ಸರ್ಕಾರಿ ಅಧಿಕಾರಿಗಳಿಂದ ಸುಲಿಗೆ ಆರೋಪದಲ್ಲಿ ನಿರೀಕ್ಷಣಾ ಜಾಮೀನು ಕೋರಿರುವ ಲೋಕಾಯುಕ್ತದ ಹಿಂದಿನ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಶಿ ಅವರು ಹಾನಿಗೊಳಿಸಿ ಎರಡು ಮೊಬೈಲ್‌ಗಳನ್ನು ತನಿಖಾಧಿಕಾರಿಗೆ ನೀಡಿದ್ದು, ಅಲ್ಲಿದ್ದ ದತ್ತಾಂಶವನ್ನು ಅಳಿಸಿ ಹಾಕಲಾಗಿದೆ ಎಂದು ಲೋಕಾಯುಕ್ತವು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ಸರ್ಕಾರಿ ಅಧಿಕಾರಿಗಳ ಸುಲಿಗೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಶ್ರೀನಾಥ್ ಜೋಶಿ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಲೋಕಾಯುಕ್ತ ಪರ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ್ ಅರಬಟ್ಟಿ ಅವರು “ಗಂಭೀರ ಆಪಾದನೆಗಳು ಇರುವುದರಿಂದ ಪ್ರಕರಣದಲ್ಲಿ ಶ್ರೀನಾಥ್ ಜೋಶಿ ಅವರನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ. ತನಿಖೆಯ ವೇಳೆ ಹಾನಿಗೊಳಿಸಿರುವ ಎರಡು ಮೊಬೈಲ್‌ಗಳನ್ನು ಜೋಶಿ ನೀಡಿದ್ದಾರೆ. ಆದರೆ, ಮೊಬೈಲ್ ದತ್ತಾಂಶಗಳನ್ನು ಅಳಿಸಿ ಹಾಕಲಾಗಿದೆ” ಎಂದರು.
“ಸೇವೆಯಿಂದ ವಜಾಗೊಂಡಿರುವ ಮೊದಲ ಆರೋಪಿ ನಿಂಗಪ್ಪ ಸಾವಂತ್ ಜೊತೆ ಭೌತಿಕವಾಗಿ ಮತ್ತು ಮೊಬೈಲ್‌ನಲ್ಲಿ ಶ್ರೀನಾಥ್ ಜೋಶಿ ಸಂಪರ್ಕದಲ್ಲಿದ್ದರು. ಇದಕ್ಕೆ ಪೂರಕವಾಗಿ ಆಡಿಯೊ ಮತ್ತು ಫೋಟೊಗಳು ಲಭ್ಯವಾಗಿವೆ. ಆರೋಪಗಳು ಗಂಭೀರವಾಗಿದ್ದು, ತನಿಖೆ ನಡೆಯುತ್ತಿದೆ. ಇದೇ ಕಾರಣಕ್ಕೆ ವಿಚಾರಣಾಧೀನ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿಲ್ಲ. ಇಲ್ಲಿ ಜೋಶಿಗೆ ಯಾವುದೇ ಬಂಧನ ಆತಂಕವಿಲ್ಲ” ಎಂದರು.
ಶ್ರೀನಾಥ್ ಜೋಶಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಅವರು “ತನಿಖೆಗೆ ಹಾಜರಾಗಿದ್ದ ಜೋಶಿ ಅವರು ಎರಡು ಮೊಬೈಲ್‌ಗಳನ್ನು ತನಿಖಾಧಿಕಾರಿಗೆ ನೀಡಿದ್ದು, ಅವುಗಳನ್ನು ವಿಧಿ ವಿಜ್ಞಾನ ವಿಶ್ಲೇಷಣೆಗೆ ಕಳುಹಿಸಿಕೊಡಲಾಗಿದೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬಳಿಕ ಜೋಶಿ ಅವರನ್ನು ಪ್ರಕರಣದಲ್ಲಿ ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ” ಎಂದರು.
"ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ನಿಂಗಪ್ಪ ಸಾವಂತ್‌ಗೆ ಜೋಶಿ ನಿರ್ದೇಶನ ನೀಡಿದ್ದಾರೆ ಎಂಬುದಕ್ಕೆ ಪೂರಕವಾಗಿ ದಾಖಲೆ ನೀಡಬೇಕು. ಅದನ್ನು ಲೋಕಾಯುಕ್ತ ಪೊಲೀಸರು ನೀಡಿಲ್ಲ. ಇನ್ನು, ಈ ಪ್ರಕರಣದಲ್ಲಿ ನಿಂಗಪ್ಪಗೆ ಜಾಮೀನು ದೊರೆತಿದೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬಳಿಕ ಜೋಶಿ ಅವರ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಶೋಧ ನಡೆಸಿ ಕೇವಲ 32 ಸಾವಿರ ರೂಪಾಯಿ ಜಪ್ತಿ ಮಾಡಿದ್ದಾರೆ. ಹೀಗಾಗಿ, ಜಪ್ತಿಯ ಸಂದರ್ಭದಲ್ಲೂ ಏನೂ ಮಹತ್ವದ ದಾಖಲೆಗಳು ದೊರೆತಿಲ್ಲ” ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಸಮಯಾವಕಾಶದ ಕೊರತೆಯ ಹಿನ್ನೆಲೆಯಲ್ಲಿ ಶ್ರೀನಾಥ್ ಜೋಶಿಯನ್ನು ಬಂಧಿಸದಂತೆ ನಿರ್ದೇಶಿಸಿರುವ ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಮೊದಲ ಆರೋಪಿ ನಿಂಗಪ್ಪ ಸಾವಂತ್ ಜೊತೆಗೂಡಿ ಲೋಕಾಯುಕ್ತ ನಗರ ವಿಭಾಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶ್ರೀನಾಥ್ ಜೋಶಿ ಅವರು ಪಿತೂರಿ ನಡೆಸಿ ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳಿಂದ ಹಣ ಸುಲಿಗೆ ಮಾಡುವ ಕೆಲಸದಲ್ಲಿ ನಿರತರಾಗಿದ್ದರು ಎಂದು ಆರೋಪಿಸಲಾಗಿದೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸಲಿದ್ದಾರೆ ಎಂದು ಸಾವಂತ್ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಜೋಶಿ ಕರೆ ಮಾಡಿಸಿ, ಅವರಿಂದ ಹಣ ವಸೂಲಿ ಮಾಡುತ್ತಿದ್ದರು. ಇಲ್ಲಿ ಸಂಗ್ರಹಿಸಿದ ಲಕ್ಷಾಂತರ ರೂಪಾಯಿ ಹಣವನ್ನು ಬಿಟ್‌ಕಾಯಿನ್‌ನಲ್ಲಿ ತೊಡಗಿಸಿದ್ದರು ಎಂದು ಆರೋಪಿಸಲಾಗಿದೆ.