Madras High Court and MS Dhoni
Madras High Court and MS Dhoni  Facebook
ಸುದ್ದಿಗಳು

ಧೋನಿ ಹೂಡಿದ್ದ ನ್ಯಾಯಾಂಗ ನಿಂದನೆ ಪ್ರಕರಣ: ಐಪಿಎಸ್ ಅಧಿಕಾರಿ ಸಂಪತ್‌ಗೆ 15 ದಿನಗಳ ಜೈಲು ಶಿಕ್ಷೆ

Bar & Bench

ಕ್ರಿಕೆಟಿಗ ಎಂ ಎಸ್‌ ಧೋನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಅವರಿಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ.

ನ್ಯಾಯಮೂರ್ತಿಗಳಾದ ಎಸ್ ಎಸ್ ಸುಂದರ್ ಮತ್ತು ಸುಂದರ್ ಮೋಹನ್ ಅವರ ನೇತೃತ್ವದ ವಿಭಾಗೀಯ ಪೀಠವು ಕುಮಾರ್ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ಶಿಕ್ಷೆಯನ್ನು ಮೂವತ್ತು ದಿನಗಳವರೆಗೆ ಅಮಾನತುಗೊಳಿಸಿತು.

2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ದುರುದ್ದೇಶಪೂರಿತ ಹೇಳಿಕೆ ಮತ್ತು ಸುದ್ದಿ ವರದಿಗಳ ಆರೋಪದ ಮೇಲೆ ಧೋನಿ ಅವರು ಜೀ ಮೀಡಿಯಾ, ಕುಮಾರ್ ಮತ್ತು ಇತರರ ವಿರುದ್ಧ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಐಪಿಎಲ್ ಬೆಟ್ಟಿಂಗ್ ಹಗರಣದ ಬಗ್ಗೆ ಆರಂಭದಲ್ಲಿ ತನಿಖೆ ನಡೆಸಿದ ಕುಮಾರ್ ಸೇರಿದಂತೆ ಪ್ರತಿವಾದಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡುವುದು ಅಥವಾ ಪ್ರಕಟಿಸುವುದನ್ನು ತಡೆಯಲು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಪ್ರಯತ್ನಿಸಿದ್ದರು.

ಧೋನಿ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ಝೀ, ಕುಮಾರ್ ಮತ್ತು ಇತರರಿಗೆ ಹೈಕೋರ್ಟ್ ಈ ಹಿಂದೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ತರುವಾಯ, ಝೀ ಮತ್ತು ಇತರರು ಮಾನನಷ್ಟ ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ ತಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸಿದ್ದರು. ಲಿಖಿತ ಹೇಳಿಕೆಗಳ ನಂತರ, ಕುಮಾರ್ ತಮ್ಮ ಲಿಖಿತ ಸಲ್ಲಿಕೆಗಳಲ್ಲಿ ಮತ್ತಷ್ಟು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಧೋನಿ ಅರ್ಜಿ ಸಲ್ಲಿಸಿದರು. ಆದ್ದರಿಂದ, ಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ಕೋರಿದ್ದರು. ಎಂ ಎಸ್ ಧೋನಿ ಪರವಾಗಿ ವಕೀಲ ಪಿ ಆರ್ ರಾಮನ್ ವಾದ ಮಂಡಿಸಿದ್ದರು.