Police
Police  Representative image
ಸುದ್ದಿಗಳು

ಹಿಟ್ ಅಂಡ್ ರನ್ ಪ್ರಕರಣ: ಸಹೋದ್ಯೋಗಿಯ ಹಿತ ಕಾಯಲು ಮುಂದಾದ ತನಿಖಾಧಿಕಾರಿಗೆ ಬಾಂಬೆ ಹೈಕೋರ್ಟ್ ಛೀಮಾರಿ

Bar & Bench

ಹಿಟ್‌ ಅಂಡ್‌ ರನ್‌ ಪ್ರಕರಣವೊಂದರಲ್ಲಿ ಪೊಲೀಸ್‌ ಅಧಿಕಾರಿಯೂ ಆಗಿದ್ದ ಆರೋಪಿಯನ್ನು ರಕ್ಷಿಸಲು ಹೊರಟ ತನಿಖಾಧಿಕಾರಿಗೆ ಬಾಂಬೆ ಹೈಕೋರ್ಟ್‌ ಛೀಮಾರಿ ಹಾಕಿದೆ. ಅಷ್ಟೇ ಅಲ್ಲದೆ ತನಿಖಾಧಿಕಾರಿಯ ವಿರುದ್ಧ ಇಲಾಖಾ ತನಿಖೆ ನಡೆಸುವಂತೆಯೂ ಅದು ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪಪಟ್ಟಿ ಮತ್ತು ಶೋಕಾಸ್‌ ನೋಟಿಸ್‌ ಸಲ್ಲಿಸುವಂತೆ ಮತ್ತು ನ್ಯಾಯಾಲಯದ ನಿರ್ದೇಶನವನ್ನು ತಕ್ಷಣ ಜಾರಿಗೊಳಿಸುವಂತೆ ಪೊಲೀಸ್‌ ಕಮಿಷನರ್‌ ಅವರಿಗೆ ನ್ಯಾಯಮೂರ್ತಿಗಳಾದ ರವೀಂದ್ರ ವಿ ಘುಗೆ ಮತ್ತು ಬಿ ಯು ದೇಬದ್ವಾರ್ ಅವರಿದ್ದ ಪೀಠ ಸೂಚಿಸಿದೆ.

"ಆತ (ಆರೋಪಿ) ತಪ್ಪಿತಸ್ಥನೆಂದು ಸಾಬೀತಾದರೆ, ಅವನಿಗೆ ಗರಿಷ್ಠ ಶಿಕ್ಷೆ ವಿಧಿಸಲಾಗುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಏಕೆಂದರೆ ಪೊಲೀಸ್ ವ್ಯವಸ್ಥೆಯಲ್ಲಿ ಸಾಮಾನ್ಯ ಜನ ಮತ್ತು ಸಾರ್ವಜನಿಕರು ಇರಿಸಿರುವ ನಂಬಿಕೆ ಮತ್ತು ವಿಶ್ವಾಸವನ್ನು ಮರಳಿ ಸ್ಥಾಪಿಸುವ ಏಕೈಕ ಮಾರ್ಗ ಇದಾಗಿದೆ. ಇಲ್ಲದಿದ್ದರೆ ಇಂತಹ ಪ್ರಕರಣಗಳಲ್ಲಿ ಈ ಬಗೆಯ ಕೃತ್ಯಗಳಿಗಾಗಿ ಅದು ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಒಂದು ವರ್ಷ ಕಾಲ ವೇತನ ಬಡ್ತಿ ತಡೆ ಹಿಡಿದಿರುವುದು ತನಿಖಾಧಿಕಾರಿ ಎಸಗಿದ ಲೋಪದ ಗಹನತೆ ಮತ್ತು ಗಂಭೀರತೆಯನ್ನು ಸರಿಗಟ್ಟುವುದಿಲ್ಲ.
ಬಾಂಬೆ ಹೈಕೋರ್ಟ್

ಅಪಘಾತದಲ್ಲಿ ಮೃತಪ ಟ್ಟ ಯುವತಿಯ ತಂದೆ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ. ಅಪರಾಧ ಸಂಬಂಧ ದೂರು ದಾಖಲಿಸಲಾದ ಪೊಲೀಸ್‌ ಠಾಣೆಯಲ್ಲಿಯೇ ಆರೋಪಿ ಪೊಲೀಸ್‌ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಅಧಿಕಾರಿಯನ್ನು ರಕ್ಷಿಸಲು ತನಿಖಾಧಿಕಾರಿ ಯತ್ನಿಸುತ್ತಿದ್ದಾರೆ. ಪ್ರಕರಣವನ್ನು ಅಪರಾಧ ತನಿಖಾ ವಿಭಾಗಕ್ಕೆ ವರ್ಗಾಯಿಸಬೇಕು ಮತ್ತು ತನಿಖಾಧಿಕಾರಿಯ ದೋಷಗಳ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ವಿಚಾರಣೆ ವೇಳೆ ತನಿಖಾಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲಾಯಿತು. ಆದರೆ "ಒಂದು ವರ್ಷ ಕಾಲ ವೇತನ ಬಡ್ತಿ ತಡೆ ಹಿಡಿದರೆ ಅದು ತನಿಖಾಧಿಕಾರಿ ಎಸಗಿದ ಲೋಪದ ಗಹನತೆ ಮತ್ತು ಗಂಭೀರತೆಗೆ ಪರಿಹಾರವಾಗದು. ಇದು ಕಣ್ಣೊರೆಸುವ ತಂತ್ರವಾಗಿದೆ. ಇಂತಹ ಪ್ರಕರಣಗಳಲ್ಲಿ ಅಸಹಾಯಕನಂತೆ ನ್ಯಾಯಾಲಯ ಮೂಕಪ್ರೇಕ್ಷಕನಾಗಿ, ಕಣ್ಮುಚ್ಚಿ ಅಥವಾ ಕುರುಡುಗಣ್ಣಾಗಿ ಕೂರಲು ಸಾಧ್ಯವಿಲ್ಲ” ಎಂದು ಪೀಠ ಕಿಡಿ ಕಾರಿತು.

ಪೊಲೀಸ್‌ ಅಧೀಕಾರಿಯ ಇಂತಹ ನಡವಳಿಕೆಗಳನ್ನು ನಿರ್ಲಕ್ಷಿಸಿದರೆ ನಾವು ನಮ್ಮ ಕರ್ತವ್ಯದಲ್ಲಿ ವಿಫಲರಾಗುತ್ತೇವೆ.
ಬಾಂಬೆ ಹೈಕೋರ್ಟ್

ಆರೋಪಿ ಅಧಿಕಾರಿ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಭಾಗವಹಿಸಿದ್ದನ್ನು ಗಮನಿಸಿದ ನ್ಯಾಯಾಲಯ ಆರೋಪ ಕೇಳಿ ಬಂದ ತಕ್ಷಣವೇ ಆರೋಪಿಯನ್ನು ವರ್ಗಾವಣೆ ಮಾಡಿದ್ದರೆ ಶ್ಲಾಘನೀಯ ಕಾರ್ಯವಾಗುತ್ತಿತ್ತು ಎಂದಿತು. ಅಲ್ಲದೆ ಆರೋಪಿಯ ಲೋಪದೋಷಗಳ ಕುರಿತು ತನಿಖಾಧಿಕಾರಿ ಮೌನವಾಗಿದ್ದರ ಕುರಿತು ಅದು ಟೀಕಿಸಿತು. “ಪೊಲೀಸ್‌ ಅಕಾರಿಯ ಇಂತಹ ನಡವಳಿಕೆಗಳನ್ನು ನಿರ್ಲಕ್ಷಿಸಿದರೆ ನಾವು ನಮ್ಮ ಕರ್ತವ್ಯದಲ್ಲಿ ವಿಫಲರಾಗುತ್ತೇವೆ. ಈ ಹಿಂದೆ ಆರಂಭಿಕ ಹಂತದಲ್ಲಿ ಪ್ರಕರಣದ ವಿಚಾರಣೆ ನಡೆದಾಗ ಹೈಕೋರ್ಟ್‌ನ ಸಂಯೋಜನಾ ಪೀಠ, ಪೊಲೀಸ್‌ ಅಧಿಕಾರಿಯ ವಿರುದ್ಧ ಆರೋಪ ಕೇಳಿ ಬಂದಾಗ ತನಿಖಾಧಿಕಾರಿ ವಿಶೇಷ ಎಚ್ಚರವಹಿಸಬೇಕು ಎಂದು ಹೇಳಿದ್ದನ್ನು ನ್ಯಾಯಾಲಯ ಸ್ಮರಿಸಿತು.