ಕುಡಿದು ವಾಹನ ಚಲಾಯಿಸಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಗೆ ಇತ್ತೀಚೆಗೆ ಭಾಗಶಃ ಪರಿಹಾರ ನೀಡಿರುವ ಕೇರಳ ಹೈಕೋರ್ಟ್, ಕಡ್ಡಾಯವಾದ ಏರ್ ಬ್ಲಾಂಕ್ ಪರೀಕ್ಷೆಯಲ್ಲಿ ಸಂಖ್ಯೆಗಳು ಶೂನ್ಯವಾಗಿರದೇ ಇದ್ದುದರಿಂದ ಆತನಿಗೆ ಮಾಡಲಾದ ಬ್ರೆಥಲೈಜರ್ (ಉಸಿರಾಟ ವಿಶ್ಲೇಷಣಾ ಸಾಧನ) ಪರೀಕ್ಷೆಯ ಫಲಿತಾಂಶ ಅಮಾನ್ಯವಾದುದು ಎಂದಿದೆ [ಸರಣ್ ಕುಮಾರ್ ಎಸ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಸಾಧನ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಮತ್ತು ಅದು ಈ ಹಿಂದಿನ ಆಲ್ಕೋಹಾಲ್ ಪರೀಕ್ಷೆಯಿಂದ ಪ್ರಭಾವಿತವಾಗಿಲ್ಲ ಎಂಬುದನ್ನು ಪರಿಶೀಲಿಸಲು ಬ್ರೆಥಲೈಜರ್ ಪರೀಕ್ಷೆಗೂ ಮುನ್ನ ಖಾಲಿ ಪರೀಕ್ಷೆ (ಏರ್ ಬ್ಲಾಂಕ್) ನಡೆಸಬೇಕು ಎಂದು ನ್ಯಾಯಮೂರ್ತಿ ವಿ.ಜಿ. ಅರುಣ್ ಹೇಳಿದರು.
ಉಸಿರಾಟದ ಆಲ್ಕೋಹಾಲ್ ಪರೀಕ್ಷಾ ಸಾಧನ ಬಳಸಿಕೊಂಡು ಉಸಿರಾಟದ ಮಾದರಿ ಪಡೆಯುವ ಮೊದಲು ಏರ್ ಬ್ಲಾಂಕ್ ಪರೀಕ್ಷೆ ನಡೆಸುವುದು ಮತ್ತು ಮಾಪನಾಂಕ 'ಶೂನ್ಯ'ದಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದೇ ಕಾರಣಕ್ಕಾಗಿ, ಡಿಜಿಸಿಎ ಉಪಕರಣದಲ್ಲಿ ಏರ್ ಬ್ಲಾಂಕ್ ಪರೀಕ್ಷೆ ನಡೆಸುವುದು ಮತ್ತು ಪ್ರತಿ ಬ್ರೆಥಲೈಜರ್ ಪರೀಕ್ಷೆಯ ಮೊದಲು '0.000' ಸಂಖ್ಯೆ ಇರುವಂತೆ ನೋಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ನ್ಯಾಯಾಲಯ ವಿವರಿಸಿತು.
ಮದ್ಯ ಸೇವಿಸಿ ಅಪಾಯಕರ ರೀತಿಯಲ್ಲಿ ವಾಹನ ಚಲಾಯಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜಿದಾರರಾದ ಸರಣ್ ಕುಮಾರ್ ಎಸ್ ವಿರುದ್ಧ ಮೋಟಾರು ವಾಹನ ಕಾಯಿದೆ- 1988ರ ಸೆಕ್ಷನ್ 185 (ಕುಡಿದು ವಾಹನ ಚಾಲನೆ), ಸೆಕ್ಷನ್ 181 ಆರ್/ಡಬ್ಲ್ಯೂ 3(1) (ಮಾನ್ಯ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು) ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 28ರ (ಸಾರ್ವಜನಿಕ ರೀತಿಯಲ್ಲಿ ಅತಿವೇಗದ ಚಾಲನೆ ಅಥವಾ ಸವಾರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮೋಟಾರು ವಾಹನ ಕಾಯಿದೆಯ ಸೆಕ್ಷನ್ 204ರ ಅಡಿಯಲ್ಲಿ ನಿಗದಿಪಡಿಸಿದ ಎರಡು ಗಂಟೆಗಳ ಒಳಗೆ ತಮ್ಮನ್ನು ವೈದ್ಯಕೀಯವಾಗಿ ಪರೀಕ್ಷಿಸಲಾಗಿಲ್ಲ. ಅತ್ಯಂತ ಗಮನಾರ್ಹವಾಗಿ, ಸಾಧನವು ಉಳಿದ ಆಲ್ಕೋಹಾಲ್‌ನಿಂದ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾದ ಬ್ರೆಥಲೈಜರ್ ಏರ್ ಬ್ಲಾಂಕ್ ಪರೀಕ್ಷೆಯು 412 ಮಿಗ್ರಾಂ/100 ಮಿಲಿ ತೋರಿಸಿದೆ. ಹೀಗಾಗಿ ಪರೀಕ್ಷೆ ವಿಶ್ವಸನೀಯವಲ್ಲ ಎಂದು ದೂರಿ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದರು.
ಆದರೆ, ಅರ್ಜಿದಾರರು ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ರೀತಿಯಲ್ಲಿ ಸವಾರಿ ಮಾಡುತ್ತಿದ್ದರೆಂದು ಅಂತಿಮ ವರದಿ ಸ್ಪಷ್ಟವಾಗಿ ತೋರಿಸಿದೆ ಎಂದು ಪ್ರಾಸಿಕ್ಯೂಷನ್ ವಾದಿಸಿತು.
ವಾದ ಆಲಿಸಿದ ನ್ಯಾಯಾಲಯ, ಏರ್ ಬ್ಲಾಂಕ್ ಪರೀಕ್ಷೆಯಲ್ಲಿ 412 ಮಿಗ್ರಾಂ/100 ಮಿಲಿ ಕಂಡುಬಂದಿರುವುದರಿಂದ ಬ್ರೆಥಲೈಜರ್ ಪರೀಕ್ಷೆಯ ಫಲಿತಾಂಶ ನಂಬಲರ್ಹವಲ್ಲ ಎಂದು ಅಭಿಪ್ರಾಯಪಟ್ಟಿತು.
ಬಂಧನವಾದ ಎರಡು ಗಂಟೆಗಳ ಒಳಗೆ ಯಾವುದೇ ವೈದ್ಯಕೀಯ ಪರೀಕ್ಷೆ ಮಾಡದ ಕಾರಣ, ಅರ್ಜಿದಾರರು ಮದ್ಯ ಸೇವಿಸಿದ್ದಾರೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಆದ್ದರಿಂದ ಕಾಯಿದೆಯ ಸೆಕ್ಷನ್ 185ರ ಅಡಿಯಲ್ಲಿ ಆರೋಪ ಊರ್ಜಿತವಲ್ಲ ಎಂದಿತು.
ಅರ್ಜಿದಾರರು ಸಂಬಂಧಿತ ಸಮಯದಲ್ಲಿ ಮಾನ್ಯ ಚಾಲನಾ ಪರವಾನಗಿಯನ್ನು ಹೊಂದಿದ್ದರು. ಹೀಗಾಗಿ ಕಾಯಿದೆಯ ಸೆಕ್ಷನ್ 181 ಜೊತೆಗೆ ಸೆಕ್ಷನ್ 3(1)ರ ಅಡಿಯ ಆರೋಪವನ್ನು ನಿರ್ವಹಿಸಲಾಗದು ಎಂದು ನ್ಯಾಯಾಲಯ ಹೇಳಿತು.
ಆದರೆ, ಬಿಎನ್‌ಎಸ್‌ನ ಸೆಕ್ಷನ್ 281ರ ಅಡಿಯಲ್ಲಿನ ಆರೋಪದಲ್ಲಿ ಮಧ್ಯಪ್ರವೇಶಿಸಲು ಅದು ನಿರಾಕರಿಸಿತು. ಅರ್ಜಿದಾರರು ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ರೀತಿಯಲ್ಲಿ ವಾಹನ ಚಲಾಯಿಸಿದ್ದಾರೆಯೇ ಎಂಬುದನ್ನು ವಿಚಾರಣೆಯ ಸಮಯದಲ್ಲಿ ನಿರ್ಧರಿಸಬೇಕಾಗುತ್ತದೆ ಎಂದು ಅದು ತಿಳಿಸಿತು.
ಅದರಂತೆ, ನ್ಯಾಯಾಲಯ ಕಾಯಿದೆಯ ಸೆಕ್ಷನ್ 185, 181 ಸಹವಾಚನ ಸೆಕ್ಷನ್ 3(1)ರ ಅಡಿಯ ಅಪರಾಧಗಳಿಗಾಗಿ ಅರ್ಜಿದಾರರ ವಿರುದ್ಧದ ಅಂತಿಮ ವರದಿ ಮತ್ತು ಮುಂದಿನ ಕ್ರಮಗಳನ್ನು ರದ್ದುಗೊಳಿಸಿತು.
ಪೊಲೀಸ್ ಅಧಿಕಾರಿಗಳಿಗೆ ಸಾಧನದಲ್ಲಿ ಶೂನ್ಯ ರೀಡಿಂಗ್ ಅವಶ್ಯಕತೆಯ ಬಗ್ಗೆ ತಿಳಿದಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ, ಬ್ರೆಥಲೈಜರ್ ಬಳಸುವ ಮೊದಲು ಏರ್ ಬ್ಲಾಂಕ್ ಪರೀಕ್ಷೆಯಲ್ಲಿ '0.000' ಸಂಖ್ಯೆ ಇರುವಂತೆ ನೋಡಿಕೊಳ್ಳುವುದಕ್ಕಾಗಿ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲು ಆದೇಶದ ಪ್ರತಿಯನ್ನು ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸುವಂತೆ ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ನಿರ್ದೇಶಿಸಿತು.
[ತೀರ್ಪಿನ ಪ್ರತಿ]