Indian Army
Indian Army  
ಸುದ್ದಿಗಳು

ಸುಪ್ರೀಂನಿಂದ ನ್ಯಾಯಾಂಗ ನಿಂದನೆ ಎಚ್ಚರಿಕೆ ಬೆನ್ನಿಗೇ 11 ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಕಮಿಷನ್‌ ನೀಡಿದ ಭಾರತೀಯ ಸೇನೆ

Bar & Bench

ತನ್ನ ಹಿಂದಿನ ಆದೇಶದ ಅನ್ವಯ ಹನ್ನೊಂದು ಮಹಿಳಾ ಸೇನಾ ಅಧಿಕಾರಿಗಳಿಗೆ ಶಾಶ್ವತ ಕಮಿಷನ್‌ ಸೌಲಭ್ಯ ನೀಡಲು ವಿಫಲವಾದ ಭಾರತೀಯ ಸೇನೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಮುಂದಾಗುವ ಸೂಚನೆಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ನೀಡಿದ ಬೆನ್ನಿಗೇ ಹನ್ನೊಂದು ಮಂದಿ ಮಹಿಳಾ ಅಧಿಕಾರಿಗಳಿಗೆ ನಿವೃತ್ತಿಯವರೆಗೆ ಸೇವೆಯ ಅವಕಾಶ ಕಲ್ಪಿಸುವ ಶಾಶ್ವತ ಕಮಿಷನ್ ಸೌಲಭ್ಯ ಕಲ್ಪಿಸಲು ಸಿದ್ಧವೆಂದು ಸೇನೆಯು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನ್ಯಾ. ಡಿ ವೈ ಚಂದ್ರಚೂಡ್‌ ಮತ್ತು ನ್ಯಾ. ಎ ಎಸ್‌ ಬೋಪಣ್ಣ ನೇತೃತ್ವದ ಪೀಠದ ಮುಂದೆ ಇಂದು ಪ್ರಕರಣದ ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಮೂರ್ತಿಗಳು ಮಹಿಳಾ ಸೇನಾಧಿಕಾರಿಗಳಿಗೆ ಶಾಶ್ವತ ಕಮಿಷನ್‌ ನೀಡಲು ಸೂಚಿಸಿದ್ದ ತನ್ನ ಹಿಂದಿನ ಆದೇಶವನ್ನು ಅನುಷ್ಠಾನಗೊಳಿಸಲು ವಿಫಲವಾಗಿರುವ ಸೇನೆಯ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಮುಂದಾಗುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲಿಯೇ ಸೇನೆಯನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಸಂಜಯ್‌ ಜೈನ್‌ ಅವರು ಸೇನೆಯು ಹನ್ನೊಂದು ಅಧಿಕಾರಿಗಳಿಗೆ ಶಾಶ್ವತ ಕಮಿಷನ್‌ ನೀಡಲು ಸಿದ್ಧವಾಗಿರುವುದಾಗಿ ತಿಳಿಸಿ ಈ ಕುರಿತು ತಾವು ಸೇನೆಯಿಂದ ಸೂಚನೆ ಪಡೆಯಬೇಕಿರುವುದಾಗಿ ತಿಳಿಸಿದರು. ಇದಕ್ಕೆ ಅನುಮಿತಿಸಿದ ನ್ಯಾಯಾಲಯವು ಮಧ್ಯಾಹ್ನಕ್ಕೆ ಪ್ರಕರಣ ಮುಂದೂಡಿತು.

ದೈಹಿಕ ದೃಢತೆಗೆ ಸಂಬಂಧಿಸಿದ ಮಾನದಂಡಗಳನ್ನು ಅಸಮಾನ ರೀತಿಯಲ್ಲಿ ಅನ್ವಯಿಸಿದ್ದಕ್ಕಾಗಿ ಶಾಶ್ವತ ಕಮಿಷನ್‌ (ಪಿಸಿ) ಸೌಲಭ್ಯದಿಂದ ಹೊರಗುಳಿದಿದ್ದ ಮಹಿಳಾ ಸೇನಾಧಿಕಾರಿಗಳಿಗೆ ಆ ಸೌಲಭ್ಯ ಒದಗಿಸುವಂತೆ ಸುಪ್ರೀಂಕೋರ್ಟ್‌ ಸೇನೆಗೆ ಇತ್ತೀಚೆಗೆ ಆದೇಶಿಸಿತ್ತು.

ಶೇಪ್‌ 1 ದೈಹಿಕ ಸಾಮರ್ಥ್ಯದ ಮಾನದಂಡಗಳನ್ನು ಅನ್ವಯವಾಗದಿರುವ ಆಧಾರದ ಮೇಲೆ ನವೆಂಬರ್ 2020 ರಲ್ಲಿ ಶಾಶ್ವತ ಕಮಿಷನ್‌ನಿಂದ ಹೊರಗುಳಿದ ಮಹಿಳಾ ಅಧಿಕಾರಿಗಳಿಗೆ ಸೇವೆಯಲ್ಲಿ ಮುಂದುವರೆಯಲು ಅಗತ್ಯ ದೈಹಿಕ ಸಾಮರ್ಥ್ಯದ ಮಾನದಂಡಗಳನ್ನು ಪೂರೈಸುವವರೆಗೆ ಅವರನ್ನು ಹೊರಗಿಡದೆ, ಶಾಶ್ವತ ಕಮಿಷನ್ ಪಡೆಯಾಗಿ ಮುಂದುವರೆಸಬೇಕು ಎಂದು ಅದು ತೀರ್ಪು ನೀಡಿತ್ತು. ನವೆಂಬರ್‌ 1, 2021ರ ವೇಳೆಗೆ 39 ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಕಮಿಷನ್‌ ನೀಡಲು ಸೂಚಿಸಿತ್ತು.