Mohammad zubair and SC  Twitter
ಸುದ್ದಿಗಳು

ಸೀತಾಪುರ ಪ್ರಕರಣದಲ್ಲಿ ಮೊಹಮ್ಮದ್ ಜುಬೈರ್‌ಗೆ ನೀಡಿರುವ ಮಧ್ಯಂತರ ರಕ್ಷಣೆ ಮುಂದುವರೆಯಲಿದೆ: ಸುಪ್ರೀಂ ಕೋರ್ಟ್

ಸರ್ವೋಚ್ಚ ನ್ಯಾಯಾಲಯ ವಿಚಾರಣೆ ನಡೆಸುತ್ತಿರುವ ಪ್ರಕರಣದ ಅಂತಿಮ ವಿಚಾರಣೆ ಸೆಪ್ಟೆಂಬರ್ 7ರಂದು ನಡೆಯಲಿದೆ.

Bar & Bench

ಪತ್ರಕರ್ತ, ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿರುದ್ಧ ಉತ್ತರ ಪ್ರದೇಶದ ಸೀತಾಪುರ ಪೊಲೀಸರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ನೀಡಿರುವ ಮಧ್ಯಂತರ ರಕ್ಷಣೆ ಮುಂದುವರೆಯಲಿ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ [ಮೊಹಮ್ಮದ್ ಜುಬೈರ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ಪ್ರಕರಣದ ಅಂತಿಮ ವಿಚಾರಣೆಯನ್ನು ಸೆಪ್ಟೆಂಬರ್ 7ರಂದು ನಡೆಸಲು ನಿರ್ಧರಿಸಿದೆ.

“ಪ್ರತಿ ಅಫಿಡವಿಟ್‌ ಸಲ್ಲಿಸಲು ಸರ್ಕಾರ ಕಾಲಾವಕಾಶ ಕೋರಿದೆ. 4 ವಾರಗಳೊಳಗೆ ಉತ್ತರವನ್ನು ಸಲ್ಲಿಸಬೇಕು. ಅದನ್ನು 2 ವಾರಗಳಲ್ಲಿ ಪರಿಶೀಲಿಸಬೇಕು. ಸೀತಾಪುರ ಎಫ್‌ಐಆರ್ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಮುಂದಿನ ಆದೇಶದವರೆಗೆ ಮುಂದುವರಿಯುತ್ತದೆ. ಸೆಪ್ಟೆಂಬರ್ 7, 2022 ರಂದು ಅಂತಿಮ ವಿಲೇವಾರಿಗಾಗಿ ಪ್ರಕರಣವನ್ನು ಪಟ್ಟಿ ಮಾಡಿ” ಎಂದು ನ್ಯಾಯಾಲಯ ಸೂಚಿಸಿತು.

ಮಹಂತ ಬಜರಂಗ ಮುನಿ, ಯತಿ ನರಸಿಂಗಾನಂದ ಮತ್ತು ಸ್ವಾಮಿ ಆನಂದ ಸ್ವರೂಪ ಅವರನ್ನು 'ದ್ವೇಷ ಪಸರಿಸುವವರು' ಎಂದು ಉಲ್ಲೇಖಿಸಿ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಡಿ ಉತ್ತರ ಪ್ರದೇಶ ಪೊಲೀಸರು ಜುಬೈರ್‌ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇತೃತ್ವದ ಸುಪ್ರೀಂ ಕೋರ್ಟ್‌ನ ರಜಾಕಾಲೀನ ಪೀಠ ಪ್ರಕರಣದಲ್ಲಿ ಜುಬೈರ್‌ ಅವರಿಗೆ 5 ದಿನಗಳ ಮಧ್ಯಂತರ ಜಾಮೀನು ನೀಡಿತ್ತು.

ಇನ್ನೂ ಎರಡು ಪ್ರಕರಣ…

ತಮ್ಮ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಜುಬೈರ್‌ ವಿರುದ್ಧ ದೆಹಲಿ ಮತ್ತು ಉತ್ತರಪ್ರದೇಶದ ಲಖೀಂಪುರ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಸಿನಿಮಾ ದೃಶ್ಯವೊಂದನ್ನು ಟ್ವೀಟ್‌ ಮಾಡಿ ಧಾರ್ಮಿಕ ಭಾವನೆ ಕೆರಳಿಸಿದ ಆರೋಪದಡಿ ದೆಹಲಿ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಜುಬೈರ್‌ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಅವರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಜುಲೈ 14 ರಂದು ವಿಚಾರಣೆ ನಡೆಸಲಿದೆ. ಲಖಿಂಪುರ ಖೇರಿ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯ ನಿನ್ನೆ ಜುಬೈರ್‌ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.