ಸುದ್ದಿಗಳು

[ಮಹಿಳಾ ನೌಕರರಿಗೆ ಋತುಚಕ್ರದ ರಜೆ] ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್‌ ನೀಡುವುದು ಸಲ್ಲ: ಹೈಕೋರ್ಟ್‌

“ನಮಗೆ ಇರುವ ಮಾಹಿತಿ ಪ್ರಕಾರ ಯಾವುದೇ ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್‌ ಜಾರಿಯಾಗಿಲ್ಲ. ಒಂದೊಮ್ಮೆ ಅಂಥ ಯಾವುದೇ ದಾಖಲೆ ಇದ್ದರೆ ಅರ್ಜಿದಾರರು ನ್ಯಾಯಾಲಯದ ಮುಂದೆ ಇಡಬಹುದು. ಆನಂತರ ನ್ಯಾಯಾಲಯ ನಿರ್ಧರಿಸಬಹುದು” ಎಂದ ಪ್ರೊ. ರವಿವರ್ಮ ಕುಮಾರ್‌.

Bar & Bench

ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯಿದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಭಾಗವಾಗಿ ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್‌ ನೀಡಕೂಡದು. ಈ ಸಂಬಂಧ ದಾಖಲೆಯನ್ನು ಸಲ್ಲಿಸಿದರೆ ಅದಕ್ಕೆ ತಡೆ ನೀಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಮೌಖಿಕವಾಗಿ ಹೇಳಿತು.

ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಉದ್ಯೋಗದಾತರ ಸಂಘ, ಬೆಂಗಳೂರು ಹೋಟೆಲ್‌ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್, ಫೆಸಿಲ್ ಏರೋಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್, ಸ್ಯಾಮೋಸ್ ಟೆಕ್ನಾಲಜೀಸ್ ಲಿಮಿಟೆಡ್‌‌‌ಗಳ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು “ಅಧಿಸೂಚನೆಯ ಮುಂದುವರಿದ ಭಾಗವಾಗಿ ಸರ್ಕಾರವು ಶೋಕಾಸ್‌ ನೋಟಿಸ್‌ ನೀಡುತ್ತಿದೆ. ಇದರಿಂದ ತಮಗೆ ಸಮಸ್ಯೆಯಾಗುತ್ತಿದೆ” ಎಂದರು.

ಆಗ ಪೀಠವು “ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ಹೀಗಿರುವಾಗ ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್‌ ನೀಡುತ್ತಿರುವುದೇಕೆ? ಶೋಕಾಸ್‌ ನೋಟಿಸ್‌ಗಳಿಗೆ ತಡೆ ನೀಡಬೇಕಾಗುತ್ತದೆ. ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಬಾರದು. ಇತ್ತ ಅರ್ಜಿಯ ಸಂಬಂಧ ವಾದ ಮಂಡಿಸಲು ಮುಂದಾಗದ ಸರ್ಕಾರವು ವಿಚಾರಣೆ ಮುಂದೂಡಿಕೆ ಕೋರುತ್ತದೆ. ಇನ್ನೊಂದೆಡೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ” ಎಂದಿತು.

ಬೆಂಗಳೂರು ಮಹಿಳಾ ವಕೀಲರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಸರ್ಕಾರದ ಅಧಿಸೂಚನೆಯಲ್ಲಿ ಉದ್ಯೋಗದಾತರಿಗೆ ಸಮಸ್ಯೆಯಾಗುವಂಥ ಯಾವುದೇ ಅಂಶಗಳಿಲ್ಲ. ನಮಗೆ ಇರುವ ಮಾಹಿತಿಯ ಪ್ರಕಾರ ಯಾವುದೇ ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್‌ ಜಾರಿಯಾಗಿಲ್ಲ. ಒಂದೊಮ್ಮೆ ಅಂಥ ಯಾವುದೇ ದಾಖಲೆ ಇದ್ದರೆ ಅರ್ಜಿದಾರರು ನ್ಯಾಯಾಲಯದ ಮುಂದೆ ಇಡಬಹುದು. ಆನಂತರ ನ್ಯಾಯಾಲಯ ನಿರ್ಧರಿಸಬಹುದು” ಎಂದರು.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ಬಿ ಕೆ ಪ್ರಶಾಂತ್‌ ಅವರು “ಸರ್ಕಾರದ ಆಕ್ಷೇಪಾರ್ಹ ಅಧಿಸೂಚನೆಯು ಹೋಟೆಲ್‌ ಉದ್ಯಮದಾತರನ್ನು ನಿರ್ಬಂಧಿಸುವಂತಿದೆ. ಇದರಿಂದ ಗಂಭೀರವಾದ ಆರ್ಥಿಕ ಸಮಸ್ಯೆಗಳು ಎದುರಾಗುತ್ತಿವೆ. ಅಲ್ಲದೇ, ನಾಗರಿಕ ಪರಿಣಾಮಗಳು ಸರ್ಕಾರದ ಆದೇಶದಿಂದ ಉಂಟಾಗಿವೆ” ಎಂದರು.

“ಮಹಿಳೆಯರಿಗೆ ರಕ್ಷಣೆ ನೀಡುವುದಕ್ಕೆ ಆಕ್ಷೇಪವಿಲ್ಲ. ಆದರೆ, ಉದ್ಯಮದ ಹಿತಾಸಕ್ತಿಯನ್ನು ಸರ್ಕಾರ ಗಮನದಲ್ಲಿ ಇಟ್ಟುಕೊಳ್ಳದೇ ಅಧಿಸೂಚನೆ ಜಾರಿಗೊಳಿಸಲು ಮುಂದಾಗಿದೆ. ಕೆಲಸಗಾರರು ಮತ್ತು ಉದ್ಯೋಗದಾತರ ನಡುವೆ ಸಮಾನತೆಯನ್ನು ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಪ್ರಾಥಮಿಕ ಅಧಿಸೂಚನೆ ಹೊರಡಿಸದೇ, ಮಾಧ್ಯಮ ಹೇಳಿಕೆ ಬಿಡುಗಡೆ ಮಾಡದೇ ನೇರವಾಗಿ ಅಧಿಸೂಚನೆ ಹೊರಡಿಸುವ ಮೂಲಕ ಉದ್ಯೋಗದಾತರ ವಿರುದ್ಧ ನಡೆದುಕೊಳ್ಳಲಾಗಿದೆ. ಹಲವು ರೀತಿಯಲ್ಲಿ ಋತುಚಕ್ರದ ರಜೆ ನೀತಿಯು ಹೋಟೆಲ್‌ ಉದ್ಯಮದಾರರ ಹಿತಾಸಕ್ತಿಗೆ ವಿರುದ್ಧವಾಗಿದೆ” ಎಂದು ಆಕ್ಷೇಪಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್‌ ೨೪ಕ್ಕೆ ಮುಂದೂಡಿತು.