೆ ಇನ್ನೂ ಹನ್ನೊಂದು ಆಫ್ರಿಕನ್‌ ಅಮೆರಿಕನ್‌ ಮಧ್ಯಸ್ಥಿಕೆದಾರರನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿತು.

  • ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಭಾರತೀಯ ಮಧ್ಯಸ್ಥಿಕೆದಾರರ ಪ್ರಾತಿನಿಧ್ಯ ಕಡಿಮೆ ಇದೆ.

  • ಭಾರತೀಯ ಪಕ್ಷಕಾರರು ಇಲ್ಲದ ವ್ಯಾಜ್ಯಗಳಲ್ಲಿ ಅರ್ಹ ಭಾರತೀಯ ಮಧ್ಯಸ್ಥಿಕೆದಾರರನ್ನು ಏಕೆ ನೇಮಿಸಿಕೊಳ್ಳುತ್ತಿಲ್ಲ ಎಂಬುದಕ್ಕೆ ಕಾರಣವೇನು ಎಂಬುದು ತಿಳಿಯುತ್ತಿಲ್ಲ.

  • ಆದರೆ ಐರೋಪ್ಯ ನಂಟು ಇಲ್ಲದ ವ್ಯಾಜ್ಯಗಳಲ್ಲಿ ಅನುಭವಿ ಯುರೋಪಿಯನ್ ಮಧ್ಯಸ್ಥಿಕೆದಾರರನ್ನು ಹೆಚ್ಚಾಗಿ ನೇಮಿಸಲಾಗುತ್ತದೆ.

  • ಮಧ್ಯಸ್ಥಿಕೆ ಕ್ಷೇತ್ರದಲ್ಲಿ ವೈವಿಧ್ಯತೆ ಹೆಚ್ಚಾದರೆ ಮಧ್ಯಸ್ಥಿಕೆ ವೇದಿಕೆಗಳು ತಟಸ್ಥ ವೇದಿಕೆಗಳಾಗುತ್ತವೆ.

  • ಲಂಡನ್, ಸಿಂಗಪೋರ್, ಪ್ಯಾರಿಸ್, ಜಿನೀವಾ, ಹಾಂಗ್‌ಕಾಂಗ್‌, ನ್ಯೂಯಾರ್ಕ್ ಹಾಗೂ ಜ್ಯೂರಿಚ್‌ನ ಅಂತಾರಾಷ್ಟ್ರೀಯ ವಾಣಿಜ್ಯ ಮಹಾಮಂಡಳ ಸೇರಿದಂತೆ ಅಂತಾರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆಯ "ಸುರಕ್ಷಿತ ಸ್ಥಳಗಳನ್ನು" ಮೀರಿ ಮಧ್ಯಸ್ಥಿಕೆ ಸೌಲಭ್ಯ ಹಿಗ್ಗಬೇಕಿದೆ.

  • ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಬಳಕೆ ಪಕ್ಷಪಾತವನ್ನು ಕಡಿಮೆ ಮಾಡುತ್ತದೆ. ಆದರೆ ಅಂತಹ ವಿಧಾನವನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕು.

ಸಿಂಗಪೋರ್‌ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜುಡಿತ್ ಪ್ರಕಾಶ್ ಮತ್ತು ದೆಹಲಿ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.