ಭಾರತವು ತನ್ನ ಕಾನೂನು ಮತ್ತು ನಿಯಂತ್ರಣ ವ್ಯವಸ್ಥೆಗಳನ್ನು ಪ್ರಾಥಮಿಕವಾಗಿ ಮರುರೂಪಿಸಿಕೊಳ್ಳದಿದ್ದರೆ, ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಬೇಕೆನ್ನುವ 2047ರ ಮಹತ್ವಾಕಾಂಕ್ಷೆಯ ಗುರಿಯನ್ನು ತಲುಪಲು ವಿಫಲವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮನಮೋಹನ್ ಶುಕ್ರವಾರ ಗಂಭೀರ ಎಚ್ಚರಿಕೆ ನೀಡಿದರು.
"ನೀವು ದೇಶಕ್ಕಾಗಿ ಸಂಪತ್ತನ್ನು ಉತ್ಪಾದಿಸುವಾಗ ಆದಾಯ ತೆರಿಗೆ ಅಧಿಕಾರಿಗಳು ಅಥವಾ ಜಿಎಸ್‌ಟಿ ಅಧಿಕಾರಿಗಳು ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾರೆ ಹೇಳಿ? ಅವರು ನಿಮ್ಮನ್ನು ಕಳ್ಳನಂತೆ ನಡೆಸಿಕೊಳ್ಳುತ್ತಾರೆ. ನೀವು ಸಂಪತ್ತನ್ನು ಸೃಜಿಸುತ್ತಿದ್ದೀರೆಂದರೆ ಏನಾದರೂ ತಪ್ಪಾಗಿರಬೇಕು ಎಂಬುದು ಅವರ ಮನಸ್ಥಿತಿ. ಆ ಸಂಪೂರ್ಣ ಮನಸ್ಥಿತಿ, ಆ ವ್ಯವಸ್ಥೆ ಬದಲಾಗಬೇಕು" ಎಂದು ಅವರು ಅವಲೋಕಿಸಿದರು.
'ವಿಕಸಿತ್ ಭಾರತ್ @ 2047' ಗಾಗಿ ಭಾರತದ ಕಾನೂನು ಅಡಿಪಾಯಗಳನ್ನು ಮರುರೂಪಿಸುವುದು ಎಂಬ ವಿಷಯದ ಕುರಿತು ಜನರಲ್ ಕೌನ್ಸೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಜಿಸಿಎಐ) ಆಯೋಜಿಸಿದ್ದ ನ್ಯಾಯ ನಿರ್ಮಾಣ್ 2025 ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಭವಿಷ್ಯದ ಭಾರತಕ್ಕಾಗಿ ಕಾನೂನು ನೀಲನಕ್ಷೆಯನ್ನು ರೂಪಿಸುವ ಕುರಿತು ದಿನವಿಡೀ ಸಂವಾದ ನಡೆಯಿತು. ಸಚಿವರು, ನ್ಯಾಯಮೂರ್ತಿಗಳು, ನೀತಿ ನಿರೂಪಕರು ಮತ್ತು ಉದ್ಯಮ ನಾಯಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವ್ಯಕ್ತಿರಹಿತ ತಂತ್ರಾಧಾರಿತ ತೆರಿಗೆ ಮೌಲ್ಯಮಾಪನಗಳು ಮತ್ತು ಜಿಎಸ್‌ಟಿ ಅನುಸರಣೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಂತಹ ಸುಧಾರಣೆಗಳು ಮುಖ್ಯವೆಂದು ಒಪ್ಪಿಕೊಂಡ ನ್ಯಾಯಮೂರ್ತಿ ಮನಮೋಹನ್, ಭಾರತವು ಈ ಹಿಂದಿನ ಕಾಲಮಾನಕ್ಕೆ ತಕ್ಕಂತೆ ರಚಿಸಲಾಗಿದ್ದ ಬೃಹತ್ ಕಾನೂನುಗಳೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಆಗ್ರಹಿಸಿದರು.
"500 ಪುಟಗಳ ಆದಾಯ ತೆರಿಗೆ ಕಾಯಿದೆ, ಐದು ಪುಟಗಳಿಗೆ ವಿಸ್ತರಿಸುವ ನಿಬಂಧನೆ, ಕಾಯಿದೆಯನ್ನು ಮೀರುವಂತಹ ಸುತ್ತೋಲೆಗಳನ್ನು ನೀವು ಹೊಂದಿರಲು ಸಾಧ್ಯವಿಲ್ಲ. ಇವುಗಳನ್ನು ಬುದ್ಧಿವಂತರು ಮಾತ್ರವೇ ಅರ್ಥೈಸಿಕೊಳ್ಳಬಹುದು, ಸಾಮಾನ್ಯರಲ್ಲ. ಒಂದೊಮ್ಮೆ ನೀವು ಭವಿಷ್ಯವರ್ತಿ ಆರ್ಥಿಕತೆಯಾಗಲು ಬಯಸುವುದಾದರೆ, ನೀವು ವ್ಯವಸ್ಥೆಯನ್ನು ಮರುರೂಪಿಸಬೇಕು," ಎಂದು ಅವರು ಸಲಹೆ ನೀಡಿದರು.
ಭಾರತದ ಆರ್ಥಿಕತೆಯು ಈಗಾಗಲೇ ಡಿಜಿಟಲ್ ಆಗಿದ್ದರೂ, ಭಾರತದ ಕಾನೂನುಗಳು ಇನ್ನೂ ಹೆಚ್ಚಾಗಿ ಗತಕಾಲವನ್ನು ಉದ್ದೇಶಿಸಿವೆ ಎಂದು ಅವರು ಗಮನಸೆಳೆದರು. ಇದೇ ವೇಳೆ, ಹೇಗೆ ಪ್ರಮಾಣಿತ ಅಗತ್ಯ ಪೇಟೆಂಟ್‌ಗಳನ್ನು ಒಳಗೊಂಡಂತಹ, ಜಾಗತಿಕ ಇತ್ಯರ್ಥವನ್ನು ಬೇಡುವ ತೀರ್ಪುಗಳನ್ನು ಸೂಕ್ತ ಕಾನೂನುಗಳ ಮಾರ್ಗದರ್ಶನವಿಲ್ಲದೆ ರೂಪಿಸಬೇಕಾದ ಸವಾಲುಗಳನ್ನು ಭಾರತೀಯ ನ್ಯಾಯಾಲಯಗಳು ಎದುರಿಸುತ್ತಿವೆ ಎನ್ನುವ ಬಗ್ಗೆ ವಿವರಿಸಿದರು.
"ನೀವು ನ್ಯಾಯಾಧೀಶರನ್ನು ಸೂಕ್ತ ಕಾನೂನು ಪರಿಕರಗಳಿಲ್ಲದೆ ಮರುರೂಪಿಸಲು ಕೇಳುತ್ತಿದ್ದೀರಿ. ಹಾನಿಗೆ ಸಂಬಂಧಿಸಿದ, ದತ್ತಾಂಶ ಸಾರ್ವಭೌಮತ್ವ, ಡಿಜಿಟಲ್ ಹಕ್ಕುಗಳು ಮತ್ತು ಹವಾಮಾನ ಏರುಪೇರುಗಳನ್ನು ಉದ್ದೇಶಿಸುವಂತಹ ನೂತನ ಕಾನೂನುಗಳ ತುರ್ತು ಅಗತ್ಯವಿದೆ" ಎಂದು ತಿಳಿಹೇಳಿದರು.