Karnataka High Court, Amazon 
ಸುದ್ದಿಗಳು

ಅಸಲಿ ಉತ್ಪನ್ನ ಖರೀದಿಸಿ, ನಕಲಿ ಉತ್ಪನ್ನ ಮರಳಿಸಿ ಅಮೆಜಾನ್‌ಗೆ ₹69 ಲಕ್ಷ ವಂಚನೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

“ಪ್ರಕರಣದಲ್ಲಿ ದಿಗ್ಭ್ರಮೆ ಹುಟ್ಟಿಸುವ ವಿಚಾರಗಳು ಅಡಕವಾಗಿವೆ. ಅವುಗಳನ್ನು ಪರಿಗಣಿಸಬೇಕಿದೆ. ಇದೊಂದು ಚತುರ ವಂಚನಾ ವಿಧಾನ” ಎಂದು ಪೀಠ ಹೇಳಿದೆ.

Bar & Bench

ಇ-ಕಾಮರ್ಸ್‌ ಕಂಪನಿ ಅಮೆಜಾನ್‌ನಿಂದ ಅಸಲಿ ಉತ್ಪನ್ನಗಳನ್ನು ಖರೀದಿಸಿ, ನಕಲಿ ವಸ್ತುಗಳನ್ನು ಹಿಂದಿರುಗಿಸುವ ಮೂಲಕ ₹69 ಲಕ್ಷ ಮರುಪಾವತಿ ಪಡೆದು ವಂಚಿಸಿದ ಆರೋಪದ ಸಂಬಂಧ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಆದೇಶ ಕಾಯ್ದಿರಿಸಿದೆ.

ಬೆಂಗಳೂರಿನ ಸೌರೀಷ್‌ ಬೋಸ್‌ ಮತ್ತು ದೀಪನ್ವಿತ ಘೋಷ್‌ ಅವರು ತಮ್ಮ ವಿರುದ್ಧ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಪ್ರಕರಣದಲ್ಲಿ ದಿಗ್ಭ್ರಮೆ ಹುಟ್ಟಿಸುವ ವಿಚಾರಗಳು ಅಡಕವಾಗಿವೆ. ಅವುಗಳನ್ನು ಪರಿಗಣಿಸಬೇಕಿದೆ. ಇದೊಂದು ಚತುರ ವಂಚನಾ ವಿಧಾನ” ಎಂದು ಪೀಠ ಹೇಳಿದೆ.

“ಹಲವು ವರ್ಷಗಳಿಂದ ಅಮೆಜಾನ್‌ನಿಂದ ಅಸಲಿ ಉತ್ಪನ್ನಗಳನ್ನು ಖರೀದಿಸಿ, ನಕಲಿ ಉತ್ಪನ್ನ ಹಿಂದಿರುಗಿಸಿ ಮರು ಪಾವತಿ ಪಡೆಯುತ್ತಿರುವ ಕಾರ್ಯ ವಿಧಾನವನ್ನು ಕಂಪನಿಯ ಉದ್ಯೋಗಿ ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ 2017ರಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 420 (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಡಿ ಪ್ರಕರಣ ದಾಖಲಿಸಲಾಗಿದ್ದು, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸಂಜ್ಞೇ ಸ್ವೀಕರಿಸಿರುವುದನ್ನು ರದ್ದುಪಡಿಸಬೇಕು” ಎಂದು ಅರ್ಜಿದಾರರು ಕೋರಿದ್ದರು.

ಅಮೆಜಾನ್‌ನಲ್ಲಿ ದುಬಾರಿ ಬೆಲೆಯ ಉತ್ಪನ್ನಗಳನ್ನು ಖರೀದಿಸಿ ಪಡೆಯುತ್ತಿದ್ದ ಬೋಸ್‌, ಅವುಗಳಿಗೆ ತನ್ನ ಬ್ಯಾಂಕ್‌ ಖಾತೆಯಿಂದ ಹಣ ಪಾವತಿಸುತ್ತಿದ್ದರು. ಅದು ತನ್ನ ವಿಳಾಸಕ್ಕೆ ತಲುಪಿದ ಬಳಿಕ 24 ಗಂಟೆಗಳಲ್ಲಿ ಅವುಗಳನ್ನು ಅಸಲಿ ಉತ್ಪನ್ನದ ಬಾಕ್ಸ್‌ಗಳಿಗೆ ನಕಲಿ ಉತ್ಪನ್ನಗಳನ್ನು ಇಟ್ಟು ಅಮೆಜಾನ್‌ಗೆ ಮರಳಿಸಿ, ನಗದು ಮರುಪಾವತಿ ಪಡೆಯುತ್ತಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಪ್ರಾಸಿಕ್ಯೂಷನ್‌ ಪರ ವಕೀಲರು “ಕೆಲವೊಮ್ಮೆ ಉತ್ಪನ್ನಗಳನ್ನ ಮರಳಿಸುವಾಗ ಘೋಷ್‌ ಅವರ ನೋಂದಾಯಿತ ಮನೆಯ ವಿಳಾಸ ಇರುತ್ತಿತ್ತು. ಕೆಲವೊಮ್ಮೆ ಬೆಂಗಳೂರಿನ ಬೇರೆ ಬೇರೆ ಕಡೆಯ ವಿಳಾಸ ನಮೂದಿಸಲಾಗುತ್ತಿತ್ತು” ಎಂದರು.

ಅರ್ಜಿದಾರರ ಪರ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು “ಅರ್ಜಿದಾರರನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಿಜರೂಪದಲ್ಲಿ ಅಮೆಜಾನ್‌ ಉದ್ಯೋಗಿಯೇ ಅಪರಾಧಿಯಾಗಿದ್ದಾನೆ. ಉತ್ಪನ್ನಗಳನ್ನು ಮರಳಿಸಿದ್ದಕ್ಕಾಗಿ ಬೋಸ್‌ನ ಫೆಡರಲ್‌ ಬ್ಯಾಂಕ್‌ ಖಾತೆಗೆ ಅಮೆಜಾನ್‌ ₹69 ಲಕ್ಷ ಪಾವತಿಸಿದೆ” ಎಂದರು.

ಆಗ ಪೀಠವು “ಅಮೆಜಾನ್‌ನಿಂದ ಆರೋಪಿಗಳು ಏಕೆ ಹಣ ಸ್ವೀಕರಿಸಿದ್ದಾರೆ?” ಎಂದಿತು.

ಇದಕ್ಕೆ ಪಾಷಾ ಅವರು “ಅರ್ಜಿದಾರರು ಅಮೆಜಾನ್‌ನಲ್ಲಿ ಯಾವುದೇ ಉತ್ಪನ್ನ ಖರೀದಿಸಿಲ್ಲ ಅಥವಾ ಅವುಗಳನ್ನು ಹಿಂದಿರುಗಿಸಿಲ್ಲ. ಇಲ್ಲಿ ಅಮೆಜಾನ್‌ ಉದ್ಯೋಗಿಯಿಂದ ಲೋಪವಾಗಿದೆ” ಎಂದರು.

ಆಗ ಪೀಠವು “ಘೋಷ್‌ಗೆ ಅಮೆಜಾನ್‌ ಹಣ ಹಿಂದಿರುಗಿಸಲು ಹೇಳಿ” ಎಂದಿತು. ಇದಕ್ಕೆ ಪಾಷಾ ಅವರು “ಮರು ತನಿಖೆ ಮಾಡಲು ಪೊಲೀಸರಿಗೆ ನಿರ್ದೇಶಿಸಬೇಕು” ಎಂದರು.

ಅಂತಿಮವಾಗಿ ಪೀಠವು “ಮರು ತನಿಖೆಗೆ ಆದೇಶಿಸುವುದಿಲ್ಲ. ಆರೋಪಿಗಳು ವಿಚಾರಣೆ ಎದುರಿಸಲಿ” ಎಂದು ಮೌಖಿಕವಾಗಿ ಹೇಳಿ, ಆದೇಶ ಕಾಯ್ದಿರಿಸಿತು.