ವಕೀಲಿಕೆ ಪ್ರಮಾಣ ಪತ್ರ (ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್) ವಿತರಣೆಗೆ ಸಂಬಂಧಿಸಿದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದೇ ಕರ್ನಾಟಕ ವಕೀಲರ ಪರಿಷತ್ (ಕೆಎಸ್‌ಬಿಸಿ)ಗೆ ಚುನಾವಣೆ ನಡೆಸದಿರಲು ಕಾರಣವೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ಹಾಗೂ ಕೆಎಸ್‌ಬಿಸಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.
ಕೆಎಸ್‌ಬಿಸಿ ಆಡಳಿತ ಮಂಡಳಿಯ ನಿಗದಿತ ಐದು ವರ್ಷಗಳ ಅವಧಿ 2023ರ ಜೂನ್‌ನಲ್ಲೇ ಪೂರ್ಣಗೊಂಡಿದ್ದು, ಹಾಲಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಲು ನಿರ್ದೇಶಿಸುವಂತೆ ಕೋರಿ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠವು 2025ರ ಜುಲೈ 31ರಂದು ಬಿಸಿಐ ಹೊರಡಿಸಿರುವ ಸಂವಹನದಲ್ಲಿ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಲಾಗಿದೆ. ಹೀಗಿರುವಾಗ, ಸಿಒಪಿ ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಬಾಕಿ ಇರುವುದು ಚುನಾವಣೆ ನಡೆಸದಿರಲು ಒಂದು ಕಾರಣವೇ ಎಂಬ ಬಗ್ಗೆ ಈ ನ್ಯಾಯಾಲಯಕ್ಕೆ ಸ್ಪಷ್ಟೀಕರಣ ಬೇಕಿದೆ. ಆದ್ದರಿಂದ, ಈ ಕುರಿತು ಮುಂದಿನ ವಿಚಾರಣೆ ವೇಳೆ ಪ್ರತಿಕ್ರಿಯಿಸಬೇಕು ಎಂದು ಬಿಸಿಐ ಹಾಗೂ ಕೆಎಸ್‌ಬಿಸಿಗೆ ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 30ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ, ಕೆಎಸ್‌ಬಿಸಿ ಪರ ವಕೀಲ ಟಿ ಪಿ ವಿವೇಕಾನಂದ ಅವರು “ಸಿಒಪಿ ವಿತರಣೆಗೆ ಸಂಬಂಧಿಸಿದಂತೆ ಸ್ವೀಕರಿಸಲಾಗಿರುವ ಅರ್ಜಿಗಳಲ್ಲಿ ಅಂದಾಜು 29 ಸಾವಿರ ಅರ್ಜಿಗಳು ಇನ್ನೂ ಪರಿಶೀಲನೆಯಲ್ಲಿದೆ. ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಪೀಠವು “ಸುಮಾರು 29 ಸಾವಿರ ಅರ್ಜಿಗಳನ್ನು ಇನ್ನೂ ಪರಿಶೀಲಿಸಬೇಕಾಗಿದೆಯೇ? ಅದನ್ನು ಆಮೆಗತಿಯಲ್ಲಿ ಪೂರ್ಣಗೊಳಿಸುವಿರೇ ಅಥವಾ ಶರ ವೇಗದಲ್ಲಿ ಮಾಡುವಿರೇ? ಇದೊಂದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ಈ ಕಾರಣಕ್ಕೆ ಚುನಾವಣೆ ನಡೆಸಬಾರದೇಕೆ” ಎಂದು ಪ್ರಶ್ನಿಸಿತು.
ಆಗ ನ್ಯಾಯಾಲಯದಲ್ಲಿ ಹಾಜರಿದ್ದ ಬಿಸಿಐ ಪರ ವಕೀಲರು, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಯ ಬಗ್ಗೆ ಪೀಠಕ್ಕೆ ತಿಳಿಸಿದರು.
ಕೆಎಸ್‌ಬಿಸಿ ಆಡಳಿತ ಮಂಡಳಿಯ ನಿಗದಿತ 5 ವರ್ಷದ ಅವಧಿ 2023ರ ಜೂನ್‌ನಲ್ಲೇ ಪೂರ್ಣಗೊಂಡಿದೆ. ಆದ್ದರಿಂದ, ವಕೀಲರ ಕಾಯ್ದೆ 1961ರ ಸೆಕ್ಷನ್ 8ರಡಿ ಕೆಎಸ್‌ಬಿಸಿಯಲ್ಲಿ ಕಾನೂನು, ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಕೂಡಲೇ ಚುನಾವಣೆ ನಡೆಸಬೇಕು. ಅದಕ್ಕೆ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ಕೋರಿ 2025ರ ಜನವರಿ 7ರಂದು ನೀಡಿರುವ ಮನವಿಯನ್ನು ಪರಿಗಣಿಸುವಂತೆ ಬಿಸಿಐಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.
ಅವಧಿ ಮುಗಿದ ನಂತರ ಚುನಾವಣೆ ನಡೆಸುವ ಬದಲು ಹಾಲಿ ಆಡಳಿತ ಮಂಡಳಿಯ ಅವಧಿಯನ್ನು ಮುಂದುವರಿಸುವ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿದ್ದು, ಅದು ವಕೀಲರ ಕಾಯ್ದೆಗೆ ವಿರುದ್ಧವಾಗಿದೆ. ಆದ್ದರಿಂದ, ಹಾಲಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಲು ಬಿಸಿಐಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.