ಆಧಾರವಿಲ್ಲದೆ ವಿಮಾ ಕಂಪೆನಿಗಳು ಪರಿಹಾರ ತಿರಸ್ಕರಿಸುತ್ತಿರುವ ಬಗ್ಗೆ ಪಂಜಾಬ್ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಈಚೆಗೆ ಕಳವಳ ವ್ಯಕ್ತಪಡಿಸಿದೆ.
ಪರಿಹಾರ ಒದಗಿಸುವುದಕ್ಕಾಗಿ ಮತ್ತು ಗ್ರಾಹಕರಿಗೆ ಕಿರುಕುಳ ನೀಡಲು ಅನ್ಯಾಯದ ಮಾರ್ಗಗಳನ್ನು ಬಳಸುತ್ತಿರುವ ವಿಮಾ ಕಂಪೆನಿಗಳನ್ನು ಹದ್ದುಬಸ್ತಿನಲ್ಲಿಡಲು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಮುಂದಾಗಬೇಕು ಎಂದು ಆಯೋಗದ ಅಧ್ಯಕ್ಷೆ ನ್ಯಾಯಮೂರ್ತಿ ದಯಾ ಚೌಧರಿ ಮತ್ತು ಸದಸ್ಯೆ ಸಿಮರ್‌ಜೋತ್ ಕೌರ್ ಅವರು ತಿಳಿಸಿದರು.
ವಿಮಾದಾರರ ಹಕ್ಕುಗಳಿಗೆ ರಕ್ಷಣೆ ದೊರೆಯುವಂತಾಗಲು ಮತ್ತು ವಿಮಾದಾರರ ಇಲ್ಲವೇ ನಾಮನಿರ್ದೇಶಿತರಿಗೆ ಪಾರದರ್ಶಕ ರೀತಿಯಲ್ಲಿ ಪರಿಹಾರ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ವಿಮಾ ಕಂಪನಿಗಳಿಗೆ ಐಆರ್‌ಡಿಎ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಬೇಕು ಎಂದು ಆಯೋಗ ಹೇಳಿದೆ.
ಬಹುತೇಕ ವಿಮಾ ಪರಿಹಾರವನ್ನು ಆಧಾರವಿಲ್ಲದೆಯೇ ವಿಮಾ ಕಂಪೆನಿಗಳು ತಿರಸ್ಕರಿಸುತ್ತಿವೆ ಎಂಬುದನ್ನು ಗಮನಿಸುವುದು ಸೂಕ್ತ. ಪ್ರಸ್ತುತ ಪ್ರಕರಣದಲ್ಲಿ ಕೂಡ ವಿಮಾ ಕಂಪೆನಿ ಅದೇ ರೀತಿ ಮಾಡಿದೆ. ಆದ್ದರಿಂದ ವಿಮಾದಾರರಿಗೆ ನೈಜ ಪರಿಹಾರ ಒದಗಿಸಲು ಮತ್ತು ಪರಿಹಾರ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಿಕೊಳ್ಳಲು ಕಟ್ಟುನಿಟ್ಟಿನ ನಿಬಂಧನೆಗಳನ್ನು ಜಾರಿಗೊಳಿಸುವ ತುರ್ತು ಅಗತ್ಯವಿದೆ ಎಂದು ಅದು ವಿವರಿಸಿದೆ.
ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕರ ಆಯೋಗ ನೀಡಿದ್ದ ದೂರೊಂದನ್ನು ಪ್ರಶ್ನಿಸಿ ಎಚ್‌ಡಿಎಫ್‌ಸಿ ಇಆರ್‌ಜಿಒ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಸಲ್ಲಿಸಿದ್ದ ಎರಡು ಮೇಲ್ಮನವಿಗಳ ವಿಚಾರಣೆ ವೇಳೆ ರಾಜ್ಯ ಗ್ರಾಹಕ ಆಯೋಗ ಈ ವಿಚಾರ ತಿಳಿಸಿತು.
ಅರ್ಜಿದಾರೆ ಶುಭ್‌ಲತಾ ಎಂಬುವವರ ಪತಿ 2019ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಗೃಹ ಸಾಲ ಪಡೆದಿದ್ದರು. ಬ್ಯಾಂಕ್ ಅಧಿಕಾರಿಗಳ ಸಲಹೆಯ ಮೇರೆಗೆ ಎಚ್‌ಡಿಎಫ್‌ಸಿ ಇಆರ್‌ಜಿಒ ಜನರಲ್ ಇನ್ಶೂರೆನ್ಸ್‌ನ ಲೋನ್ ಕ್ರೆಡಿಟ್ ಅಶ್ಯೂರ್ ಪಾಲಿಸಿ ಖರೀದಿಸುವ ಮೂಲಕ ತಮ್ಮ ಸಾಲಕ್ಕೆ ವಿಮೆ ಮಾಡಿಸಿದ್ದರು. 2021 ರಲ್ಲಿ, ಲತಾ ಅವರ ಪತಿ ಅನಾರೋಗ್ಯದಿಂದ ನಿಧನರಾದರು. ಹೀಗಾಗಿ ಕ್ರೆಡಿಟ್ ಅಶ್ಯೂರ್ ಪಾಲಿಸಿ ಮಾಡಿಸಿದ್ದ ತಮಗೆ ಗೃಹಸಾಲ ಮರುಪಾವತಿಸುವಂತೆ ಲತಾ ಕೋರಿದರು.
ಆದರೆ ಪತಿಯ ಅನಾರೋಗ್ಯ ವಿಮಾ ಪಾಲಿಸಿಯಲ್ಲಿ ಉಲ್ಲೇಖಿಸಲಾದ ಪ್ರಮುಖ ವೈದ್ಯಕೀಯ ಕಾಯಿಲೆಗಳ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣಕ್ಕೆ ಪರಿಹಾರ ನಿರಾಕರಿಸಲಾಗಿತ್ತು.
ಎಚ್‌ಡಿಎಫ್‌ಸಿ ಇಆರ್‌ಜಿಒ ಮನಸೋಇಚ್ಛೆಯಿಂದ ಪರಿಹಾರ ನಿರಾಕರಿಸಿದೆ. ದೂರುದಾರರು ಪಾವತಿಸದ ಮೊತ್ತವನ್ನು ಅದು ಕೇಳುವಂತಿಲ್ಲ. ಬದಲಿಗೆ ಸಾಲದ ಬಾಕಿ ಮೊತ್ತವನ್ನು ಪಾವತಿಸಬೇಕು ಎಂದು 2022ರಲ್ಲಿ ಜಿಲ್ಲಾ ಗ್ರಾಹಕ ಆಯೋಗ ತೀರ್ಪು ನೀಡಿತ್ತು. ಇದನ್ನು ರಾಜ್ಯ ಆಯೋಗದೆದುರು ಪ್ರಶ್ನಿಸಲಾಗಿತ್ತು.
ವಾದ ಆಲಿಸಿದ ರಾಜ್ಯ ಗ್ರಾಹಕರ ಆಯೋಗ ಅರ್ಜಿದಾರರ ಪತಿಯ ರೋಗ ಸಂಕೀರ್ಣ ಸ್ವರೂಪದ್ದಾಗಿರುವುದರಿಂದ ಪ್ರಮುಖ ವೈದ್ಯಕೀಯ ಕಾಯಿಲೆ ವರ್ಗದಡಿಯಲ್ಲಿ ಪರಿಗಣಿಸಬೇಕು. ಕ್ಷುಲ್ಲಕ ಆಧಾರದಲ್ಲಿ ಆಗಾಗ್ಗೆ ವಿಮಾ ಕಂಪೆನಿಗಳು ಪರಿಹಾರ ತಿರಸ್ಕರಿಸುತ್ತವೆ ಎಂದು ಜಿಲ್ಲಾ ಆಯೋಗ ಸೂಕ್ತ ರೀತಿಯಲ್ಲೇ ಭಾವಿಸಿದೆ ಎಂದಿತು.
ಸಾಲ ವಸೂಲಾತಿಗೆ ತಡೆ ನೀಡಿರುವ ಜಿಲ್ಲಾ ಆಯೋಗದ ಆದೇಶದ ವಿರುದ್ಧ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪ್ರತ್ಯೇಕ ಮೇಲ್ಮನವಿಯಲ್ಲಿ, ಬ್ಯಾಂಕ್ ಮತ್ತು ವಿಮಾ ಕಂಪನಿಯ ಕಾರ್ಯಗಳು ಸಂಪೂರ್ಣವಾಗಿ ಸ್ವತಂತ್ರವಾಗಿರುವುದರಿಂದ ಸಾಲವನ್ನು ಕೇಳಲು ಬ್ಯಾಂಕ್‌ಗೆ ಎಲ್ಲ ಹಕ್ಕಿದೆ ಎಂದು ರಾಜ್ಯ ಆಯೋಗ ಹೇಳಿತು.
ಆದರೆ, ದೂರುದಾರರು ವಿಮಾ ಕಂಪನಿಯಲ್ಲಿ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಎಂದು ಅದು ಸ್ಪಷ್ಟಪಡಿಸಿದ್ದು ಸಾಲದ ಮೊತ್ತವನ್ನು ಇತ್ಯರ್ಥಗೊಳಿಸಲು ವಿಮಾ ಕಂಪೆನಿ ಬದ್ಧವಾಗಿರಬೇಕು ಎಂದಿತು.