Madras High Court and MS Dhoni  Facebook
ಸುದ್ದಿಗಳು

ಐಪಿಎಲ್ ಬೆಟ್ಟಿಂಗ್ ಹಗರಣ: ಧೋನಿ ಎತ್ತಿರುವ ಪ್ರಶ್ನೆಗಳ ವಿರುದ್ಧ ಮದ್ರಾಸ್ ಹೈಕೋರ್ಟ್‌ ಮೆಟ್ಟಿಲೇರಿದ ಜೀ ಮೀಡಿಯಾ

ಯಾವುದೇ ಮಧ್ಯಂತರ ತಡೆಯಾಜ್ಞೆ ನೀಡಲು ಬುಧವಾರ ನಿರಾಕರಿಸಿದ ಪೀಠ ಜೀ ಮನವಿಯನ್ನು ಮಾರ್ಚ್ 13ರಂದು ಆಲಿಸುವುದಾಗಿ ತಿಳಿಸಿತು.

Bar & Bench

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಜೀ  ಮಾಧ್ಯಮ ಸಂಸ್ಥೆ ವಿರುದ್ಧ 2014ರಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಅವರು ಎತ್ತಿರುವ ಪ್ರಶ್ನಾವಳಿಯನ್ನು (ಇದನ್ನು ಇಂಟೆರೊಗೇಟರೀಸ್‌ ಎನ್ನುತ್ತಾರೆ. ಒಬ್ಬ ಪಕ್ಷಕಾರ ಕೇಳಿದ ಪ್ರಶ್ನೆಗಳಿಗೆ ಮತ್ತೊಬ್ಬ ಪಕ್ಷಕಾರ  ಲಿಖಿತ ಉತ್ತರ ನೀಡುವ ಪ್ರಕ್ರಿಯೆ) ಬದಿಗೆ ಸರಿಸುವಂತೆ ಜೀ ಮೀಡಿಯಾ ಕಾರ್ಪೊರೇಷನ್‌ ಬುಧವಾರ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದೆ.

ಧೋನಿ ಅವರ ಪ್ರಶ್ನಾವಳಿಯನ್ನು ಬದಿಗೆ ಸರಿಸುವಂತೆ ತಾನು ಮಾಡಿದ್ದ ಮನವಿಯನ್ನು ನಿರಾಕರಿಸಿ  ಏಕಸದಸ್ಯ ಪೀಠವು ನವೆಂಬರ್ 11, 2022ರಲ್ಲಿ ನೀಡಿದ್ದ ಆದೇಶವನ್ನು ಜೀ ಪ್ರಶ್ನಿಸಿದೆ.

ಯಾವುದೇ ಮಧ್ಯಂತರ ತಡೆಯಾಜ್ಞೆ ನೀಡಲು ಬುಧವಾರ ನಿರಾಕರಿಸಿದ ನ್ಯಾಯಮೂರ್ತಿಗಳಾದ ಆರ್ ಮಹದೇವನ್ ಮತ್ತು ಮೊಹಮ್ಮದ್ ಶಫೀಕ್ ಅವರಿದ್ದ ಪೀಠ ಜೀ ಮನವಿಯನ್ನು ಮಾರ್ಚ್ 13, ಸೋಮವಾರದಂದು ಆಲಿಸಲು ಸಮ್ಮತಿಸಿತು.

2013ರಲ್ಲಿ ಐಪಿಎಲ್ ಪಂದ್ಯಗಳ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಧೋನಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ  ದೋಷಪೂರಿತ ಹೇಳಿಕೆ ಹಾಗೂ ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ಆಕ್ಷೇಪಿಸಿ ಜೀ ಮಾಧ್ಯಮ, ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಹಾಗೂ ಇತರರ ವಿರುದ್ಧ ಧೋನಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಆರಂಭದಲ್ಲಿ ಐಪಿಎಲ್ ಬೆಟ್ಟಿಂಗ್ ಹಗರಣದ ತನಿಖೆ ನಡೆಸಿದ್ದ ಸಂಪತ್‌ ಕುಮಾರ್ ಸೇರಿದಂತೆ ಪ್ರತಿವಾದಿಗಳು ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ಧೋನಿ ತಡೆಯಲು ಯತ್ನಿಸಿದ್ದರು. ಆಗ ಮಧ್ಯಂತರ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್‌ ಧೋನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಜೀ, ಸಂಪತ್‌ ಕುಮಾರ್‌ ಹಾಗೂ ಇತರರಿಗೆ ನಿರ್ಬಂಧ ವಿಧಿಸಿತ್ತು.

ತರುವಾಯ, ಜೀ ಮತ್ತಿತ್ತರರು ದಾವೆಗೆ ಸಂಬಂಧಿಸಿದಂತೆ ತಮ್ಮ ಲಿಖಿತ ಹೇಳಿಕೆ ಸಲ್ಲಿಸಿದರು. ಆದರೆ ಈ ಹೇಳಿಕೆಗಳಲ್ಲಿ ತಮಗೆ ಮತ್ತಷ್ಟು ಮಾನಹಾನಿ ಉಂಟಾಗಿದೆ ಎಂದು ಧೋನಿ ಅರ್ಜಿ ಸಲ್ಲಿಸಿದರು. ಹೀಗಾಗಿ, ಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಪ್ರಾರ್ಥಿಸಿದ್ದರು.

ಕಳೆದ ವರ್ಷ ಜುಲೈನಲ್ಲಿ ಜೀ ಸಲ್ಲಿಸಿದ್ದ ಲಿಖಿತ ಹೇಳಿಕೆ ʼಸಾಮಾನ್ಯೀಕರಣದಿಂದ ಕೂಡಿದ್ದು ಯಾವುದೇ ನಿರ್ದಿಷ್ಟ ಆಪಾದನೆ ಇಲ್ಲʼ ಎಂದು ತಿಳಿಸಿದ ಧೋನಿ 17 ಪ್ರಶ್ನೆಗಳಿರುವ ಪ್ರಶ್ನಾವಳಿಯನ್ನು ನೀಡಲು ತಮಗೆ ಅವಕಾಶ ನೀಡಬೇಕು ಎಂದು ಹೈಕೋರ್ಟ್‌ನ ಮತ್ತೊಂದು ಪೀಠವನ್ನು ಕೋರಿದ್ದರು. ಇದಕ್ಕೆ ನ್ಯಾಯಾಲಯ ಸಮ್ಮತಿಸಿತ್ತು. ಈ ಪ್ರಶ್ನೆಗಳನ್ನು ಬದಿಗೆ ಸರಿಸುವಂತೆ ಕೋರಿ ಇದೀಗ ಜೀ ಹೈಕೋರ್ಟ್‌ ಮೆಟ್ಟಿಲೇರಿದೆ.