Madras High Court and Jaggi vasudev  Jaggi vasudev - Facebook
ಸುದ್ದಿಗಳು

ಪರಿಸರ ಪೂರ್ವಭಾವಿ ಅನುಮತಿ: ಈಶ ಪ್ರತಿಷ್ಠಾನ ಪರ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್

ಈಶ ಫೌಂಡೇಶನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ.ರಾಜಾ ಮತ್ತು ನ್ಯಾಯಮೂರ್ತಿ ಡಿ.ಕೃಷ್ಣಕುಮಾರ್ ಅವರಿದ್ದ ಪೀಠ, ತಮಿಳುನಾಡು ಸರ್ಕಾರ ಫೌಂಡೇಶನ್‌ಗೆ ನೀಡಿದ್ದ ಶೋಕಾಸ್ ನೋಟಿಸ್ ಅನ್ನು ರದ್ದುಗೊಳಿಸಿತು.

Bar & Bench

ಜಗ್ಗಿ ವಾಸುದೇವ್ ಅವರ ಈಶ ಪ್ರತಿಷ್ಠಾನ ಸಮುದಾಯ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡು ಯೋಗ ಕೇಂದ್ರವನ್ನು ನಡೆಸುತ್ತಿರುವುದರಿಂದ ಅದನ್ನು ಶಿಕ್ಷಣ ಸಂಸ್ಥೆ ಎಂದು ಪರಿಗಣಿಸಬೇಕು. ಹೀಗಾಗಿ ತನ್ನ ನಿರ್ಮಾಣ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ನೀಡುವ ಪರಿಸರ ಪೂರ್ವಭಾವಿ ಅನುಮತಿಯಿಂದ ವಿನಾಯಿತಿ ಪಡೆಯಲು ಅದು ಅರ್ಹವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ [ಈಶ ಫೌಂಡೇಶನ್  ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಈ ಹಿನ್ನೆಲೆಯಲ್ಲಿ ಈಶ ಫೌಂಡೇಶನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ.ರಾಜಾ ಮತ್ತು ನ್ಯಾಯಮೂರ್ತಿ ಡಿ.ಕೃಷ್ಣಕುಮಾರ್ ಅವರಿದ್ದ ಪೀಠ,  ಕೊಯಮತ್ತೂರು ಆಶ್ರಮದಲ್ಲಿ ಪ್ರತಿಷ್ಠಾನ ಪರಿಸರ ನಿಯಮ ಉಲ್ಲಂಘಿಸಿದ  ಆರೋಪದ ಮೇಲೆ ನವೆಂಬರ್ 19, 2021 ರಂದು ತಮಿಳುನಾಡು ಸರ್ಕಾರ ನೀಡಿದ್ದ ಶೋಕಾಸ್ ನೋಟಿಸ್ ಅನ್ನು ರದ್ದುಗೊಳಿಸಿತು. ನೋಟಿಸ್‌ ಮಾತ್ರವಲ್ಲದೆ ಪ್ರತಿಷ್ಠಾನದ ವಿರುದ್ಧದ ಉಳಿದ ವಿಚಾರಣೆಯನ್ನೂ ನ್ಯಾಯಾಲಯ ರದ್ದುಗೊಳಿಸಿದೆ.

ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವ ಈಶ ಪ್ರತಿಷ್ಠಾನ ಕೇಂದ್ರ ಸರ್ಕಾರದ 2006ರ ಪರಿಸರ ಪರಿಣಾಮ ಪರಾಮರ್ಶೆ ಅಧಿಸೂಚನೆ ಪ್ರಕಾರ ಪಡೆಯಬೇಕಿದ್ದ ಕಡ್ಡಾಯ ಪರಿಸರ ಅನುಮತಿ ಪಡೆಯುವಲ್ಲಿ ವಿಫಲವಾಗಿದೆ ಎಂದು ತಮಿಳುನಾಡು ಸರ್ಕಾರದ ಶೋಕಾಸ್‌ ನೋಟಿಸ್‌ ಹೇಳಿತ್ತು.

ತಾನು ಯೋಗ ಸಂಸ್ಥೆಯಾಗಿದ್ದು ವ್ಯಕ್ತಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ವಿಕಾಸಕ್ಕೆ ಸಹಾಯ ಮಾಡುತ್ತಿರುವುದರಿಂದ ತನ್ನನ್ನು ಶಿಕ್ಷಣ ಸಂಸ್ಥೆಯಾಗಿ ವರ್ಗೀಕರಿಸಬೇಕು ಎಂದು ಪ್ರತಿಷ್ಠಾನ ಪ್ರತಿಪಾದಿಸಿತು. 2014ರಲ್ಲಿ ಕೇಂದ್ರದಿಂದ ಅನುಮತಿ ಪಡೆಯುವ ನಿಯಮಾವಳಿಗೆ ತಿದ್ದುಪಡಿ ಮಾಡಲಾಗಿದ್ದು ಅದರಂತೆ ನಿರ್ಮಾಣ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪರಿಸರ ಪೂರ್ವಭಾವಿ ಅನುಮತಿ ಪಡೆಯುವದಕ್ಕೆ ಶಿಕ್ಷಣ ಸಂಸ್ಥೆಗಳಿಗೆ ವಿನಾಯಿತಿ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ  ನೋಟಿಸ್‌ ಜಾರಿಗೊಳಿಸಿ ಕಾನೂನುಕ್ರಮಕ್ಕೆ ಮುಂದಾಗಿರುವುದು ಅಕ್ರಮ ಎಂದು ಪ್ರತಿಷ್ಠಾನದ ಪರ ಹಿರಿಯ ನ್ಯಾಯವಾದಿ ಸತೀಶ್‌ ಪರಾಸರನ್‌ ವಾದ ಮಂಡಿಸಿದರು. ಅಡ್ವೊಕೇಟ್‌ ಜನರಲ್‌ ಆರ್‌ ಷಣ್ಮುಗಸುಂದರಂ,  ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಜೆ ರವೀಂದ್ರನ್‌ ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸಿದ್ದರು.