Justice Bechu Kurian Thomas 
ಸುದ್ದಿಗಳು

ಪೋಕ್ಸೊ ಸಂತ್ರಸ್ತರಲ್ಲಿ ಸತ್ಯ ನುಡಿಯುವ ವಿಶ್ವಾಸವನ್ನು ಮೂಡಿಸಿ: ನ್ಯಾ. ಬೆಚು ಥಾಮಸ್

ಕ್ಲಿನಿಕ್ ಸಿಬ್ಬಂದಿಯೊಬ್ಬರ ವಿರುದ್ಧ ಮಗು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದಾಗ ಆ ಮಗುವಿನ ಪೋಷಕರು ಆಕೆಯನ್ನು ನಂಬಲಿಲ್ಲ ಅಥವಾ ಬೆಂಬಲಿಸಲಿಲ್ಲ ಎಂಬ ಘಟನೆಯನ್ನು ನ್ಯಾಯಮೂರ್ತಿಗಳು ವಿವರಿಸಿದರು.

Bar & Bench

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ) ಅಡಿ ದಾಖಲಾದ ಪ್ರಕರಣದಲ್ಲಿ ಆತ್ಮವಿಶ್ವಾಸ ತುಂಬುವ ಅಗತ್ಯವಿದ್ದು ಇದರಿಂದ ಮಗು ಸತ್ಯ ನುಡಿದು ತಪ್ಪಿತಸ್ಥರನ್ನು ಮಾತ್ರ ಗುರುತಿಸುವಂತಾಗಿ ಅವರಿಗೆ ಶಿಕ್ಷೆಯಾಗುತ್ತದೆ ಎಂದು ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಇತ್ತೀಚೆಗೆ ಅಭಿಪ್ರಾಯಪಟ್ಟರು.

ಪೋಕ್ಸೊ ಕಾಯಿದೆಯಡಿಯ ಸಂತ್ರಸ್ತ ಕೇಂದ್ರಿತ ವಿಧಾನದ ಹಿಂದಿನ ಉದ್ದೇಶ ಮತ್ತು ಗುರಿ ಇದೇ ಆಗಿದೆ ಎಂದು ಅವರು ಹೇಳಿದರು.

ಮಕ್ಕಳನ್ನು ಒಳಗೊಂಡ ಪ್ರಕರಣಗಳ ನ್ಯಾಯದಾನ ವ್ಯವಸ್ಥೆಯಲ್ಲಿ ವಿವಿಧ ಭಾಗೀದಾರರನ್ನು ಸಂವೇದನಾಶೀಲಗೊಳಿಸಲು ಕೇರಳ ಹೈಕೋರ್ಟ್ ಇತ್ತೀಚೆಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ನ್ಯಾ. ಥಾಮಸ್ ಅವರು 'ಪೋಕ್ಸೊ ಕಾಯಿದೆಯಡಿ ಸಂತ್ರಸ್ತ ಕೇಂದ್ರಿತ ವಿಧಾನʼ ಎಂಬ ವಿಷಯದ ಕುರಿತು ಮಾತನಾಡಿದರು.

ಘಟನೆಯ ಸಂದರ್ಭದಲ್ಲಿ ಸಂತ್ರಸ್ತೆಯ ತಾಯಿ ಹಾಜರಿದ್ದರೂ, ಕ್ಲಿನಿಕ್‌ನ ಸಿಬ್ಬಂದಿಯೊಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎತ್ತಿದಾಗ ಮಗುವಿನ ಪೋಷಕರು ಅವಳನ್ನು ನಂಬದ ಅಥವಾ ಬೆಂಬಲಿಸದ ಉದಾಹರಣೆಯೊಂದನ್ನು ನ್ಯಾಯಮೂರ್ತಿಗಳು ತಮ್ಮ ಭಾಷಣದಲ್ಲಿ ವಿವರಿಸಿದರು.

“ಈ ಶೋಷಕರು ಕೃತ್ಯ (ಲೈಂಗಿಕ ಶೋಷಣೆ) ಎಸಗುವ ರೀತಿ- ನೀತಿಯನ್ನು ಊಹಿಸಲೂ ಸಾಧ್ಯವಿಲ್ಲ. ಇದು ಲೈಂಗಿಕ ದೌರ್ಜನ್ಯಕ್ಕೆ ತುತ್ತಾದವರಿಗೆ ಮಾತ್ರ ಅರಿವಾಗುತ್ತದೆ” ಎಂದರು.

ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ಕುರಿತಾಗಿ ಅರಿಸುವ ಮೂಡಿಸುವ ಸಲುವಾಗಿ, ಸಾರ್ವಜನಿಕ ಇಲ್ಲವೇ ಖಾಸಗಿ ಮಾಧ್ಯಮಗಳಿಗೆ ಪರವಾನಗಿ ನೀಡುವ ವೇಳೆ ಲೈಂಗಿಕ ಜಾಗೃತಿ ಅಭಿಯಾನಕ್ಕೆ ಒಂದು ನಿಮಿಷ ಮೀಸಲಿಡುವಂತೆ ಮಾಧ್ಯಮ ಸಂಸ್ಥೆಗಳಿಗೆ ಸರ್ಕಾರ ಷರತ್ತು ವಿಧಿಸಬೇಕು. ಇದರಿಂದ ದೊಡ್ಡಮಟ್ಟದಲ್ಲಿ ಸಮುದಾಯಕ್ಕೆ ಜಾಗೃತಿ ಮೂಡಿಸಿದಂತಾಗುತ್ತದೆ ಎಂದು ಅವರು ಹೇಳಿದರು.

ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಮತ್ತು ಪೋಕ್ಸೊ ಕಾಯಿದೆ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಜಾರಿಗೊಳಿಸುವಂತೆ ತಾವು ನೀಡಿದ ತೀರ್ಪಗಳನ್ನು ಈ ಸಂದರ್ಭದಲ್ಲಿ ಅವರು ಪ್ರಸ್ತಾಪಿಸಿದರು.

“ಈ ಕಾಯಿದೆಯ ನಿಯಮಾವಳಿಗಳು ನಿಜವಾಗಿಯೂ ಸಂತ್ರಸ್ತರಾಗಬಹುದಾದ ಮಕ್ಕಳೊಳಗೆ ಇಳಿದಿಲ್ಲ. ಜಾಗೃತಿ ಮೂಡಬೇಕಿರುವುದು ಅವರಲ್ಲೇ. ಹುಡುಗ ಅಥವಾ ಹುಡುಗಿ ಯಾರಿಗೇ ಆಗಲಿ ಅವರಿಗೆ ಈ ಅರಿವು ಬಹಳ ಮುಖ್ಯವಾಗಿದ್ದು ಅದು ಶಾಲೆಯಿಂದ ಆರಂಭಗೊಳ್ಳಬೇಕಿದೆ,’’ ಎಂದರು. ಆದರೆ ರಾಜ್ಯದಲ್ಲಿ (ಕೇರಳದಲ್ಲಿ) ಅದು ಇನ್ನೂ ಜಾರಿಗೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.