Prof. Ravi Varma Kumar and Karnataka HC 
ಸುದ್ದಿಗಳು

[ಚರ್ಚ್‌ಗಳ ಮಾಹಿತಿ ಸಂಗ್ರಹ] ರಾಜ್ಯ ಸರ್ಕಾರ, ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಹೈಕೋರ್ಟ್‌ ನೋಟಿಸ್

ದತ್ತಾಂಶ ಸಂಗ್ರಹಿಸಲು ಶಾಸಕರು ನಿರ್ದೇಶನ ನೀಡುವಷ್ಟು ಸಮರ್ಥರೇ? ದತ್ತಾಂಶ ಸಂಗ್ರಹ ಮಾಡಲು ನಿರ್ದೇಶನ ನೀಡುವ ಅಧಿಕಾರ ಶಾಸನಸಭೆಯ ಸಮಿತಿಗೂ ಇಲ್ಲ ಎಂದು ಇದೇ ನ್ಯಾಯಾಲಯ ಹೇಳಿದೆ ಎಂದು ವಾದಿಸಿದ ಪ್ರೊ. ರವಿವರ್ಮ ಕುಮಾರ್.

Siddesh M S

ರಾಜ್ಯದಲ್ಲಿರುವ ಚರ್ಚ್‌ಗಳ ಕುರಿತು ಮಾಹಿತಿ ಸಂಗ್ರಹಿಸಲು ಜುಲೈ 7ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರು ಹಾಗೂ ರಾಮನಗರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ಸರ್ಕಾರೇತರ ಸಂಸ್ಥೆಯಾದ ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ಪ್ರತಿವಾದಿಗಳಿಗೆ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

ಪ್ರಕರಣದ ವಿಚಾರಣೆಯ ಆರಂಭದಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ರಾಜ್ಯದಲ್ಲಿನ ಎಲ್ಲಾ ಚರ್ಚ್‌ಗಳ ಕುರಿತು ಸಮೀಕ್ಷೆ ಮಾಡಲು ಅಲ್ಪಸಂಖ್ಯಾತರ ನಿರ್ದೇಶನಾಲಯ ಆದೇಶ ಮಾಡಿದ್ದು, ಮೂರು ದಿನಗಳಲ್ಲಿ ದತ್ತಾಂಶ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ಕ್ರಿಶ್ಚಿಯನ್ನರಿಗೆ ಕಿರುಕುಳ ನೀಡುವುದರ ಜೊತೆಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಸಮೀಕ್ಷೆಗೆ ಕ್ರಿಶ್ಚಿಯನ್ನರನ್ನೇ ಏಕೆ ಗುರಿಯಾಗಿಸಲಾಗಿದೆ? ಇದು ಸಂವಿಧಾನದ ಅಡಿ ದೊರೆತಿರುವ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ಆಕ್ಷೇಪಿಸಿದರು.

ಆಗ ಪೀಠವು “ದತ್ತಾಂಶ ಸಂಗ್ರಹಕ್ಕೆ ಮಾತ್ರ ಆದೇಶಿಸಲಾಗಿದೆ. ಇದು ಕ್ರಿಶ್ಚಿಯನ್ನರ ಬಗೆಗಿನ ವಿಚಾರವಲ್ಲ. ಚರ್ಚ್‌ಗಳ ಮಾಹಿತಿಗೆ ಸಂಬಂಧಿಸಿದ್ದು, ಅವರಿಂದ ಮಾತ್ರ ಮಾಹಿತಿ ಕೇಳಲಾಗುತ್ತಿದೆ” ಎಂದಿತು.

ಇದಕ್ಕೆ ಆಕ್ಷೇಪಿಸಿದ ರವಿವರ್ಮ ಕುಮಾರ್‌ ಅವರು “ಕ್ರಿಶ್ಚಿಯನ್ನರು ಚರ್ಚ್‌ಗಳನ್ನು ಮುನ್ನಡೆಸುತ್ತಾರೆಯೇ ವಿನಾ ಹಿಂದೂ, ಮುಸ್ಲಿಮರಲ್ಲ. 2008ರಲ್ಲಿ ಹೀಗೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಇದೇ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿತ್ತು. ಇಲ್ಲಿ ಕ್ರಿಶ್ಚಿಯನ್ನರನ್ನೇ ಕೇಂದ್ರಿತವಾಗಿಸಲಾಗಿದೆ” ಎಂದರು.

ಆಗ ಪೀಠವು “ಅಂದಿನ ಆದೇಶವು ರಾಮನಗರ ಜಿಲ್ಲೆಗೆ ಸೀಮಿತವಾಗಿತ್ತು. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ನಿರ್ದೇಶನಾಲಯವು ಮಾಹಿತಿ ಸಂಗ್ರಹಿಸುತ್ತಿರಬಹುದು. ಇದು ಹೇಗೆ ನಿಮ್ಮ ಹಕ್ಕಿನ ಉಲ್ಲಂಘನೆಯಾಗುತ್ತದೆ?" ಎಂದು ಪ್ರಶ್ನಿಸಿತು.

“2008ರ ಆದೇಶಕ್ಕೆ ಸಂಬಂಧಿಸಿದಂತೆ ಅಂದಿನ ಅಡ್ವೊಕೇಟ್‌ ಜನರಲ್‌ ಅವರು ಆದೇಶ ಹಿಂಪಡೆಯುವುದಾಗಿ ತಿಳಿಸಿದ್ದರು. ವಿಧಾನಸಭೆಯಲ್ಲಿ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಹಿಂದೂಗಳಿಗೆ ಆಮಿಷವೊಡ್ಡಿ ಕ್ರಿಶ್ಚಿಯನ್‌ ಮಿಷನರಿಗಳು ಮತಾಂತರ ಮಾಡುತ್ತಿವೆ ಎಂದು ಆರೋಪಿಸಿದ್ದರು. ಇದಕ್ಕಾಗಿ ಅವರು ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು.

ಗೂಳಿಹಟ್ಟಿ ಶೇಖರ್‌ ನಿರ್ದೇಶನದಂತೆ ಹೋಬಳಿ ಮಟ್ಟದಲ್ಲಿ ಕ್ರೈಸ್ತ ಧರ್ಮಕ್ಕೆ ಕಾನೂನುಬಾಹಿರವಾಗಿ ಮತಾಂತರಗೊಂಡಿರುವ ಹಿಂದೂಗಳ ಮಾಹಿತಿಯನ್ನು ಮನೆಮನೆಗೆ ತೆರಳಿ ಸಂಗ್ರಹಿಸುವಂತೆ ಗ್ರಾಮ ಲೆಕ್ಕಿಗರಿಗೆ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಾಟ್ಸಪ್‌, ಫೇಸ್‌ಬುಕ್‌ ಸಂದೇಶ ಪರಿಶೀಲಿಸುವಂತೆ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಆದೇಶ ಮಾಡಿದ್ದಾರೆ. ವಿಷಯ ಅತ್ಯಂತ ಗಂಭೀರವಾಗಿದ್ದು, ಅತ್ಯಂತ ಜಾಗರೂಕತೆ ವಹಿಸುವಂತೆ ಸೂಚಿಸಿದ್ದಾರೆ. ಇದನ್ನು ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇದು ಸಾಕಷ್ಟು ಪ್ರಾಮುಖ್ಯತೆ ಹೊಂದಿರುವ ತುರ್ತು ಅಗತ್ಯ ಹೊಂದಿರುವ ಪ್ರಕರಣ ಎನಿಸುವುದಿಲ್ಲವೇ? ಇದು ಕ್ರಿಶ್ಚಿಯನ್‌ ಸಮುದಾಯಕ್ಕೆ ನೀಡಲಾಗುತ್ತಿರುವ ಕಿರುಕುಳ ಎನಿಸುವುದಿಲ್ಲವೇ? ಎಂದು ಪ್ರಶ್ನಿಸಿದರು.

“ಯಾವುದೇ ಅಧಿಕಾರ ಇಲ್ಲದಿದ್ದರೂ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಧಾರ್ಮಿಕ ಕಿರುಕುಳ ನೀಡಲಾಗುತ್ತಿದೆ. ಸುಪ್ರೀಂ ಕೋರ್ಟ್‌ ಖಾಸಗಿ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಿದೆ. ಹೀಗಿರುವಾಗ ಸರ್ಕಾರವು ಕ್ರಿಶ್ಚಿಯನ್‌ ಸಮುದಾಯದವರ ಮಕ್ಕಳು, ಪೋಷಕರ ಮಾಹಿತಿ ಸಂಗ್ರಹಿಸಲು ಆದೇಶಿಸಿದೆ. ಇದನ್ನು ಸಂಗ್ರಹಿಸಲು ಅವರು ಯಾರು? ಅವರಿಗೆ ಏನು ಅಧಿಕಾರವಿದೆ ಎಂಬುದನ್ನು ನ್ಯಾಯಾಲಯ ಪತ್ತೆ ಹಚ್ಚಬೇಕು. ದತ್ತಾಂಶ ಸಂಗ್ರಹಿಸಲು ಶಾಸಕರು ನಿರ್ದೇಶನ ನೀಡುವಷ್ಟು ಸಮರ್ಥರೇ? ಇದನ್ನು ನ್ಯಾಯಾಲಯ ಎತ್ತಿ ಹಿಡಿಯಲಿ. ದತ್ತಾಂಶ ಸಂಗ್ರಹ ಮಾಡಲು ನಿರ್ದೇಶನ ನೀಡುವ ಅಧಿಕಾರ ಶಾಸನಸಭೆಯ ಸಮಿತಿಗೂ ಇಲ್ಲ ಎಂದು ಇದೇ ನ್ಯಾಯಾಲಯ ಹೇಳಿದೆ” ಎಂದರು.

“ಪೀಠವು ಮಧ್ಯಪ್ರವೇಶಿಸಿ ನಿರ್ದಿಷ್ಟ ನಿರ್ದೇಶನ ನೀಡದಿದ್ದರೆ ಈ ಕಿರುಕುಳ ಮುಂದುವರಿಯಲಿದೆ. ಮೂರು ದಿನಗಳಲ್ಲಿ ಮಾಹಿತಿ ನೀಡುವಂತೆ ಆದೇಶಿಸಲಾಗಿದೆ. ಇದು ತುರ್ತು ಎನಿಸುವುದಿಲ್ಲವೇ?” ಎಂದು ನ್ಯಾಯಾಲಯದ ಮನವೊಲಿಸುವ ಪ್ರಯತ್ನ ಮಾಡಿದರು.