Supreme Court 
ಸುದ್ದಿಗಳು

ಇಸ್ರೋ ಬೇಹುಗಾರಿಕೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಸುಪ್ರೀಂ

ಕೇರಳ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಈ ಆದೇಶ ಮಾಡಿದೆ.

Bar & Bench

ಬೇಹುಗಾರಿಕೆ ಪ್ರಕರಣದಲ್ಲಿ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್‌ ಅವರನ್ನು ಸಿಲುಕಿಸುವ ಸಂಬಂಧದ ಪಿತೂರಿ ಪ್ರಕರಣದಲ್ಲಿ ಗುಪ್ತಚರ ಇಲಾಖೆಯ ಪೊಲೀಸ್‌ ಅಧಿಕಾರಿಗಳಾದ ಆರ್‌ ಬಿ ಶ್ರೀಕುಮಾರ್‌, ಪಿ ಎಸ್‌ ಜಯಪ್ರಕಾಶ್‌, ಥಂಪಿ ಎಸ್‌ ದುರ್ಗಾ ದತ್‌ ಮತ್ತು ವಿಜಯನ್‌ ಅವರಿಗೆ ಕೇರಳ ಹೈಕೋರ್ಟ್‌ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ಬದಿಗೆ ಸರಿಸಿದೆ [ಕೇಂದ್ರಿಯ ತನಿಖಾ ದಳ ವರ್ಸ್‌ ಪಿ ಎಸ್‌ ಜಯಪ್ರಕಾಶ್‌].

ಕೇರಳ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಕೇಂದ್ರಿಯ ತನಿಖಾ ದಳ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ ಆರ್‌ ಶಾ ಮತ್ತು ಸಿ ಟಿ ರವಿಕುಮಾರ್‌ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

“ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಗೆ ಸಂಬಂಧಿಸಿದ ಕೇರಳ ಹೈಕೋರ್ಟ್‌ ಆದೇಶವನ್ನು ವಜಾ ಮಾಡಿ, ಬದಿಗೆ ಸರಿಸಲಾಗಿದೆ. ನಾವು ವ್ಯಕ್ತಪಡಿಸಿರುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಹೊಸದಾಗಿ ಪ್ರಕರಣವನ್ನು ನಿರ್ಧರಿಸಲು ಅದನ್ನು ಹೈಕೋರ್ಟ್‌ಗೆ ಮರಳಿಸಲಾಗಿದೆ. ನಾಲ್ಕು ವಾರಗಳಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಆರೋಪಿಗಳು ತನಿಖೆಗೆ ಸಹರಿಸುವುದರ ಷರತ್ತಿಗೆ ಒಳಪಟ್ಟು ಮುಂದಿನ ಐದು ವಾರಗಳವರೆಗೆ ಅವರನ್ನು ಬಂಧಿಸುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ. ಮಧ್ಯಂತರ ರಕ್ಷಣೆ ಒದಗಿಸಿರುವ ವಿಚಾರವು ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರ್ಧರಿಸುವುದರ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಕೇರಳ ಹೈಕೋರ್ಟ್‌ ನಾಲ್ವರು ಆರೋಪಿಗಳಿಗೆ ಕಳೆದ ವರ್ಷದ ಆಗಸ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. 1990ರ ದಶಕದಲ್ಲಿ ವಿಜ್ಞಾನಿ ನಂಬಿ ನಾರಾಯಣನ್‌ ಅವರ ವಿರುದ್ಧ ಕೇರಳ ಪೊಲೀಸರು ಬೇಹುಗಾರಿಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭಿಸಿದ್ದ ಕಾನೂನು ಪ್ರಕ್ರಿಯೆಯು ದುರುದ್ದೇಶಪೂರಿತವಾಗಿದ್ದು, ಅದಕ್ಕಾಗಿ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ 2018ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

ಪಿತೂರಿ ಪತ್ತೆ ಹಚ್ಚಲು ನಿವೃತ್ತ ನ್ಯಾಯಮೂರ್ತಿ ಡಿ ಕೆ ಜೈನ್‌ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಇದರ ಬೆನ್ನಿಗೇ ಕೇಂದ್ರ ಸರ್ಕಾರವು ಸಮಿತಿಯ ವರದಿಯನ್ನು ಪರಿಗಣಿಸುವಂತೆ ಕೋರಿತ್ತು.