ರಾಜಧಾನಿಯಲ್ಲಿ ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (AI) ತಂತ್ರಾಂಶ ಇದೆಯೇ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ದೆಹಲಿ ಪೊಲೀಸರನ್ನು ಕೇಳಿದೆ [ದಿಲ್ ಖುಷ್ ಬೈರ್ವಾ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
"ಅಸ್ಥಿರ ಆರೋಗ್ಯವೂ ಸೇರಿದಂತೆ ವಿವಿಧ ಕಾರಣಗಳಿಂದ ಕಾಣೆಯಾಗಿರುವ ವ್ಯಕ್ತಿಗಳ ಸ್ಥಳ ದೃಢೀಕರಿಸಲು ಮತ್ತು ಪರಿಶೀಲಿಸಲು ದೆಹಲಿ ಪೊಲೀಸರು ಕೃತಕ ಬುದ್ಧಿಮತ್ತೆ ತಂತ್ರಾಂಶವನ್ನು ಬಳಸಬಹುದೇ ಅಥವಾ ಬಳಸಿದ್ದಾರೆಯೇ ಎಂದು ರಾಜ್ಯ ಸರ್ಕಾರ ಒಂದು ಸಣ್ಣ ಅಫಿಡವಿಟ್ ಸಲ್ಲಿಸಲಿ” ಎಂದು ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ಧರ್ಮೇಶ್ ಶರ್ಮಾ ಅವರಿದ್ದ ಪೀಠ ಸೂಚಿಸಿತು.
ಫೆಬ್ರವರಿ 2023 ರಿಂದ ಕಾಣೆಯಾಗಿರುವ ತನ್ನ ತಂದೆ ಎಲ್ಲಿದ್ದಾರೆ ಎಂದು ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ತನಿಖೆ ನಡೆಸಿದ್ದರೂ ಅರ್ಜಿದಾರರ ತಂದೆ ಪತ್ತೆಯಾಗಿರಲಿಲ್ಲ ಎಂದು ದೆಹಲಿ ಪೊಲೀಸರು ಸ್ಥಿತಿಗತಿ ವರದಿ ಸಲ್ಲಿಸಿದರು.
ನಂತರ ನ್ಯಾಯಾಲಯವು ಪೊಲೀಸರಿಗೆ AI ಸಾಫ್ಟ್‌ವೇರ್ ಬಳಸಿ ಅರ್ಜಿದಾರರ ತಂದೆಯನ್ನು ಹುಡುಕಲು ಪ್ರಯತ್ನಿಸಿ ಬಳಿಕ ಹೊಸದಾಗಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ಆದೇಶಿಸಿತು. ದಿನ ವಿಚಾರಣೆ ಮಾರ್ಚ್ 18ರಂದು ನಡೆಯಲಿದೆ.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]