Justices L Nageswara Rao, Hemant Gupta and Ajay Rastogi 
ಸುದ್ದಿಗಳು

ಜಾತಿಯ ಕಾರಣದಿಂದಲ್ಲದೆ ಎಸ್ಸಿ/ಎಸ್ಟಿ ವ್ಯಕ್ತಿಯನ್ನು ಅವಮಾನಿಸುವುದು ಎಸ್ಸಿ/ಎಸ್ಟಿ ಕಾಯಿದೆಯಡಿ ಅಪರಾಧವಲ್ಲ: ಸುಪ್ರೀಂ

ಮಾಹಿತಿದಾರರು ಪರಿಶಿಷ್ಟ ಜಾತಿ (ಎಸ್‌ಸಿ) ಅಥವಾ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿದ್ದಾರೆ ಎಂಬ ಮಾತ್ರಕ್ಕೆ ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ಅಪರಾಧ ತಂತಾನೆ ನಿಲ್ಲದು ಎಂದು ನ್ಯಾಯಾಲಯ ಹೇಳಿದೆ.

Bar & Bench

ಸಂತ್ರಸ್ತ ವ್ಯಕ್ತಿ ಪರಿಶಿಷ್ಟ ಜಾತಿ (ಎಸ್‌ಸಿ)/ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿದ್ದಾರೆ ಎಂಬ ಕಾರಣಕ್ಕೆ ಅವಮಾನ ಅಥವಾ ಬೆದರಿಸುವುದನ್ನು ಹೊರತುಪಡಿಸಿ ಎಸ್‌ಸಿ/ಎಸ್‌ಟಿ ವ್ಯಕ್ತಿಯನ್ನು ಅವಮಾನಿಸುವುದು ಅಥವಾ ಪ್ರಚೋದಿಸುವುದು ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆಯಡಿ ಅಪರಾಧವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ (ಹಿತೇಶ್‌ ವರ್ಮಾ ವರ್ಸಸ್‌ ಉತ್ತರಾಖಂಡ ರಾಜ್ಯ).

ಸಂತ್ರಸ್ತರು ನಿರ್ದಿಷ್ಟ ಜಾತಿಗೆ ಸೇರಿದವರಾಗಿದ್ದಾರೆ ಎಂಬ ಕಾರಣಕ್ಕೆ ಎಸ್‌ಸಿ/ಎಸ್‌ಟಿ ಸದಸ್ಯರನ್ನು ಅವಮಾನಿಸುವ ಉದ್ದೇಶ ಹೊಂದಿರದ ಹೊರತು, ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಅಪರಾಧವು ಕೇವಲ ಮಾಹಿತಿದಾರರು ಎಸ್‌ಸಿ ಸದಸ್ಯರಾಗಿದ್ದಾರೆ ಎಂಬ ಅಂಶದ ಮೇಲೆ ನಿರೂಪಿತವಾಗುವುದಿಲ್ಲ ಎಂದು ಪೀಠ ಹೇಳಿದೆ.

“ಪ್ರಸ್ತುತ ಪ್ರಕರಣದಲ್ಲಿ ವಾದಿ-ಪ್ರತಿವಾದಿಗಳು ಜಮೀನಿಗೆ ಸಂಬಂಧಿಸಿದ ವಿವಾದದಲ್ಲಿ ದಾವೆದಾರರಾಗಿದ್ದಾರೆ. ತಾನು ಆಸ್ತಿಯ ಹಕ್ಕು ಹೊಂದಿರುವುದಾಗಿ ಹೇಳುವ ವ್ಯಕ್ತಿಯನ್ನು ನಿಂದಿಸಿರುವ ಆರೋಪ ಇದಾಗಿದೆ. ಆ ವ್ಯಕ್ತಿ, ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ ಕಾಯಿದೆಯ ಸೆಕ್ಷನ್‌ 3(1)(r) ಅಡಿ ಅಪರಾಧವಾಗದು” ಎಂದು ನ್ಯಾಯಾಲಯ ಹೇಳಿದೆ.

ಸಂತ್ರಸ್ತ ವ್ಯಕ್ತಿ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ್ದಾನೆ ಎಂಬ ಕಾರಣದಿಂದ ಆರೋಪ ಮೂಡಿರದೆ ಹೋದ ಪಕ್ಷದಲ್ಲಿ ಎಸ್‌ಸಿ/ಎಸ್‌ಟಿ ವ್ಯಕ್ತಿ ಮತ್ತು ಮೇಲ್ಜಾತಿಯ ವ್ಯಕ್ತಿಯ ನಡುವಿನ ಅಸ್ತಿ ವ್ಯಾಜ್ಯವು ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಅಪರಾಧ ಎಂದಾಗುವುದಿಲ್ಲ.

ಉತ್ತರಾಖಂಡ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌, ಹೇಮಂತ್‌ ಗುಪ್ತಾ ಮತ್ತು ಅಜಯ್‌ ರಸ್ತೋಗಿ ಅವರಿದ್ದ ತ್ರಿಸದಸ್ಯ ಪೀಠವು ತೀರ್ಪು ಪ್ರಕಟಿಸಿದೆ. ಎಸ್‌ಸಿ/ಎಸ್‌ಟಿ ಕಾಯಿದೆಯ ಸೆಕ್ಷನ್‌ 3(1)(r)ರ ಅಡಿ ದಾಖಲಿಸಲಾಗಿರುವ ಆರೋಪಪಟ್ಟಿ ಮತ್ತು ಸಮನ್ಸ್‌ ಆದೇಶವನ್ನು ವಜಾಗೊಳಿಸುವಂತೆ ಕ್ರಿಮಿನಲ್‌ ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 482ರ ಅಡಿ ಹಿತೇಶ್‌ ವರ್ಮಾ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

ಮೇಲ್ಮನವಿದಾರರು ಪ್ರತಿವಾದಿಯ ಮನೆಗೆ ನುಗ್ಗಿ ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪ ಮಾಡಲಾಗಿತ್ತು. ಮೇಲ್ಮನವಿದಾರರು ಜಾತಿಯನ್ನು ಗುರಿಯಾಗಿಸಿಕೊಂಡು ತಮ್ಮನ್ನು ಅವಮಾನಿಸಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ್ದರು ಎಂದು ಪ್ರತಿವಾದಿ ಮಹಿಳೆ ದೂರಿದ್ದರು. ಮೇಲ್ಮನವಿದಾರರ ವಿರುದ್ಧ ಅತಿಕ್ರಮ ಪ್ರವೇಶ (ಐಪಿಸಿ ಸೆಕ್ಷನ್‌ 452), ಕ್ರಿಮಿನಲ್‌ ಬೆದರಿಕೆ (ಸೆಕ್ಷನ್‌ 506) ಮತ್ತು ಎಸ್‌ಸಿ/ಎಸ್‌ಟಿ ವ್ಯಕ್ತಿಯನ್ನು ಅವಮಾನಿಸುವುದು ಮತ್ತು ತೇಜೋವಧೆ ಮಾಡಿದ (ಎಸ್‌ಸಿ/ಎಸ್‌ಟಿ ಕಾಯಿದೆಯ ಸೆಕ್ಷನ್‌ 3(1)(r)) ಆರೋಪ ಮಾಡಲಾಗಿತ್ತು.

“ಸಮಾಜದಲ್ಲಿ ತುಳಿತಕ್ಕೊಳಗಾದವರು ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಮೇಲ್ಜಾತಿಯವರು ಅವರ ವಿರುದ್ಧ ತಿರುಗಿ ಬೀಳುವುದನ್ನು ಶಿಕ್ಷಿಸುವ ಉದ್ದೇಶವನ್ನು ಎಸ್‌ಸಿ/ಎಸ್‌ಟಿ ಕಾಯಿದೆ ಹೊಂದಿದೆ” ಎಂದು ಸುಪ್ರೀಂ ಕೋರ್ಟ್‌ ತೀರ್ಪು ಹೇಳಿದೆ.

ಕಾಯಿದೆಯ ಸೆಕ್ಷನ್‌ 3(1)(r) ರ ಮೂಲ ಅಂಶಗಳನ್ನು ಎರಡು ರೀತಿಯಲ್ಲಿ ವಿಭಾಗಿಸಬಹುದು: ೧. ಎಸ್‌ಸಿ/ಎಸ್‌ಟಿ ಸಮುದಾಯದ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡುವ ದೃಷ್ಟಿಯಿಂದ ಅವಮಾನಿಸುವುದು ಅಥವಾ ಬೆದರಿಸುವುದು ಮತ್ತು ೨. ಸಾರ್ವಜನಿಕವಾಗಿ ಯಾವುದೇ ಸ್ಥಳದಲ್ಲಿ ಅವಮಾನಿಸುವುದು” ಎಂದು ನ್ಯಾಯಾಲಯ ಹೇಳಿದೆ.

ಪ್ರಸ್ತುತ ಪ್ರಕರಣದಲ್ಲಿ, ಮನೆಯ ನಾಲ್ಕು ಗೊಡೆಯ ಒಳಗೆ ಘಟನೆ ಸಂಭವಿಸಿದೆ ಎನ್ನಲಾಗಿದ್ದು ಮೇಲೆ ತಿಳಿಸಿದ ಎರಡನೆಯ ಅಂಶ ಈಡೇರಿಕೆಯಾಗುವುದಿಲ್ಲ. ಅಸ್ತಿ ವಿವಾದದ ಈ ಪ್ರಕರಣದಲ್ಲಿ ಜಾತಿಯ ಜೋಡಣೆ ಕಾಣುವುದಿಲ್ಲ ಎಂದ ನ್ಯಾಯಾಲಯವು ಕಾಯಿದೆಯಡಿ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿತು. ಐಪಿಸಿ ಅಡಿ ಪ್ರಕರಣದ ತನಿಖೆ ನಡೆಸಲು ಪೊಲೀಸರು ಸ್ವತಂತ್ರರು ಎಂದು ಅಭಿಪ್ರಾಯಪಟ್ಟಿತು.

ಮೇಲ್ಮನವಿದಾರರ ಪರವಾಗಿ ಅಡ್ವೊಕೇಟ್‌ ಆನ್‌ ರೆಕಾರ್ಡ್‌ನ ವಕೀಲ ಆಯುಷ್‌ ನೇಗಿ ವಾದಿಸಿದರು.