ಮಾನವ ಹಕ್ಕು ದಿನ 
ಸುದ್ದಿಗಳು

ಅಂತರರಾಷ್ಟ್ರೀಯ ಮಾನವ ಹಕ್ಕು ದಿನ: ರಾಜ್ಯ ರಾಜಧಾನಿ ಸಮೀಪದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಅತಿ ಕಡಿಮೆ ಪ್ರಕರಣ ದಾಖಲು

ಕಡಿಮೆ ಸಂಖ್ಯೆಯ ಪ್ರಕರಣಗಳು ದಾಖಲಾಗುವುದಕ್ಕೆ ಮಾನವ ಹಕ್ಕುಗಳ ಬಗೆಗಿನ ಜಾಗೃತಿ ಇಲ್ಲದಿರುವುದು ಕೂಡ ಕಾರಣ. ಈ ನಿಟ್ಟಿನಲ್ಲಿ ಎಸ್ಎಚ್ಆರ್‌ಸಿ ಗಮನ ಹರಿಸಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಭೀಮನಗೌಡ ಪರಗೊಂಡ.

Bar & Bench

ಇಂದು (ಡಿಸೆಂಬರ್‌ 10) ಅಂತರರಾಷ್ಟ್ರೀಯ ಮಾನವ ಹಕ್ಕು ದಿನ. ಕಳೆದ ಕರ್ನಾಟಕದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಒಟ್ಟು 48,418 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 44,876 ಪ್ರಕರಣಗಳು ವಿಲೇವಾರಿಯಾಗಿವೆ. 3542 ಪ್ರಕರಣಗಳು ವಿಚಾರಣೆ ಎದುರು ನೋಡುತ್ತಿವೆ.

ಈ ಕುರಿತು ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಭೀಮನಗೌಡ ಪರಗೊಂಡ ಅವರು ಮಾಹಿತಿ ಹಕ್ಕು ಕಾಯಿದೆಯಡಿ ಕೇಳಿದ ಪ್ರಶ್ನೆಗೆ ರಾಜ್ಯ ಮಾನವ ಹಕ್ಕು ಆಯೋಗ (ಕೆಎಸ್‌ಎಚ್‌ಆರ್‌ಸಿ), ಎಲ್ಲಾ 31 ಜಿಲ್ಲೆಗಳ ಒಟ್ಟು ಎಂಟು ವರ್ಷದ ಮಾಹಿತಿ ಕ್ರೋಢೀಕರಿಸಿ ನೀಡಿದೆ. ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ- 1993ರ ಅಡಿ 2007ರಲ್ಲಿ ಅಸ್ತಿತ್ವಕ್ಕೆ ಆಯೋಗ ಅಸ್ತಿತ್ವಕ್ಕೆ ಬಂದಿದೆ.

ಈ ಅವಧಿಯಲ್ಲಿ ಬೆಂಗಳೂರು ನಗರ (16044), ಮೈಸೂರು (4064), ತುಮಕೂರು (2468), ಬೆಳಗಾವಿ (1891) ಹಾಗೂ ಬಳ್ಳಾರಿಗಳಲ್ಲಿ (1870) ಅತಿ ಹೆಚ್ಚು ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದರೆ ನೂತನ ಜಿಲ್ಲೆಯಾದ ವಿಜಯನಗರ (107), ಚಾಮರಾಜನಗರ (412),  ಚಿಕ್ಕಮಗಳೂರು (749) ಹಾಗೂ ಗದಗ ಜಿಲ್ಲೆಗಳಲ್ಲಿ (441) ಅತಿ ಕಡಿಮೆ ಪ್ರಕರಣಗಳು ದಾಖಲಾಗಿವೆ.  ವಿಶೇಷ ಎಂದರೆ ರಾಜ್ಯ ರಾಜಧಾನಿಗೆ ಹೊಂದಿಕೊಂಡಂತಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (575) ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಿಗೆ ಅಂದರೆ ರಾಮನಗರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ರೀತಿಯ ಜಿಲ್ಲೆಗಳಿಗೆ ಹೋಲಿಸಿದರೆ ಅತಿ ಕಡಿಮೆ ಪ್ರಕರಣಗಳು ದಾಖಲಾಗಿವೆ.

ಅಂತೆಯೇ ಅತಿ ಹೆಚ್ಚು ಪ್ರಕರಣಗಳು ವಿಲೇವಾರಿಯಾದ ಜಿಲ್ಲೆಗಳಲ್ಲಿ ಬೆಂಗಳೂರು ನಗರ (14822), ಮೈಸೂರು (3840), ತುಮಕೂರು (2188), ಬಳ್ಳಾರಿ (1806) ಹಾಗೂ ದಕ್ಷಿಣ ಕನ್ನಡ (1477) ಅಗ್ರಸ್ಥಾನದಲ್ಲಿವೆ.

ಈ ಕುರಿತಂತೆ ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾಹಿತಿ ಹಂಚಿಕೊಂಡಿರುವ ಭೀಮನಗೌಡ ಅವರು “ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಾನವ ಹಕ್ಕು ಉಲ್ಲಂಘನೆಯಾಗುತ್ತಿದ್ದರೂ ಅವುಗಳ ವಿರುದ್ಧ ಧ್ವನಿ ಎತ್ತಿ ಪ್ರಕರಣ ದಾಖಲಿಸುವವರ ಸಂಖ್ಯೆ ಕಡಿಮೆ ಇರುವುದು ನಿರಾಸೆಯ ಸಂಗತಿ” ಎಂದಿದ್ದಾರೆ.

“ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಕೊರತೆಯೂ ಇದಕ್ಕೆ ಕಾರಣ. ಆಯೋಗ ಈ ನಿಟ್ಟಿನಲ್ಲಿ ಗಮನ ಹರಿಸಬೇಕು” ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿವರಗಳನ್ನು ಗಮನಿಸಿ: