Supreme Court, Election Commission
Supreme Court, Election Commission  
ಸುದ್ದಿಗಳು

ಚುನಾವಣೆಗೆ ಸ್ಪರ್ಧಿಸುವ ಹಕ್ಕನ್ನು ಆಗ್ರಹಿಸುವಂತಿಲ್ಲ: ₹ 1 ಲಕ್ಷ ದಂಡ ವಿಧಿಸಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Bar & Bench

ವ್ಯಕ್ತಿಯೊಬ್ಬ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಹಕ್ಕುಸಾಧನೆಯಾಗಿ ಆಗ್ರಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತಿಳಿಸಿದ್ದು ನಾಮಪತ್ರ ಸಲ್ಲಿಸುವಾಗ ಅರ್ಜಿದಾರರ ಹೆಸರನ್ನು ಸೂಚಿಸುವವರು ಇಲ್ಲದಿದ್ದರೂ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕೋರಿದ್ದಕ್ಕಾಗಿ ಅವರಿಗೆ ₹ 1 ಲಕ್ಷ ದಂಡ ವಿಧಿಸಿತು [ವಿಶ್ವನಾಥ್ ಪ್ರತಾಪ್ ಸಿಂಗ್ ಮತ್ತು ಭಾರತ ಚುನಾವಣಾ ಆಯೋಗ ನಡುವಣ ಪ್ರಕರಣ].

ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಮೂಲಭೂತ ಹಕ್ಕು ಅಥವಾ ಸಾಮಾನ್ಯ ಕಾನೂನಿನ ಹಕ್ಕಲ್ಲ, ಬದಲಿಗೆ ಅದು ಶಾಸನಾತ್ಮಕವಾಗಿ ನೀಡಲಾಗಿರುವ ಹಕ್ಕು ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಪುನರುಚ್ಚರಿಸಿತು.

ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಮೂಲಭೂತ ಹಕ್ಕು ಅಥವಾ ಸಾಮಾನ್ಯ ಕಾನೂನಿನ ಹಕ್ಕು ಅಲ್ಲ, ಆದರೆ ಅದು ಶಾಸನ ನೀಡುವ ಹಕ್ಕಾಗಿದೆ ಎಂದು ಪುನರುಚ್ಚರಿಸಿತು.

ಆದ್ದರಿಂದ, 1950ರ ಜನಪ್ರತಿನಿಧಿ ಕಾಯಿದೆ ಹಾಗೂ 1961ರ ಚುನಾವಣಾ ನಿಯಮಾವಳಿ ಅಡಿಯಲ್ಲಿ ಅಭ್ಯರ್ಥಿಯ ಹೆಸರನ್ನು ನಾಮಪತ್ರ ಭರ್ತಿ ಮಾಡುವಾಗ ಸೂಚಿಸಬೇಕಾದದ್ದು ಅವರ ಮೂಲಭೂತ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೈಕೋರ್ಟ್‌ಗೆ ಸಲ್ಲಿಸಿದ್ದ ರಿಟ್‌ ಅರ್ಜಿ ಸಂಪೂರ್ಣ ತಪ್ಪು ಗ್ರಹಿಕೆಗಳಿಂದ ಕೂಡಿದ್ದು ಹೀಗಾಗಿ ಈಗಿನ ವಿಶೇಷ ಅನುಮತಿ ಅರ್ಜಿ ಕೂಡ ತಪ್ಪಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಮ್ಮ ಹೆಸರನ್ನು ಸೂಚಿಸುವವರು ಇಲ್ಲದ ಕಾರಣಕ್ಕಾಗಿ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಅರ್ಜಿದಾರರು ದೂರಿದ್ದರು. ದೆಹಲಿ ಹೈಕೋರ್ಟ್‌ ಕೂಡ ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಅವರು ಮೂಲಭೂತ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ವಾದಿಸಿದ್ದರು.

ಲೋಕಸಭೆ ಅಥವಾ ವಿಧಾನಸಭೆಯ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕು ಕೆಲವು ಸಾಂವಿಧಾನಿಕ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಜೊತೆಗೆ ಸಂಸತ್ತು ಕಾನೂನು ಜಾರಿಗೆ ತಂದು ಮತ್ತಷ್ಟು ನಿರ್ಬಂಧ ವಿಧಿಸಬಹುದು ಎಂದು ರಾಜ್‌ಬಾಲಾ ಮತ್ತು ಹರ್ಯಾಣ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಅದು ಉಲ್ಲೇಖಿಸಿತು. ಈ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸಿದ ಪೀಠ ನಾಲ್ಕು ವಾರಗಳಲ್ಲಿ ಸುಪ್ರೀಂ ಕೋರ್ಟ್‌ನ ಕಾನೂನು ನೆರವು ಸಮಿತಿಗೆ ದಂಡದ ಮೊತ್ತ ಪಾವತಿಸುವಂತೆ ಆದೇಶಿಸಿತು.