ದೋಸೆ ಮತ್ತು ರಾಗಿ ಮುದ್ದೆ ಮಾಡುವಂತೆ ಅತ್ತೆ ಕೇಳುವುದು ಹಾಗೂ ನಿಮ್ಮ (ಪತ್ನಿ) ತಲೆ ಕೂದಲು ಉದುರುವುದು ಕೌಟುಂಬಿಕ ದೌರ್ಜನ್ಯವಾಗುತ್ತದೆಯೇ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಮೌಖಿಕವಾಗಿ ಪ್ರಶ್ನಿಸಿದೆ.
ಸೊಸೆ ನೀಡಿರುವ ದೂರಿನ ಅನ್ವಯ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಅತ್ತೆ ಮತ್ತು ಆಕೆಯ ಸಂಬಂಧಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ವಿಚಾರಣೆಯ ವೇಳೆ ಪೀಠವು “ಉಸಿರುಗಟ್ಟಿಸುವ ಅತ್ತೆ, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದೀರಿ. ಪತಿ ಊಟ ಮಾಡುವವರೆಗೆ ನನ್ನನ್ನು ಊಟ ಮಾಡಲು ಬಿಡುತ್ತಿರಲಿಲ್ಲ. ಪತಿಗೆ ಬಿಸಿಗೆ ದೋಸೆ, ಪತಿ ಬೆಳಿಗ್ಗೆ 10 ಗಂಟೆಗೆ ತಿಂಡಿ ತಿಂದ ಬಳಿಕ ನಾನು ತಿಂಡಿಬೇಕಿತ್ತು ಎಂದು ಹೇಳಿದ್ದೀರಿ. ಇದನ್ನು ಆಧರಿಸಿ ಐಪಿಸಿ ಸೆಕ್ಷನ್ 498A ಅನ್ವಯಿಸಬಹುದೇ? ಏನು ಮೇಡಂ ಇದು.. ಕುಟುಂಬದಲ್ಲಿ ಜಗಳಗಳು ನಡೆಯುವುದಿಲ್ಲವೇ? ಪತಿಗೆ ರಾಗಿ ಮುದ್ದೆ ಮಾಡಿಕೊಡಿ ಎಂದು ಅತ್ತೆ ಹೇಳುವುದು ತಪ್ಪೇ? ತಲೆಕೂದಲು ಉದುರಿದ್ದಕ್ಕೆ ಐಪಿಸಿ ಸೆಕ್ಷನ್ 498A? ನಿಮಗೆ ತಲೆ ಕೂದಲು ಉದುರುವುದು, ಪತಿಗೆ ದೋಸಾ, ರಾಗಿ ಮುದ್ದೆ ಮಾಡಿಕೊಡಿ ಎಂದು ಹೇಳುವುದು, ನಿಮಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡಿಲ್ಲ ಎಂಬುದು ವರದಕ್ಷಿಣೆ ಕಿರುಕುಳವೇ? ಈ ಎಲ್ಲಾ ಆರೋಪಗಳನ್ನು ವಿಚ್ಚೇದನ ಕೋರಿಕೆ ವಿಚಾರಣೆಯಲ್ಲಿ ಪ್ರಸ್ತಾಪಿಸಬಹುದು. ಕೆಲವೊಂದು ಆರೋಪಗಳನ್ನು ಕ್ರೌರ್ಯಕ್ಕೆ ಸಮನಾಗಿಸಲು ಸಾಧ್ಯವಿಲ್ಲ. ಎಷ್ಟು ದಿನ ಗಂಡನ ಮನೆಯಲ್ಲಿದ್ದಿರಿ? ದೂರುದಾರೆಯ ದೃಷ್ಟಿಯಲ್ಲಿನ ಕ್ರೌರ್ಯವು ಕ್ರೌರ್ಯವಲ್ಲ. ಕಾನೂನಿನ ಅಡಿ ಕ್ರೌರ್ಯ ಮಾತ್ರ ಕ್ರೌರ್ಯ. ಎಲ್ಲಾ ಅಹವಾಲುಗಳನ್ನು ಕ್ರೌರ್ಯಕ್ಕೆ ಹೋಲಿಕೆ ಮಾಡಲಾಗದು. ನೀವಿಬ್ಬರೂ ಪರಸ್ಪರ ದೂರು-ಪ್ರತಿದೂರು ದಾಖಲಿಸುವುದು ಕ್ರೌರ್ಯವಲ್ಲ. ಈ ಪ್ರಕರಣದಲ್ಲಿ ಪತಿಯನ್ನು ಕ್ಷಮಿಸುವುದಿಲ್ಲ” ಎಂದಿತು.
ಪ್ರತಿವಾದಿಯಾಗಿರುವ ಪತ್ನಿ ಸ್ವತಃ ತಾವೇ ನ್ಯಾಯಾಲಯದ ಮುಂದೆ ಹಾಜರಾಗಿ ವಾದಿಸಿದರು. “ಪತಿಯ ಮನೆಯ ಕಡೆಯವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ನನಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಿಲ್ಲ. ಪ್ರತಿದಿನ ದೋಸಾ, ಅನ್ನ, ಸೊಪ್ಪು ಮತ್ತು ಬೇಳೆ ಸಾರು ನೀಡುತ್ತಿದ್ದರು. ಆದರೆ, ಅವರು ಮಾತ್ರ ದಿನ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುತ್ತಿದ್ದರು. ನನ್ನ ಮೇಲಿನ ದೌರ್ಜನ್ಯದಿಂದಾಗಿ ನನಗೆ ತಲೆಕೂದಲು ಉದುರಿದೆ. ಅಡುಗೆ ಮನೆಗೆ ಹೋಗಲು ಅತ್ತೆ ನನ್ನನ್ನು ಬಿಡುತ್ತಿರಲಿಲ್ಲ. ನನಗೆ ಬರುತ್ತಿದ್ದ ಸಂಬಳವನ್ನೆಲ್ಲಾ ಪತಿಗೆ ನೀಡುತ್ತಿದ್ದು, ಖರ್ಚಿಗೆ ಏನೂ ಉಳಿಯುತ್ತಿರಲಿಲ್ಲ. ಪತಿಯನ್ನು ತನ್ನ ಕೊಠಡಿಯಲ್ಲಿಯೇ ಮಲಗುವಂತೆ ಅತ್ತೆ ಮಾಡಿದ್ದಳು. ನಾನು ನನ್ನ ಕೊಠಡಿಯಲ್ಲಿ ಏಕಾಂಗಿಯಾಗಿದ್ದೆ. ಐದೂವರೆ ತಿಂಗಳು ಈ ದುರಂತಮಯ ಬದುಕು ಅನುಭವಿಸಿ, ಪತಿಯ ಮನೆಯಿಂದ ಹೊರಬೀಳಬೇಕಾಯಿತು” ಎಂದರು.
“ನನ್ನ ತಾಯಿ ಮನೆ ಬಳಿ ಬಂದು ರಸ್ತೆಯಲ್ಲಿ ನಿಂತು ಅವಾಚ್ಯ ಶಬ್ದಗಳಿಂದ ಅರ್ಜಿದಾರರು ನಿಂದಿಸಿದ್ದಾರೆ. ನನ್ನ ಘನತೆಯನ್ನು ಪ್ರಶ್ನಿಸಿದ್ದಾರೆ. ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆ ಎಂದು ನಿಂದಿಸಿದ್ದಾರೆ. ಇದರಿಂದ ನೆರೆಹೊರೆಯವರು ನನ್ನನ್ನು ಏನೆಂದು ಕೊಳ್ಳಬೇಡ. ಹೀಗಾಗಿ, ಅವರ ವಿರುದ್ಧ ಮಾನಹಾನಿ ಪ್ರಕರಣವನ್ನೂ ದಾಖಲಿಸಿದ್ದೇನೆ” ಎಂದರು.
ಅರ್ಜಿದಾರರ ಪರವಾಗಿ ಹಾಜರಾಗಿದ್ದ ವಕೀಲರು “ಅತ್ತೆ ಮತ್ತು ಆಕೆಯ ಇಬ್ಬರು ಸಹೋದರರು ಮತ್ತು ಪತಿಯ ಸ್ನೇಹಿತನ ವಿರುದ್ಧ ಪತ್ನಿ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಲಾಗಿದೆ. ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪತಿ ಈಗಾಗಲೇ ಹಿಂಪಡೆದಿದ್ದಾರೆ. ಪ್ರಕರಣವು ಎಫ್‌ಐಆರ್ ಹಂತದಲ್ಲಿದೆ” ಎಂದರು.
ಎಲ್ಲರ ವಾದ ಆಲಿಸಿದ ಪೀಠವು ಆದೇಶ ಕಾಯ್ದಿರಿಸಿತು.