ಸುದ್ದಿಗಳು

ವಾಹನ ಕಳ್ಳತನದ ಬಗ್ಗೆ ತಡವಾಗಿ ಮಾಹಿತಿ ನೀಡಿದ್ದಾರೆಂದು ವಿಮಾ ಕಂಪೆನಿ ಪರಿಹಾರ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್

Bar & Bench

ವಾಹನ ಕಳ್ಳತನದ ಬಗ್ಗೆ ತಡವಾಗಿ ಮಾಹಿತಿ ನೀಡಿದ್ದಾರೆ ಎಂದ ಮಾತ್ರಕ್ಕೆ ವಿಮಾ ಕಂಪೆನಿಗಳು ಪರಿಹಾರ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಪುನರುಚ್ಚರಿಸಿದೆ. [ಜೈನಾ ಕನ್ಸ್ಟ್ರಕ್ಷನ್ ಕಂಪನಿ ಮತ್ತು ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].

"ದೂರುದಾರರು ವಾಹನ ಕಳ್ಳತನವಾದ ತಕ್ಷಣ ಎಫ್‌ಐಆರ್ ದಾಖಲಿಸಿದಾಗ, ತನಿಖೆಯ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಚಲನ್ ಸಲ್ಲಿಸಿದಾಗ ಹಾಗೂ ವಿಮಾದಾರ ಪರಿಹಾರ ಕೇಳುತ್ತಿರುವುದು ನಿಜವಲ್ಲ ಎಂದು ಕಂಡುಬರದೇ ಇರುವಾಗ ವಾಹನ ಕಳ್ಳತನದ ಬಗ್ಗೆ ತಡವಾಗಿ ಮಾಹಿತಿ ನೀಡಿದ್ದಾರೆ ಎಂದ ಮಾತ್ರಕ್ಕೆ ವಿಮಾ ಕಂಪೆನಿಗಳು ಪರಿಹಾರ ನಿರಾಕರಿಸುವಂತಿಲ್ಲ” ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ತೀರ್ಪು ನೀಡಿತು.

ಆ ಮೂಲಕ ಮಾಹಿತಿ ವಿಳಂಬದ ಆಧಾರದ ಮೇಲೆ ಮೇಲ್ಮನವಿದಾರರಿಗೆ ಪರಿಹಾರ ನಿರಾಕರಿಸಲು ವಿಮಾ ಕಂಪನಿಗೆ ಅವಕಾಶ ನೀಡಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) 2016ರಲ್ಲಿ ಹೊರಡಿಸಿದ್ದ ಆದೇಶವನ್ನು ಪೀಠ ವಜಾಗೊಳಿಸಿತು.

ಗುರ್ಶಿಂದರ್ ಸಿಂಗ್ ಮತ್ತು ಶ್ರೀರಾಮ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣದಲ್ಲಿ ತಾನು 2020ರಲ್ಲಿ ನೀಡಿದ್ದ ತೀರ್ಪನ್ನು ಆಧರಿಸಿ ಸುಪ್ರೀಂಕೋರ್ಟ್‌ ಈ ಆದೇಶ ನೀಡಿತು.