ಕೌಶಲ್ಯದ ಆಟವೇ ಇರಲಿ ಅಥವಾ ಅವಕಾಶದ ಆಟವೇ ಇರಲಿ, ಇಲ್ಲವೇ ಎರಡರ ಮಿಶ್ರಣವಾಗಿದ್ದರೂ ಹಣಕಾಸು ವಹಿವಾಟು ನಡೆಯುತ್ತಿದ್ದರೆ ಆ ಎಲ್ಲ ವಿಧದ ಆಟಗಳನ್ನು ಆನ್‌ಲೈನ್ ಹಣದ ಆಟ ಎಂದು ವರ್ಗೀಕರಿಸಿ ನಿಷೇಧಿಸಲು ಮುಂದಾದ ಕೇಂದ್ರ ಸರ್ಕಾರದ ಕ್ರಮದ ಸಾಂವಿಧಾನಿಕ ಸಿಂಧುತ್ವ, ಒಕ್ಕೂಟ ವ್ಯವಸ್ಥೆ ಮೇಲೆ ಹಾಗೂ ಚಾಲ್ತಿಯಲ್ಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಾಜ್ಯಗಳ ಮೇಲೆ ಅದು ಬೀರುವ ಪರಿಣಾಮ ತೀವ್ರ ಚರ್ಚೆ ಹುಟ್ಟುಹಾಕಿದೆ.
ಆನ್‌ಲೈನ್ ಹಣದ ಆಟಗಳ ಕಾರ್ಯಾಚರಣೆ ಮತ್ತು ಅವುಗಳಿಗೆ ಸಂಬಂಧಿಸಿದ ಹಣಕಾಸು ವಹಿವಾಟನ್ನು ಸಂಜ್ಞೇಯ ಮತ್ತು ಜಾಮೀನು ರಹಿತ ಅಪರಾಧ ಎಂದು ಕಟ್ಟುನಿಟ್ಟಾಗಿ ವರ್ಗೀಕರಿಸಲು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ- 2025 ಹೊರಟಿದೆ.
ಮಸೂದೆಯ ಸಾಧಕ- ಬಾಧಕಗಳ ಕುರಿತು ಚರ್ಚಿಸಲು ಹಿರಿಯ ನ್ಯಾಯವಾದಿ ಅಭಿಷೇಕ್ ಮಲ್ಹೋತ್ತಾ ಅವರನ್ನು ʼಬಾರ್ ಅಂಡ ಬೆಂಚ್ʼ ಇಂಗ್ಲಿಷ್ ಆವೃತ್ತಿಗಾಗಿ ಪತ್ರಕರ್ತ ಎಸ್ ಎನ್ ತ್ಯಾಗರಾಜನ್ ಸಂದರ್ಶಿಸಿದ್ದಾರೆ. ಪ್ರಸ್ತಾವಿತ ಕಾನೂನಿಗೆ ಎದುರಾಗಲಿರುವ ಸಾಂವಿಧಾನಿಕ ಸವಾಲುಗಳು ಮತ್ತು ಗೇಮಿಂಗ್ ಉದ್ಯಮದ ಮೇಲೆ ಅದರ ಪರಿಣಾಮಗಳು ಜೊತೆಗೆ ಬಾಕಿ ಇರುವ ಜಿಎಸ್‌ಟಿ ವ್ಯಾಜ್ಯಗಳ ಕುರಿತು ಮಲ್ಹೋತ್ರಾ ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದು ಅದರ ಪ್ರಮುಖಾಂಶಗಳನ್ನು ಇಲ್ಲಿ ನೀಡಲಾಗಿದೆ.
ಸಂದರ್ಶನದ ಪ್ರಮುಖಾಂಶಗಳು
ಆನ್‌ಲೈನ್ ಹಣದ ಆಟ ಅಪರಾಧೀಕರಿಸುವುದು ಅತ್ಯಂತ ಕರಾಳ ಸಂಗತಿ.
ಸಂವಿಧಾನಾತ್ಮಕ ರಕ್ಷಣೆ ಪಡೆಯದ ಅವಕಾಶದ ಆಟಗಳು ಮತ್ತು ಸಂವಿಧಾನದ ರಕ್ಷಣೆ ಪಡೆದ ಕೌಶಲ್ಯದ ಆಟಗಳ ನಡುವೆ ಸುಪ್ರೀಂ ಕೋರ್ಟ್ ಬಹಳ ಹಿಂದಿನಿಂದಲೂ ಸ್ಪಷ್ಟ ವ್ಯತ್ಯಾಸ ಗುರುತಿಸಿದ್ದು ಈ ಸಂಬಂಧ ಈಗಾಗಲೇ ತೀರ್ಪುಗಳನ್ನು ನೀಡಿದೆ.
ಈ ಆಟಗಳ ಸಂಪೂರ್ಣ ನಿಷೇಧಕ್ಕೆ ಅವಕಾಶ ಇಲ್ಲ. ಹಾಗೆ ಮಾಡುವುದು ಸಂವಿಧಾನದ 19(1)(ಎ) ವಿಧಿಯ ಉಲ್ಲಂಘನೆ ಆಗಬಹುದು ಏಕೆಂದರೆ ಅನೇಕ ಫ್ಯಾಂಟಸಿ ಆಟ ಮತ್ತು ಸೃಜನಾತ್ಮಕ ಆಟಗಳು ಕಲಾತ್ಮಕ ಅಭಿವ್ಯಕ್ತಿಯ ರೂಪ.
ಸಾಮಾಜಿಕ ಆಟಗಳು ಸೃಜನಶೀಲವಾಗಿರುವುದರಿಂದ ರಕ್ಷಿಸಲಾಗಿದೆ ಎಂದು ತೀರ್ಪುಗಳು ಪ್ರಕಟವಾಗಿರುವಾಗ ಬೆಟ್ಟಿಂಗ್ ಇದೆ ಎಂಬ ಕಾರಣಕ್ಕಾಗಿ ಸರ್ಕಾರ ಹೇಗೆ ಉಪ ವರ್ಗೀಕರಿಸಬಹುದು? ನನ್ನ ಅಭಿಪ್ರಾಯದಲ್ಲಿ, ಸರ್ಕಾರದ ನಡೆ ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಕೂಡ.
2023ರವರೆಗೆ ಕೌಶಲ್ಯದ ಆಟಗಳು ಕಾನೂನುಬದ್ದವಾಗಿದ್ದು, ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಈಗ ಅಂತಹ ಆಟಗಳ ಮೇಲೆ ಅತಿಯಾದ ತೆರಿಗೆ ವಿಧಿಸುತ್ತಿರುವುದು ಮತ್ತು ಆ ಆಟಗಳನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲು ಹೊರಟಿದೆ.
ಬೆಟ್ಟಿಂಗ್ ಮತ್ತು ಜೂಜಾಟ ರಾಜ್ಯ ಪಟ್ಟಿಯ ವ್ಯಾಪ್ತಿಗೆ ಬರಲಿದ್ದು ಕೇಂದ್ರ ಸರ್ಕಾರ ಮಸೂದೆ ರೂಪಿಸಲು ಹೊರಟಿರುವುದು ದೊಡ್ಡಮಟ್ಟದ ಸಂಘರ್ಷಕ್ಕೆ ಕಾರಣವಾಗಲಿದೆ. ಈ ಸಂಬಂಧ ಶಾಸನ ರೂಪಿಸುವ ಅಧಿಕಾರ ರಾಜ್ಯಗಳಿಗೆ ಇದೆ. ಜಿಎಸ್‌ಟಿ ಮಂಡಳಿಗೆ ಖುದ್ದು ಕೇಂದ್ರವೇ ಈ ವಿಚಾರ ತಿಳಿಸಿತ್ತು. ಹೀಗಿರುವಾಗ ಅದು ಉಲ್ಟಾ ಹೊಡೆಯಬಹುದೇ?
ಇದರಿಂದಾಗಿ ಎರಡು ರೀತಿಯ ಹೊಡೆತ ಬೀಳುತ್ತದೆ. ಒಂದು ಉದ್ಯಮ ತನ್ನ ವ್ಯವಹಾರ ಮಾದರಿ ಬದಲಿಸಿಕೊಳ್ಳಬೇಕು ಇಲ್ಲವೇ ಸಂಪೂರ್ಣ ಸ್ಥಗಿತಗೊಳಿಸಬೇಕು. ಮತ್ತೊಂದು ಜಿಎಸ್‌ಟಿಗೆ ಸಂಬಂಧಿಸಿದ್ದು. ಉದ್ಯಮ ಸೋತರೆ ಸರ್ಕಾರದ ಖಜಾನೆಗೆ ಪಾವತಿಸುವಂಥದ್ದು ಏನೂ ಇರುವುದಿಲ್ಲ.
ಸಂದರ್ಶನದ ವೀಡಿಯೊಗಾಗಿ ಇಲ್ಲಿ ಕ್ಲಿಕ್ಕಿಸಿ.