KSPCB and Karnataka HC 
ಸುದ್ದಿಗಳು

ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನದಿಂದ ಶಾಂತ್ ತಿಮ್ಮಯ್ಯ ಬದಲಿಸದಂತೆ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ

ಹೊಸ ನೇಮಕಾತಿ ನಡೆಯುವರೆಗೂ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿಯನ್ನು ಕೆಎಸ್‌ಪಿಸಿಬಿ ಅಧ್ಯಕ್ಷರಾಗಿ ಹೆಚ್ಚುವರಿ ಜವಾಬ್ದಾರಿ ಹೊರಿಸಲಾಗಿದೆ ಎಂದು ತಿಳಿಸಿ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.

Bar & Bench

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ಶಾಂತ್ ಎ. ತಿಮ್ಮಯ್ಯ ಅವರನ್ನು ಬದಲಿಸದಂತೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಕೆಎಸ್‌ಪಿಸಿಬಿ ಅಧ್ಯಕ್ಷರ ಅಧಿಕಾರವಧಿ ಮೊಟಕುಗೊಳಿಸಿ‌ ರಾಜ್ಯ ಸರ್ಕಾರ ಗುರುವಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶಾಂತ್.ಎ. ತಿಮ್ಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ಈ ಮಧ್ಯಂತರ ಆದೇಶ ಮಾಡಿ ವಿಚಾರಣೆಯನ್ನು ಸೆಪ್ಟೆಂಬರ್‌ 7ಕ್ಕೆ ಮುಂದೂಡಿದೆ.

ಪ್ರಕರಣದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮವನ್ನು ಬೆಂಬಲಿಸಿದ ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್‌ ಶೆಟ್ಟಿ ಅವರು ಅರ್ಜಿ ಕುರಿತಂತೆ ಹೆಚ್ಚಿನ ವಿಚಾರಣೆ ನಡೆಯಬೇಕಿದೆ ಎಂದು ತಿಳಿಸಿದ್ದಾರೆ. ಆದರೆ, ಕಾಲಾವಕಾಶದ ಕೊರತೆ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್‌ 7ಕ್ಕೆ ಮುಂದೂಡಲಾಗಿದೆ. ಆದ್ದರಿಂದ, ಅರ್ಜಿಯ ಮುಂದಿನ ವಿಚಾರಣೆವರೆಗೆ ಸರ್ಕಾರದ ಆದೇಶ ಅಮಾನತ್ತಿನಲ್ಲಿ ಇಡಬೇಕು ಎಂದು ಆದೇಶದಲ್ಲಿ ಪೀಠ ತಿಳಿಸಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ್ ಎ.ತಿಮ್ಮಯ್ಯ ಅವರ ಅವಧಿ ಮುಗಿದಿದೆ. ಹೀಗಾಗಿ, ಅವರ ಸ್ಥಾನಕ್ಕೆ ಹೊಸದಾಗಿ ನೇಮಕಾತಿ ನಡೆಸಬೇಕಿದೆ. ನೇಮಕಾತಿ ನಡೆಯುವರೆಗೂ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿಯನ್ನು ಕೆಎಸ್‌ಪಿಸಿಬಿ ಅಧ್ಯಕ್ಷರಾಗಿ ಹೆಚ್ಚುವರಿ ಜವಾಬ್ದಾರಿ ಹೊರಿಸಲಾಗಿದೆ ಎಂದು ತಿಳಿಸಿ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ. ಅದನ್ನು ಪ್ರಶ್ನಿಸಿ ಶಾಂತ್ ಎ.ತಿಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.