Kerala High Court 
ಸುದ್ದಿಗಳು

'ಮಹಿಳೆಯನ್ನು ವೇಶ್ಯೆ ಎಂದು ಆಕೆಯ ಅನುಪಸ್ಥಿತಿಯಲ್ಲಿ ಜರೆಯುವುದು ಅಪರಾಧವೇ?' ಹೀಗಿದೆ ಕೇರಳ ಹೈಕೋರ್ಟ್ ತೀರ್ಪು

ಪ್ರಕರಣದಲ್ಲಿ ಮಾನಹಾನಿಕರ ಟೀಕೆಗಳ ಬಗ್ಗೆ ಮೂರನೇ ವ್ಯಕ್ತಿಯಿಂದ ತಿಳಿದು ಬಂದಿದ್ದು ದೂರುದಾರೆ ಅದನ್ನು ನೇರವಾಗಿ ಕೇಳಿಲ್ಲ ಎಂದ ನ್ಯಾಯಾಲಯ.

Bar & Bench

ಮಹಿಳೆಯ ಅನುಪಸ್ಥಿತಿಯಲ್ಲಿ ಆಕೆಯನ್ನು 'ವೇಶ್ಯೆ' ಎಂದು ಕರೆದಿದ್ದರೆ ಅದು ಐಪಿಸಿ ಸೆಕ್ಷನ್ 509ರ ಅಡಿಯಲ್ಲಿ ಆಕೆಯ ಘನತೆಗೆ ಚ್ಯುತಿ ತರುವ ಅಪರಾಧವಾಗದು ಎಂದು ಕೇರಳ ಹೈಕೋರ್ಟ್ ಈಚೆಗೆ ಹೇಳಿದೆ  [ಆನ್ಸನ್  ಐಜೆ ಇನ್ನಿತರರು ಹಾಗೂ ಕೇರಳ ಸರ್ಕಾರ ಮತ್ತಿತರರ ನಡುವಣ ಪ್ರಕರಣ ].

ವಸತಿ ಸಂಕೀರ್ಣವೊಂದರ ಮೂವರು ವ್ಯಕ್ತಿಗಳು ಅದೇ ವಸತಿ ಸಂಕೀರ್ಣದ ಉಳಿದ ನಿವಾಸಿಗಳ ಬಳಿ ಮಾತನಾಡುವಾಗ ಹಾಗೂ ಹತ್ತಿರದ ಅಂಗಡಿ ಮಾಲೀಕರೊಂದಿಗೆ ಸಂವಹಿಸುವಾಗ ನಿವಾಸಿಗಳ ಕಲ್ಯಾಣದ ಸಂಘದ ಸದಸ್ಯೆಯೊಬ್ಬರನ್ನು ಆಕೆಯ ಅನುಪಸ್ಥಿತಿಯಲ್ಲಿ 'ವೇಶ್ಯೆ' ಎಂದು ಜರೆದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಹೀಗೆ ಕರೆಯುವುದು ಕೆಲ ಕಾನೂನುಗಳಡಿ ಅಪರಾಧವಾಗಬಹುದಾದರೂ ಮಹಿಳೆಯ ಘನತೆಗೆ ಚ್ಯುತಿ ತರುವುದಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ 509ರ (ಈಗಿನ ಬಿಎನ್‌ಎಸ್‌ ಸೆಕ್ಷನ್ 79) ಅಡಿ ಅಪರಾಧವಲ್ಲ ಎಂದು ನ್ಯಾ. ಎ ಬದರುದ್ದೀನ್‌ ಸ್ಪಷ್ಟಪಡಿಸಿದರು.

ತನ್ನನ್ನು ಆ ಮೂವರು ವೇಶ್ಯೆ ಎಂದು ಕರೆದಿದ್ದು ಮಹಿಳೆಗೆ ಬೇರೆ ವ್ಯಕ್ತಿಗಳಿಂದ ತಿಳಿದುಬಂದಿತ್ತು. ಆರೋಪಿಗಳು ಮತ್ತು ದೂರುದಾರೆಯ ನಡುವಿನ ಕೆಲವು ಭಿನ್ನಾಭಿಪ್ರಾಯದಿಂದಾಗಿ ಮೂವರು ಆರೋಪಿಗಳ ಆಕೆಯನ್ನು ವೇಶ್ಯೆ ಎಂದು ಜರೆದಿದ್ದರು ಎಂಬುದಾಗಿ ತಿಳಿದುಬಂದಿತ್ತು.

ಕೇರಳ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 34 (ಸಾಮಾನ್ಯ ಉದ್ದೇಶದ ಕೃತ್ಯ) ಮತ್ತು 509 (ಮಹಿಳೆಯರ ಘನತೆಗೆ ಚ್ಯುತಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಆಪಾದಿತ ಹೇಳಿಕೆಗಳು ಮಾನಹಾನಿಕರವಾಗಿದ್ದರೂ, ಐಪಿಸಿಯ ಸೆಕ್ಷನ್ 509 ಅನ್ನು ಅನ್ವಯಿಸಲಾಗದು ಎಂದು ಅವರ ವಕೀಲರು ವಾದಿಸಿದರು.

ಪ್ರಕರಣವನ್ನು ನಿರ್ಧರಿಸಲು, ನ್ಯಾಯಾಲಯ ಸೆಕ್ಷನ್ 509ರ  ಅಡಿಯಲ್ಲಿ ವ್ಯಾಖ್ಯಾನಿಸಲಾದ ಅಪರಾಧದ ಅಂಶಗಳನ್ನು ಪರಿಶೀಲಿಸಿತು. ಈ ಸೆಕ್ಷನ್‌ನ ಮೊದಲ ಭಾಗ, ಮಹಿಳೆ ಕೇಳುವಂತೆ ಇಲ್ಲವೇ ಕಾಣುವಂತೆ ಆಕೆಯ ಮಾನಕ್ಕೆ ಧಕ್ಕೆ ತರುವ ಉದ್ದೇಶದಿಂದ ಪದಗಳನ್ನು ಬಳಸಿದ್ದರೆ ಅಥವಾ ಸನ್ನೆ ಮಾಡಿದ್ದರೆ ಅದು ಅಪರಾಧ ಎನ್ನುತ್ತದೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಮಾನಹಾನಿಕರ ಟೀಕೆಗಳ ಬಗ್ಗೆ ಬೇರೆ ವ್ಯಕ್ತಿಯಿಂದ ತಿಳಿದು ಬಂದಿದ್ದು ದೂರುದಾರೆ ಅದನ್ನು ನೇರವಾಗಿ ಕೇಳಿಲ್ಲ. ಇದರರ್ಥ ಸೆಕ್ಷನ್‌ನ ಮೊದಲ ಭಾಗ ಈ ಪ್ರಕರಣಕ್ಕೆ ಅನ್ವಯವಾಗದು ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಸೆಕ್ಷನ್ 509ರ ಎರಡನೇ ಭಾಗ ಮಹಿಳೆಯ ಗೌಪ್ಯತೆಗೆ ಧಕ್ಕೆ ತರುವ ಉದ್ದೇಶದಿಂದ ಆಕೆಯ ಘನತೆಗೆ ಚ್ಯುತಿ ತರುವ ಉದ್ದೇಶದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ, ನೀಡಿದ ಹೇಳಿಕೆಗಳು  ಸಾಮಾನ್ಯ ಬೀಸುಮಾತುಗಳಾಗಿರುವುದರಿಂದ ಮತ್ತು ದೂರುದಾರರನ್ನು ನೇರವಾಗಿ ಗುರಿಯಾಗಿಸಿಕೊಂಡಿಲ್ಲವಾದ್ದರಿಂದ, ಅವು ಆಕೆಯ ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಟೀಕೆಗಳು ಮಾನಹಾನಿಕರವಾಗಿದ್ದರೂ, ಐಪಿಸಿ ಸೆಕ್ಷನ್ 509ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಅಪರಾಧದ ಮಾನದಂಡಗಳಡಿ ಬರುವುದಿಲ್ಲ ಎಂದು ಅದು ತೀರ್ಪಿತ್ತಿದೆ.