ʼಯಾದವ್ ಕಿ ಲವ್ ಸ್ಟೋರಿʼ ಸಿನಮಾ ನಿಷೇಧಿಸುವಂತೆ ವಿಶ್ವ ಯಾದವ ಪರಿಷತ್ ಅಧ್ಯಕ್ಷರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ಚಿತ್ರದ ಶೀರ್ಷಿಕೆ ಯಾದವ ಸಮುದಾಯವನ್ನು ನೇರವಾಗಿ ಗುರಿಯಾಗಿಸಿಕೊಂಡಿದ್ದು ಅಪಮಾನ ಮಾಡುತ್ತಿದೆ. ಯಾದವ ಸಮುದಾಯಕ್ಕೆ ಸೇರಿದ ಹಿಂದೂ ಹುಡುಗಿ ಮುಸ್ಲಿಂ ಯುವಕನನ್ನು ಪ್ರೀತಿಸುವ ಕಥಾವಸ್ತು ಚಿತ್ರದ್ದಾಗಿದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಬದಿಗೆ ಸರಿಸಿತು.
ಹಿಂದೂ ಹುಡುಗಿ ಮುಸ್ಲಿಮ್ ವ್ಯಕ್ತಿಯನ್ನು ಮದುವೆಯಾದರೆ ದೇಶದ ಅಖಂಡತೆಗೆ ಧಕ್ಕೆ ಹೇಗೆ?ಸುಪ್ರೀಂ ಕೋರ್ಟ್
ಹಿಂದೂ ಹುಡುಗಿ ಮುಸ್ಲಿಮ್ ವ್ಯಕ್ತಿಯನ್ನು ಮದುವೆಯಾದರೆ ದೇಶದ ಅಖಂಡತೆಗೆ ಧಕ್ಕೆ ಹೇಗಾಗುತ್ತದೆ ಎಂದು ಪೀಠವು ಪ್ರಶ್ನಿಸಿತು. ಚಿತ್ರದ ಶೀರ್ಷಿಕೆಯಲ್ಲಿ ಯಾದವ ಸಮುದಾಯವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವ ಯಾವುದೇ ವಿಶೇಷಣ ಅಥವಾ ಪದ ಇಲ್ಲ ಎಂತಲೂ ಪೀಠ ಹೇಳಿತು.
ಚಿತ್ರದ ಶೀರ್ಷಿಕೆ ಯಾದವರನ್ನುಅಪಮಾನಿಸುತ್ತದೆ ಎಂಬ ಆತಂಕ ಸಂಪೂರ್ಣ ಆಧಾರರಹಿತ. ʼಘೂಸ್‌ಕೋರ್ ಪಂಡತ್ʼ ಚಿತ್ರಕ್ಕಿಂತಲೂ ಈ ಸಿನಿಮಾ ಭಿನ್ನವಾದುದು. ಆ ಪ್ರಕರಣದಲ್ಲಿ ಪಂಡಿತನನ್ನು ಭ್ರಷ್ಟ ಎಂಬಂತೆ ಬಿಂಬಿಸಲಾಗಿತ್ತು ಎಂದಿತು.
ಸಂವಿಧಾನದ ಕಲಂ 19(2) ಅಡಿಯಲ್ಲಿ ವಿಧಿಸಬಹುದಾದ ಸಮಂಜಸ ನಿರ್ಬಂಧಗಳು ʼಯಾದವ್ ಜೀ ಕಿ ಲವ್ ಸ್ಟೋರಿʼ ಪ್ರಕರಣಕ್ಕೆ ಅನ್ವಯಿಸುವುದಿಲ್ಲ. ʼಬ್ಯಾಂಡಿಟ್ ಕ್ವೀನ್ʼ ಪ್ರಕರಣದಲ್ಲಿ ನಿರ್ದಿಷ್ಟ ಸಮುದಾಯವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬ ವಾದವನ್ನು ನ್ಯಾಯಾಲಯ ತಳ್ಳಿಹಾಕಿತ್ತು ಎಂಬುದನ್ನು ಪೀಠ ನೆಪಿಸಿತು.
ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ; ಬಿಡುಗಡೆಯಾದ ಬಳಿಕ ನಿಜವಾಗಿಯೂ ಹಾನಿ ಉಂಟಾದರೆ ಆಗ ನ್ಯಾಯಾಲಯವನ್ನು ಸಂಪರ್ಕಿಸಬಹುದು ಪ್ರಸ್ತುತ ಹಂತದಲ್ಲಿ ಹಸ್ತಕ್ಷೇಪ ಅಗತ್ಯವಿಲ್ಲ ಎಂದು ಅದು ಹೇಳಿತು.
“ಸ್ವಲ್ಪ ಸಹನೆಯಿಂದಿರಿ. ಇದು ಕಲ್ಪಿತ ಕತೆ. ಒಂದು ವಾರದೊಳಗೆ ಎಲ್ಲವೂ ಮರೆತು ಹೋಗುತ್ತದೆʼ ಎಂತಲೂ ನ್ಯಾಯಾಲಯ ಅರ್ಜಿದಾರರಿಗೆ ಕಿವಿಮಾತು ಹೇಳಿತು.