BJP MLA Bharath Shetty and Bengaluru city civil court 
ಸುದ್ದಿಗಳು

ರಾಹುಲ್‌ ಗಾಂಧಿ ವಿರುದ್ಧ ಪ್ರಚೋದನಕಾರಿ ಭಾಷಣ: ಬಿಜೆಪಿ ಶಾಸಕ ಭರತ್‌ ಶೆಟ್ಟಿಗೆ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

Bar & Bench

ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ನಿಂದನಾತ್ಮಕ ಭಾಷಣ ಮಾಡಿರುವುದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವೈ ಭರತ್‌ ಶೆಟ್ಟಿ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಶಾಸಕ ಭರತ್‌ ಶೆಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಠಾಣೆಯ ಪೊಲೀಸರು ಭರತ್‌ ಶೆಟ್ಟಿ ಅವರನ್ನು ಬಂಧಿಸಿದರೆ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಭರತ್‌ ಶೆಟ್ಟಿ ಅವರು ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌, ಒಬ್ಬರ ಭದ್ರತೆ ಒದಗಿಸಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷ್ಯ ಹಾಳುಗೆಡವಬಾರದು. ತನಿಖಾಧಿಕಾರಿ ವಿಚಾರಣೆಗೆ ಸೂಚಿಸಿದಾಗ ಹಾಜರಾಗಬೇಕು ಎಂದು ನ್ಯಾಯಾಲಯವು ಷರತ್ತುಗಳನ್ನು ವಿಧಿಸಿದೆ.

ಪ್ರಧಾನ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರಿಗೆ ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅರುಣ್‌ ಶ್ಯಾಮ್‌ ವಾದಿಸಿದರು.

ಪ್ರಕರಣದ ಹಿನ್ನೆಲೆ: ಜುಲೈ 8ರ ಬೆಳಿಗ್ಗೆ ಕಾವೂರು ಜಂಕ್ಷನ್‌ನಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಭರತ್‌ ಶೆಟ್ಟಿ ಅವರು ರಾಹುಲ್‌ ಗಾಂಧಿ ಒಬ್ಬ ಹುಚ್ಚ. ಅವನನ್ನು ಸಂಸತ್‌ನಿಂದ ಹೊರಹಾಕಬೇಕು. ಅವನು ಮಾತನಾಡುವ ಶೈಲಿ ನೋಡಿದರೆ ಹಿಂದೂ ಆದ ನಾನು ಲೋಕಸಭೆಗೆ ಹೋಗಿ ಅವರ ಕೆನ್ನೆಗೆ ಎರಡು ಹೊಡೆಯಬೇಕು ಎನಿಸುತ್ತದೆ. ಹಾಗೆ ಮಾಡಿದರೆ ಮಾತ್ರ ಆತನಿಗೆ ಬುದ್ದಿ ಬರುವುದು. ನಾನೊಬ್ಬ ಹಿಂದೂವಾಗಿದ್ದು, ಯಾರಾದರೂ ಹಿಂದೂ ವಿಚಾರದಲ್ಲಿ ಮಾತನಾಡಿದರೆ ಅವರಿಗೆ ತಕ್ಕ ಬುದ್ದಿ ಕಲಿಸಲು ನಾವೆಲ್ಲಾ ಒಂದಾಗಬೇಕು. ಅಗತ್ಯಬಿದ್ದರೆ ಶಸ್ತ್ರಾಸ್ತ್ರ ಹಿಡಿದು ಹೋರಾಟ ಮಾಡಲು ನಾವೆಲ್ಲಾ ಸಿದ್ಧರಾಗಬೇಕು ಎಂದು ಹೇಳಿದ್ದು ವರದಿಯಾಗಿತ್ತು.

ಅಲ್ಲದೇ, ರಾಹುಲ್‌ ಗಾಂಧಿ ಬೀದಿ ನಾಯಿಯಾಗಿದ್ದು, ಅದರಷ್ಟೂ ಬುದ್ದಿ ಆತನಿಗೆ ಇಲ್ಲ. ಬಿಜೆಪಿ ಕಾರ್ಯಕರ್ತರು ಮನಸ್ಸು ಮಾಡಿದರೆ ಕಾಂಗ್ರೆಸ್‌ ಅನ್ನು ನಾಶ ಮಾಡಲು ಸಿದ್ಧರಿದ್ದೇವೆ. ಹಿಂದುತ್ವದ ವಿಚಾರ ಮಾತನಾಡಿದರೆ ಶಸ್ತ್ರಾಸ್ತ್ರ ಉಪಯೋಗಿಸಿ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ. ನಮ್ಮ ಮೇಲೆ ಪ್ರಕರಣದ ದಾಖಲಿಸಿದ ಮಾತ್ರಕ್ಕೆ ಹೆದರಲ್ಲ ಎಂದಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ವೇದವ್ಯಾಸ್‌ ಕಾಮತ್‌, ಮಂಗಳೂರು ಸಂಸದ ಬ್ರಿಜೇಶ್‌ ಚೌಟ ಹಾಗೂ ಕಾರ್ಪೊರೇಟರ್‌ಗಳು ಭರತ್‌ ಶೆಟ್ಟಿ ಭಾಷಣಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಮಂಗಳೂರಿನ ಅನಿಲ್‌ ಕುಮಾರ್‌ ಅವರು ಕಾವೂರು ಠಾಣೆಯಲ್ಲಿ ದೂರು ನೀಡಿದ್ದರು.

ಇದನ್ನು ಆಧರಿಸಿ, ಭರತ್‌ ಶೆಟ್ಟಿ ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳಾದ 351(3) (ಕ್ರಿಮಿನಲ್‌ ಬೆದರಿಕೆ), 353 (ಪ್ರಚೋದನೆ) ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ.