ನ್ಯಾಯಮೂರ್ತಿ ಬಿ.ವಿ.ನಾಗರತ್ನ 
ಸುದ್ದಿಗಳು

ಕೌಟುಂಬಿಕ ವ್ಯವಸ್ಥೆ ಉಳಿಸಿಕೊಳ್ಳಬೇಕು, ಆದರೆ ಮದುವೆಯಲ್ಲಿ ಮಹಿಳೆ ಅಡಿಯಾಳಾಗಬಾರದು: ನ್ಯಾ. ಬಿ ವಿ ನಾಗರತ್ನ

ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನ್ಯಾ. ಸುನಂದಾ ಭಂಡಾರೆ ಸ್ಮಾರಕ 28ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Bar & Bench

ಪುರುಷರು ವಿವಾಹದಲ್ಲಿ ತಮ್ಮ ಪ್ರಾಧಾನ್ಯತೆಯನ್ನು ತೊರೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ಕೌಟುಂಬಿಕ ಮತ್ತು ವೈವಾಹಿಕ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಹೇಳಿದ್ದಾರೆ.

ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ನ್ಯಾ. ಸುನಂದಾ ಭಂಡಾರೆ ಸ್ಮಾರಕ 28ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತದ ಪ್ರಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಅವರು 2027ರಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ಉಪನ್ಯಾಸದ ಪ್ರಮುಖಾಂಶಗಳು

  • ತಾವಿಬ್ಬರೂ ವಿವಾಹ ಎಂಬ ಸಂಸ್ಥೆಯ ಪ್ರಮುಖ ಆಧಾರ ಸ್ತಂಭಗಳು ಎಂಬುದನ್ನು ಮಹಿಳೆ ಮತ್ತು ಪುರುಷ ಅರ್ಥ ಮಾಡಿಕೊಳ್ಳಬೇಕು.

  • ಕುಟುಂಬ ಪ್ರಮುಖ ಪಾತ್ರವಹಿಸದಿದ್ದರೆ ಕೌಟುಂಬಿಕ ಹಿಂಸಾಚಾರ ಮತ್ತು ದಾಂಪತ್ಯ ದ್ರೋಹ ಎಂಬುವು ಹೆಚ್ಚುವ ಪ್ರವೃತ್ತಿಗಳಾಗಿಬಿಡುತ್ತವೆ.

  • ಪುರುಷರು ತಮ್ಮ ಮೇಲರಿಮೆಯ ಭಾವವನ್ನು ತ್ಯಜಿಸಿ ಕುಟುಂಬ ಮತ್ತು ವಿವಾಹವೆಂಬ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕು.

  • ಮಹಿಳೆಯರು ಹಾಗೂ ಕುಟುಂಬದ ಸಂತೋಷ ಮತ್ತು ಯೋಗಕ್ಷೇಮವು ಕುಟುಂಬ ಮತ್ತು ವಿವಾಹ ಸಂಸ್ಥೆಗಳನ್ನು ಉಳಿಸುವ ಆಧಾರವಾಗಬೇಕು .

  • ಕುಟುಂಬಗಳಲ್ಲಿ ಮಹಿಳೆಯ ಅಸ್ಮಿತೆ ಇಲ್ಲವಾಗುವುದು ಅಂತಿಮವಾಗಿ ಮದುವೆ ಮುರಿದುಬೀಳಲು ಕಾರಣವಾಗುತ್ತದೆ.

  • ಪ್ರತಿ ಯಶಸ್ವಿ ಪುರುಷನ ಹಿಂದೆ ಒಂದು ಕುಟುಂಬ ಇರಬೇಕೆ ವಿನಾ ವಿವಾಹಕ್ಕೆ ಅಡಿಯಾಳಾದ ಮಹಿಳೆಯಲ್ಲ.

  • ಮಹಿಳೆಯರು ವಿಧ್ಯುಕ್ತವಾಗಿ ಉದ್ಯೋಗ ಸಮುದಾಯವನ್ನು ಸೇರಬಹುದಾದರೂ ಮನೆಕೆಲಸ ಮತ್ತು ಮನೆಕೆಲಸಗಳ ಸಮಾನ ವಿಭಜನೆಯ ಕೊರತೆಯಿಂದಾಗಿ ಕಾನೂನು ವೃತ್ತಿ ಅವರಿಗೆ ಕಷ್ಟಕರವಾಗಿದೆ.

  • ಮಹಿಳೆ ಗರ್ಭಿಣಿಯಾಗಿದ್ದಾಳೆಯೇ ಎಂದು ತಿಳಿದುಕೊಳ್ಳುವುದಕ್ಕಾಗಿ ಅವಳಿಗೆ ಕಡೆಯ ಋತುಸ್ರಾವ ಯಾವಾಗ ಆಯಿತೆಂದು ಕೇಳಲಾಗುತ್ತದೆ. ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರು ಹೆರಿಗೆ ರಜೆಯಿಂದ ಮರಳಿ ಬಂದಾಗ ಅವರ ಜಾಗದಲ್ಲಿ ಬೇರೆಯವರು ಕೆಲಸ ಮಾಡುತ್ತಿರುತ್ತಾರೆ, ಇವರು ಉದ್ಯೋಗ ಕಳೆದುಕೊಂಡಿರುತ್ತಾರೆ. ಇದು ಕೂಡದು ಎಂದು ಅನೇಕ ತೀರ್ಪುಗಳಲ್ಲಿ ಹೇಳಲಾಗಿದೆ.

  • ವೈವಾಹಿಕ ಭಿನ್ನಾಭಿಪ್ರಾಯ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದ್ದು ಪುರುಷರು ಮಹಿಳಾ ಸಬಲೀಕರಣಕ್ಕೆ ಅನುಕೂಲ ಮಾಡಿಕೊಡುವ ಸಮಯ ಬಂದಿದೆ.

  • ಆದರೆ ಸಬಲೀಕರಣವು ಪುರುಷರನ್ನು ಮೀರಿಸುವ ಅಥವಾ ಬೇರೆಯವರನ್ನು ಕೀಳಾಗಿ ಕಾಣುವ ಅಂಶವಾಗಬಾರದು. ಗೌರವ ಮತ್ತು ವಿನಯ ಎಂಬುವು ವಿವಾಹ ಮತ್ತು ಕುಟುಂಬವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

  • ನ್ಯಾಯಾಲಯಗಳು ಹೆಚ್ಚು ಲಿಂಗ ತಟಸ್ಥವಾಗಿರಬೇಕು. ನ್ಯಾಯಾಂಗವನ್ನು ಹೆಚ್ಚು ಒಳಗೊಳ್ಳುವಂತೆ ಮಾಡಬೇಕು ಎನ್ನುವುದು 2031ರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಲಿರುವ ವಿಶ್ವನಾಥನ್ ಅವರಿಗೆ ನಾನು ಮಾಡುವ ಮನವಿಯಾಗಿದೆ. ಇದು ನ್ಯಾ. ಭಂಡಾರೆ ಅವರಿಗೆ ಸಲ್ಲಿಸುವ ಅತ್ಯುತ್ತಮ ಗೌರವವಾಗಿದೆ.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್‌ ಈ ಸಂದರ್ಭದಲ್ಲಿ ಮಾತನಾಡಿದರು. ದೆಹಲಿ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

[ಕಾರ್ಯಕ್ರದ ದೃಶ್ಯಾವಳಿಗಳಿಗಾಗಿ ಕೆಳಗೆ ಕ್ಲಿಕ್ಕಿಸಿ.]