ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ನಟ ದರ್ಶನ್‌ಗೆ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಒಂದು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ.
ಮಧ್ಯಂತರ ಜಾಮೀನು ಕೋರಿ ನಟ ದರ್ಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ವಿಜಯ್ ಬಿಷ್ಣೋಯ್ ಅವರ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿತು.
ದರ್ಶನ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು “262 ಸಾಕ್ಷಿಗಳ ವಿಚಾರಣೆ ಪೈಕಿ 10 ಸಾಕ್ಷಿಗಳ ವಿಚಾರಣೆಯಾಗಿದೆ. ದರ್ಶನ್ ಅವರು ಸುಮಾರು ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ. ದರ್ಶನ್‌ಗೆ ಐಷಾರಾಮಿ ಸೌಲಭ್ಯ ಕಲ್ಪಿಸಬಾರದು ಎಂದು ಇದೇ ನ್ಯಾಯಾಲಯ ಆದೇಶಿಸಿದೆ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಈ ನಿರ್ದೇಶದಿಂದ ದರ್ಶನ್‌ಗೆ ಮೂಲಸೌಲಭ್ಯವೂ ಸಿಗುತ್ತಿಲ್ಲ” ಎಂದರು.
“ಸಾಮಾನ್ಯ ಆರೋಪಿಗೆ ದೊರಕುವ ಸೌಲಭ್ಯವೂ ದರ್ಶನ್‌ಗೆ ಸಿಗುತ್ತಿಲ್ಲ. ದರ್ಶನ್‌ರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಅಲ್ಲಿ ಬೆಳಕೂ ಇಲ್ಲ, ಊಟವನ್ನೂ ತರಿಸಿಕೊಳ್ಳಲಾಗುತ್ತಿಲ್ಲ. ಈ ಸಂಬಂಧ ವಿಚಾರಣಾ ನ್ಯಾಯಾಲಯ ಮನವಿ ಸಲ್ಲಿಸಲಾಗಿತ್ತು. ಆ ನ್ಯಾಯಾಲಯವು ಸುಪ್ರೀಂ ಕೋರ್ಟ್ ಆದೇಶದಿಂದ ನಿಮಗೆ ಕೊಡಲಾಗುತ್ತಿಲ್ಲ ಎನ್ನುತ್ತಿದೆ” ಎಂದರು.
ಇದನ್ನು ಆಲಿಸಿದ ಪೀಠವು “ವಿಚಾರಣಾ ಕೈದಿ ಅರ್ಹವಾಗಿ ಪಡೆಯಬಹುದಾದ ಮೂಲ ಸೌಲಭ್ಯವನ್ನು ದರ್ಶನ್‌ಗೆ ನೀಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕು” ಎಂದು ಆದೇಶಿಸಿದ ನ್ಯಾಯಾಲಯ.
“ಎಷ್ಟು ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಎಷ್ಟು ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ವಿಚಾರಣೆ ನಡೆಸಲು ಪ್ರಸ್ತಾಪಸಿತ್ತು? ಇದರಿಂದ ವಿಚಾರಣೆ ಮುಗಿಯಲು ಎಷ್ಟು ಸಮಯಬೇಕಾಗುತ್ತದೆ ಎಂಬುದು ತಿಳಿಯಲಿದೆ. ಹೀಗಾಗಿ, ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯದಿಂದ ರಿಜಿಸ್ಟ್ರಿ ವರದಿ ಒಂದು ವಾರದಲ್ಲಿ ವರದಿ ತರಿಸಿಕೊಳ್ಳಬೇಕು” ಎಂದು ಆದೇಶಿಸಿತು. ಅಲ್ಲದೇ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಸರ್ವೋಚ್ಚ ನ್ಯಾಯಾಲಯವು ವಿಚಾರಣೆ ಮುಂದೂಡಿತು.
ಪ್ರಕರಣದಲ್ಲಿ ಒಟ್ಟು 262 ಸಾಕ್ಷಿಗಳಿದ್ದು , ಈ ಪೈಕಿ ಇದುವರೆಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಹೀಗಾಗಿ, ವಿಚಾರಣೆಗೆ ಸಾಕಷ್ಟು ಸಮಯ ಹಿಡಿಯಲಿದೆ. ಬಹುಕಾಲ ಜೈಲಿನಲ್ಲಿ ಉಳಿಯುವುದರಿಂದ ವೃತ್ತಿಗೆ ಹೊಡೆತ ಬೀಳಲಿದ್ದು, ವ್ಯವಹಾರ ಮತ್ತು ವೃತ್ತಿ ಕೈಗೊಳ್ಳುವ ಹಕ್ಕಿಗೆ ಹಾನಿಯಾಗಲಿದೆ. ಬಹುಮುಖ್ಯವಾಗಿ ಸುದ್ದಿವಾಹಿನಿಗಳು ಪ್ರಕರಣದ ವಿಚಾರಣೆಯ ಕುರಿತು ಸುದ್ದಿ ಬಿತ್ತರಿಸುತ್ತಿರುವ ರೀತಿಯು ನ್ಯಾಯಯುತ ವಿಚಾರಣೆ ಹೊಂದುವ ಹಕ್ಕಿಗೆ ಭಾರಿ ಹಾನಿ ಉಂಟು ಮಾಡಿದೆ. ಈ ಎಲ್ಲಾ ಕಾರಣಗಳಿಗಾಗಿ ಜಾಮೀನು ನೀಡಬೇಕು ಎಂಬುದು ದರ್ಶನ್ ಮನವಿಯಾಗಿದೆ.
2024ರ ಜೂನ್ 9ರಂದು ಬೆಂಗಳೂರಿನ ರಾಜಕಾಲುವೆಯಲ್ಲಿ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿತ್ತು. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ನಟ ದರ್ಶನ್ ಅವರು ಇತರರ ಜೊತೆ ಸೇರಿ ಪಟ್ಟಣಗೆರೆಯ ಶೆಡ್‌ಗೆ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದರು. ಆನಂತರ ಮೃತದೇಹವನ್ನು ರಾಜಕಾಲುವೆಗೆ ಎಸೆದಿದ್ದರು ಎಂದು ಆರೋಪಿಸಲಾಗಿದೆ.
2024ರ ಅಕ್ಟೋಬರ್ 30ರಂದು ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಡಿಸೆಂಬರ್ 13ರಂದು ಜಾಮೀನನ್ನು ಕಾಯಂಗೊಳಿಸಿತ್ತು. 2025ರ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ದರ್ಶನ್ ಸೇರಿದಂತೆ ಐವರಿಗೆ ಮಂಜೂರಾಗಿದ್ದ ಜಾಮೀನು ರದ್ದುಪಡಿಸಿತ್ತು.
ಸುದ್ದಿವಾಹಿನಿಗಳ ಅತಿರೇಕದ ವರದಿಗಾರಿಕೆ ನಿರ್ಬಂಧಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ಭಾಗಶಃ ಪುರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.