ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ನಡೆಸಿದ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ವೈದ್ಯರೊಬ್ಬರ ವಿರುದ್ಧ ಸಿಬಿಐ ನಡೆಸುತ್ತಿರುವ ಕ್ರಿಮಿನಲ್ ಪ್ರಕ್ರಿಯೆ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ಸಿಬಿಐ ತನಿಖೆ ಪ್ರಶ್ನಿಸಿ ಡಾ. ನೇಹಾ ಬನ್ಸಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
“ಕೆಲವು ಸಾಕ್ಷಿಗಳ ಹೇಳಿಕೆಯನ್ನು ಆಧರಿಸಿ ಅರ್ಜಿದಾರರನ್ನು ಆರೋಪ ಮುಕ್ತಗೊಳಿಸಲಾಗದು. ಪ್ರಕರಣದ ಸಂಪೂರ್ಣ ವಿಚಾರಣೆ ನಡೆಯುವ ಅಗತ್ಯವಿದೆ” ಎಂದು ನ್ಯಾಯಾಲಯವು ಹೇಳಿದೆ.
“ಇಬ್ಬರು ಸಾಕ್ಷಿಗಳ ಹೇಳಿಕೆ ಮತ್ತು ಕೆಲವು ದಾಖಲೆಗಳ ಆಧಾರದಲ್ಲಿ ಅರ್ಜಿದಾರರನ್ನು ಆರೋಪ ಮುಕ್ತಗೊಳಿಸಲಾಗದು. ಪಾಲಿಗ್ರಾಫ್ ಪರೀಕ್ಷೆ ಆಧಾರವಾದರೂ ಸಾಕ್ಷ್ಯವು ಹೇಳಿಕೆಗಳು ಮತ್ತು ದಾಖಲೆಯನ್ನು ಆಧರಿಸಿದೆ. ಹೀಗಾಗಿ, ಈ ಹೇಳಿಕೆಗಳನ್ನು ವಿಚಾರಣೆಯಲ್ಲಿ ಪರಿಶೀಲನೆಗೆ ಒಳಪಡಿಸಬೇಕಿದ್ದು, ಅರ್ಜಿದಾರರು ಅಲ್ಲಿ ಆರೋಪ ಮುಕ್ತವಾಗಿ ಹೊರಬರಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.
ಲಿಖಿತ ಪರೀಕ್ಷೆಯಲ್ಲಿ ಅತಿಹೆಚ್ಚು ಶೇಕಡಾವಾರು ಅಂಕ ಪಡೆದು ಅರ್ಜಿದಾರರು ಯಶಸ್ವಿಯಾಗಿದ್ದರಿಂದ 2006ರಲ್ಲಿ ಆರ್‌ಜಿಯುಎಚ್‌ಎಸ್‌ನಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ ಕಲ್ಪಿಸಲಾಗಿದೆ ಎಂಬುದು ಪ್ರಾಸಿಕ್ಯೂಷನ್ ವಾದವಾಗಿದೆ. ಆದರೆ, ಶೈಕ್ಷಣಿಕವಾಗಿ ಹೆಚ್ಚು ಅಂಕ ಗಳಿಸದ ವಿದ್ಯಾರ್ಥಿಗಳು ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ಮಾತ್ರ ಹೆಚ್ಚು ಅಂಕ ಪಡೆದಿದ್ದಾರೆ ಎಂಬ ಆರೋಪಗಳನ್ನು ಒಳಗೊಂಡ ವರದಿಗಳನ್ನು ಮಾಧ್ಯಮಗಳು ಪ್ರಕಟಿಸಿದ್ದವು. ಈ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆ ಅಕ್ರಮ ಕುರಿತು ತನಿಖೆ ನಡೆಸಲು ಸರ್ಕಾರವು ಸಮಿತಿ ರಚಿಸಿತ್ತು.
ಸಮಿತಿಯ ವರದಿಯ ಆಧರಿಸಿ ಪ್ರಕರಣದ ಹಿಂದಿನ ಪಿತೂರಿ ಪತ್ತೆ ಹಚ್ಚಲು ಅದನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ 2005-2007ರ ನಡುವೆ ಆರ್‌ಜಿಯುಎಚ್‌ಎಸ್‌ನ ಅಂದಿನ ಕುಲಪತಿ, ರಿಜಿಸ್ಟ್ರಾರ್ ಮತ್ತು ಸಹಾಯಕ ರಿಜಿಸ್ಟ್ರಾರ್ ಡಾ. ಹನುಮಂತ ಪ್ರಸಾದ್ ಅವರು ಕೆಲವು ವಿದ್ಯಾರ್ಥಿಗಳ ಜೊತೆ ಸೇರಿ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಅಭ್ಯರ್ಥಿಗಳಿಗೆ ಸೋರಿಕೆ ಮಾಡಿದ್ದರು ಎಂದು ತಿಳಿದು ಬಂದಿತ್ತು.
ಅರ್ಜಿದಾರರು ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿದ್ದು, ಅವರ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್ 13(1)(ಡಿ), 13(2), ಐಪಿಸಿ ಸೆಕ್ಷನ್‌ಗಳಾದ 409, 420, 120ಬಿ ಅಡಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ಅರ್ಜಿದಾರೆಯು ವಿಶೇಷ ನ್ಯಾಯಾಲಯಕ್ಕೆ ಕೋರಿದ್ದರು. ಅದು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.