ಸುದ್ದಿಗಳು

ವಕೀಲರಿಗೆ ಆರೋಗ್ಯ ವಿಮೆ: ರೂ. 50 ಕೋಟಿ ಹೊಂದಿಸಲು ಯೋಜನೆ ರೂಪಿಸಲು ಉಪ ಸಮಿತಿಗೆ ಹೊಣೆ

ವಕೀಲರ ಆರೋಗ್ಯ ವಿಮೆ ಜಾರಿಗೆ ಸಂಬಂಧಿಸಿದಂತೆ ಕಾನೂನು ಸಚಿವ ಎಂ ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಬುಧವಾರ ವಿಧಾನಸೌಧದಲ್ಲಿ ಸಭೆ ನಡೆಸಲಾಗಿತ್ತು.

Bar & Bench

ರಾಜ್ಯದ ವಕೀಲರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರವು 50 ಕೋಟಿ ರೂಪಾಯಿ ಮೂಲ ನಿಧಿ ನೀಡಲಿದ್ದು, ಬಾಕಿ 50 ಕೋಟಿ ರೂಪಾಯಿ ಹೊಂದಿಸುವುದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲು ಉಪ ಸಮಿತಿ ರಚಿಸಲು ಕಾನೂನು ಸಚಿವ ಎಂ ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಬುಧವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಕಾನೂನು ಇಲಾಖೆಯ ಕಾರ್ಯದರ್ಶಿ ವೆಂಕಟೇಶ್‌ ನಾಯಕ್‌ ಅವರು ಉಪ ಸಮಿತಿ ರಚಿಸಲಿದ್ದು, ಸಮಿತಿಯು ರೂಪಿಸಲಿರುವ ಯೋಜನೆಯನ್ನು ಕಾನೂನು ಸಚಿವರ ಮುಂದೆ ಮಂಡಿಸಲು ತೀರ್ಮಾನಿಸಲಾಗಿದೆ.

“ಸರ್ಕಾರ 50 ಕೋಟಿ ರೂಪಾಯಿ ನೀಡಿದರೂ ವಕೀಲರಿಂದ 50 ಕೋಟಿ ರೂಪಾಯಿ ಸಂಗ್ರಹಿಸಲಾಗದು” ಎಂದು ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಂ ಕಾಶೀನಾಥ್‌, ಮಾಜಿ ಅಧ್ಯಕ್ಷ ಕೆ ಬಿ ನಾಯಕ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರು ಸಚಿವರ ಗಮನಕ್ಕೆ ತಂದರು. ಹೀಗಾಗಿ, ಯೋಜನೆ ರೂಪಿಸಲು ಸಮಿತಿ ರಚಿಸಿಲು ಸಚಿವರು ನಿರ್ದೇಶಿಸಿದರು.

ವಕೀಲರ ಪರಿಷತ್‌ ಸದಸ್ಯರಾದ ಗೌತಮ್‌ ಚಂದ್‌, ಆರ್‌ ರಾಜಣ್ಣ, ಹಣಕಾಸು ಇಲಾಖೆಯ ಏಕರೂಪ್‌ ಕೌರ್‌ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ರಾಜ್ಯದ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ರೂಪಿಸಲು ಅನುವಾಗುವಂತೆ 100 ಕೋಟಿ ರೂಪಾಯಿ ಮೂಲನಿಧಿ ಸ್ಥಾಪಿಸಲು ರಾಜ್ಯ ಸರ್ಕಾರದ ವತಿಯಿಂದ ನೆರವು ನೀಡುವ ಯೋಜನೆಗೆ ಈಚೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು.

ಮೂಲ ನಿಧಿಯನ್ನು ನಿರ್ವಹಿಸಲು ನಿಯಮ ರಚಿಸಿ, ಪೂರ್ಣ ಪ್ರಮಾಣದ ಪ್ರಸ್ತಾವಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆಯುವ ಷರತ್ತಿಗೆ ಒಳಪಟ್ಟು ಯೋಜನೆ ಜಾರಿಗೊಳಿಸಲು ಸರ್ಕಾರವು ತಾತ್ವಿಕ ಅನುಮೋದನೆ ನೀಡಿದೆ ಎಂದು ಕಾನೂನು ಇಲಾಖೆಯ ಆಡಳಿತ ವಿಭಾಗದ ಅಧೀನ ಕಾರ್ಯದರ್ಶಿ ಆದಿನಾರಾಯಣ ಅವರು ಹೊರಡಿಸಿದ್ದ ಆದೇಶದಲ್ಲಿ ತಿಳಿಸಲಾಗಿತ್ತು.