Cricket and Supreme Court 
ಸುದ್ದಿಗಳು

[ಕೆಪಿಎಲ್‌ ಪ್ರಕರಣ] 'ಮ್ಯಾಚ್ ಫಿಕ್ಸಿಂಗ್ ಕ್ರಿಮಿನಲ್ ಅಪರಾಧವೇ?' ಶೀಘ್ರವೇ ತೀರ್ಪು ನೀಡಲಿದೆ ಸುಪ್ರೀಂ ಕೋರ್ಟ್‌

ಐಪಿಸಿ ಅಡಿಯಲ್ಲಿ ಕ್ರಿಕೆಟ್ ಪಂದ್ಯದ ಫಿಕ್ಸಿಂಗ್ ವಂಚನೆಯ ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು.

Bar & Bench

ಕ್ರಿಕೆಟ್‌ ಪಂದ್ಯಗಳ ಮ್ಯಾಚ್‌ ಫಿಕ್ಸಿಂಗ್‌ ಅಪರಾಧವೇ ಎಂಬುದನ್ನು ಸುಪ್ರೀಂಕೋರ್ಟ್‌ ಶೀಘ್ರವೇ ಪರಿಶೀಲಿಸಲಿದೆ [ಕರ್ನಾಟಕ ಸರ್ಕಾರ ಮತ್ತಿತರರು ಹಾಗೂ ಅಬ್ರಾರ್ ಕಾಜಿ ಇನ್ನಿತರರ ನಡುವಣ ಪ್ರಕರಣ]̤

ಪ್ರಕರಣ ನಿರ್ಧರಿಸಲು ಸಹಾಯ ಮಾಡುವ ಅಮಿಕಸ್‌ ಕ್ಯೂರಿಯನ್ನಾಗಿ ವಕೀಲ ಶಿವಂ ಸಿಂಗ್ ಅವರನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ್‌ ಸಿಂಗ್ ಅವರಿದ್ದ ಪೀಠವು ಮಂಗಳವಾರ ನೇಮಿಸಿತು. ಪ್ರಕರಣದ ವಿಚಾರಣೆ ಜುಲೈ 22ರಂದು ನಡೆಯಲಿದೆ.

ಕ್ರಿಕೆಟ್ ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆಸಿದ ಆರೋಪ ಹೊತ್ತಿರುವವರ ವಿರುದ್ಧದ ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಮೊಕದ್ದಮೆಗಳನ್ನು ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಕೆಲವು ವರ್ಷಗಳ ಹಿಂದೆ, ಕರ್ನಾಟಕ ಪೊಲೀಸರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡಗಳಾದ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಆಡಿದ್ದ ಕರ್ನಾಟಕದ ಮಾಜಿ ರಣಜಿ ನಾಯಕ ಸಿಎಂ ಗೌತಮ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಹಾಗೂ ಕರ್ನಾಟಕ ಮತ್ತು ಮಿಜೋರಾಂನ ರಣಜಿ ತಂಡದಲ್ಲಿದ್ದ ಅಬ್ರಾರ್ ಕಾಜಿ ಸೇರಿದಂತೆ ಅನೇಕರ ವಿರುದ್ಧ ಕೆಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಗಳ ವೇಳೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿರುವ ಆರೋಪದಡಿ ಆರೋಪಪಟ್ಟಿ ಸಲ್ಲಿಸಿದ್ದರು.

ನಿರ್ದಿಷ್ಟವಾಗಿ 2018ರ ಕರ್ನಾಟಕ ಪ್ರೀಮಿಯರ್ ಲೀಗ್ ಋತುವಿನಲ್ಲಿ ಪಂದ್ಯಗಳನ್ನು ಫಿಕ್ಸ್‌ ಮಾಡಿದ ಆರೋಪ ಅವರ ಮೇಲಿತ್ತು. ಆದರೆ ಮ್ಯಾಚ್ ಫಿಕ್ಸಿಂಗ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಗದಿಪಡಿಸಿದ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಸಿಸಿಐಗೆ ಬಿಟ್ಟದ್ದು ಎಂದು ತೀರ್ಪು ನೀಡಿದ ಹೈಕೋರ್ಟ್‌ ವಿಚಾರಣೆ ರದ್ದುಗೊಳಿಸಿತ್ತು.

"ಒಬ್ಬ ಆಟಗಾರ ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿದರೆ, ಅವನು ಕ್ರೀಡಾಪ್ರೇಮಿಗಳಿಗೆ ಮೋಸ ಮಾಡಿದ್ದಾನೆ ಎಂಬ ಸಾಮಾನ್ಯ ಭಾವನೆ ಮೂಡುತ್ತದೆ ಎಂಬುದು ನಿಜ. ಆದರೆ, ಈ ಸಾಮಾನ್ಯ ಭಾವನೆ ಅಪರಾಧಕ್ಕೆ ಕಾರಣವಾಗುವುದಿಲ್ಲ. ಮ್ಯಾಚ್ ಫಿಕ್ಸಿಂಗ್ ಆಟಗಾರನ ಅಪ್ರಾಮಾಣಿಕತೆ, ಅಶಿಸ್ತು ಮತ್ತು ಮಾನಸಿಕ ಭ್ರಷ್ಟಾಚಾರವನ್ನು ಸೂಚಿಸುತ್ತದೆ. ಈ ಉದ್ದೇಶಕ್ಕಾಗಿ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಬಿಸಿಸಿಐಗೆ ಇದೆ" ಎಂದು ಹೈಕೋರ್ಟ್ ಹೇಳಿತ್ತು.

ಕರ್ನಾಟಕ ಸರ್ಕಾರದ ಪರವಾಗಿ ವಕೀಲ ಡಿ ಎಲ್ ಚಿದಾನಂದ ವಾದ ಮಂಡಿಸಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಕೆ ಎಂ ನಟರಾಜ್ ಮತ್ತು ವಕೀಲರಾದ ಶರತ್ ನಂಬಿಯಾರ್, ಪ್ರಣೀತ್ ಪ್ರಣವ್, ಸಾತ್ವಿಕ ಠಾಕೂರ್, ಅನುಜ್ ಶ್ರೀನಿವಾಸ್ ಉಡುಪ ಮತ್ತು ಅರವಿಂದ್ ಕುಮಾರ್ ಶರ್ಮಾ  ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದರು.

ಉಳಿದ ಪ್ರತಿವಾದಿಗಳ ಪರವಾಗಿ ವಕೀಲರಾದ ಅನಂಗ ಭಟ್ಟಾಚಾರ್ಯ, ದೇವಹೂತಿ ತಮುಲಿ, ಕ್ರಿಶನು ಬರುವಾ, ಸಂಧ್ಯಾ ಗುಪ್ತಾ, ವರ್ಚಸ್ವ ಸಿಂಗ್, ದೃಷ್ಟಿ ಗುಪ್ತಾ, ಸಂಜಯ್ ಕುಮಾರ್ ತ್ಯಾಗಿ, ಭಾರ್ಗವ ವಿ ದೇಸಾಯಿ ಮತ್ತು ಶಿವಂ ಶರ್ಮಾ ವಾದ ಮಂಡಿಸಿದರು.