ಎನ್ ಚಂದ್ರಬಾಬು ನಾಯ್ಡು ಮತ್ತು ಸುಪ್ರೀಂ ಕೋರ್ಟ್ ಎನ್ ಚಂದ್ರಬಾಬು ನಾಯ್ಡು (ಫೇಸ್‌ಬುಕ್‌)
ಸುದ್ದಿಗಳು

ಒಳ ವರ್ತುಲ ರಸ್ತೆ ಹಗರಣ: ಚಂದ್ರಬಾಬು ನಾಯ್ಡುಗೆ ನೀಡಿದ್ದ ನಿರೀಕ್ಷಣಾ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ಒಳ ವರ್ತುಲ ರಸ್ತೆ ಜೋಡಣೆಗೆ ಸಂಬಂಧಿಸಿದ ಕಾಮಗಾರಿ ಸೇರಿದಂತೆ ಆಂಧ್ರ ಪ್ರದೇಶ ರಾಜಧಾನಿ ಅಮರಾವತಿ ಕುರಿತು ಬೃಹತ್‌ ಯೋಜನೆ ರೂಪಿಸುವ ವೇಳೆ ನಾಯ್ಡು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

Bar & Bench

ಒಳ ವರ್ತುಲ ರಸ್ತೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.

ಪ್ರಕರಣದಲ್ಲಿ ಸಹ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಆಂಧ್ರಪ್ರದೇಶ ಸರ್ಕಾರದ ಮನವಿ ತಿರಸ್ಕರಿಸಿತು.

ಆದರೂ ತಾನು ನೀಡಿರುವ ನಿರೀಕ್ಷಣಾ ಜಾಮೀನು ಆದೇಶ, ಪ್ರಕರಣದ ತನಿಖೆ ನಡೆಸಲು ಅಡ್ಡಿಯಾಗುವುದಿಲ್ಲ. ನಾಯ್ಡು ಅವರು ತನಿಖೆಗೆ ಸಹಕರಿಸದಿದ್ದರೆ ನಿರೀಕ್ಷಣಾ ಜಾಮೀನು ರದ್ದತಿಗಾಗಿ ಆಂಧ್ರ ಸರ್ಕಾರ ಅರ್ಜಿ ಸಲ್ಲಿಸಬಹುದು ಎಂದು ಅದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ

ಒಳ ವರ್ತುಲ ರಸ್ತೆ ಜೋಡಣೆಗೆ ಸಂಬಂಧಿಸಿದ ಕಾಮಗಾರಿ ಸೇರಿದಂತೆ ಆಂಧ್ರ ಪ್ರದೇಶ ರಾಜಧಾನಿ ಅಮರಾವತಿ ಕುರಿತು ಬೃಹತ್‌ ಯೋಜನೆ ರೂಪಿಸುವ ವೇಳೆ ನಾಯ್ಡು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ನಾಯ್ಡು ಅವರು ಕೈಗೊಂಡ ಯೋಜನೆಗಳು ಅವರಿಗೆ ಸಂಬಂಧಿಸಿದ ನಿರ್ದಿಷ್ಟ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುತ್ತವೆ ಎಂದು ಆರೋಪಿಸಲಾಗಿತ್ತು.

ಕೌಶಲ್ಯ ಅಭಿವೃದ್ಧಿ ಹಗರಣದಲ್ಲಿ ಬಂಧನಕ್ಕೊಳಗಾದ ಸಮಯದಿಂದ ತಾನು ಬಂಧಿತನಾಗಿದ್ದೇನೆ ಎಂದು ನಾಯ್ಡು ಅವರು ಈ ಹಿಂದೆ ಸಲ್ಲಿಸಿದ್ದ ನಿಯಮಿತ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿತ್ತು. ಆದರೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ನೀಡಿತ್ತು. ಬಳಿಕ ಹೈಕೋರ್ಟ್‌ ಕದ ತಟ್ಟಿದ್ದ ಅವರಿಗೆ ಜನವರಿ 10ರಂದು ನಿರೀಕ್ಷಣಾ ಜಾಮೀನು ದೊರೆತಿತ್ತು. ಇದನ್ನು ಪ್ರಶ್ನಿಸಿ ಆಂಧ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಕೌಶಲ್ಯ ಅಭಿವೃದ್ಧಿ ಹಗರಣದ ಪ್ರಕರಣದಲ್ಲಿ ನಾಯ್ಡು ಅವರಿಗೆ ಹೈಕೋರ್ಟ್‌ ಕಳೆದ ವರ್ಷ ನವೆಂಬರ್‌ನಲ್ಲಿ ಜಾಮೀನು ನೀಡಿತ್ತು.

ಆಂಧ್ರ ಸರ್ಕಾರದ ಪರವಾಗಿ ಹಿರಿಯ ವಕೀಲ ರಂಜಿತ್ ಕುಮಾರ್, ನಾಯ್ಡು ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಮತ್ತು ವಕೀಲ ಮಹಫೂಜ್ ಅಹ್ಸಾನ್ ನಜ್ಕಿ ವಾದ ಮಂಡಿಸಿದ್ದರು.