BJP MLA Madal Virupakshappa, his son Prashanth and Karnataka HC 
ಸುದ್ದಿಗಳು

ಲಂಚ ಪಡೆವರನ್ನು ವಿಚಾರಣೆಗೆ ಒಳಪಡಿಸುವಂತೆ ನೀಡುವವರನ್ನೂ ವಿಚಾರಣೆಗೆ ಒಳಪಡಿಸಬೇಕು: ಹೈಕೋರ್ಟ್‌

ಕತೆಯೊಳಗೆ ಕತೆ ಸೇರಿಕೊಂಡಿರುವುದರಿಂದ ಒಂದು ರೀತಿಯಲ್ಲಿ ರೋಚಕವಾಗಿದ್ದು, ಇದೊಂದು ಕಥಾ ಸಂಗಮವಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ.

Siddesh M S

“ಲಂಚ ಪಡೆಯುವವರನ್ನು ವಿಚಾರಣೆಗೆ ಒಳಪಡಿಸುವಂತೆ ನೀಡುವವರನ್ನೂ ವಿಚಾರಣೆಗೆ ಒಳಪಡುವಂತೆ ಮಾಡುವ ಮೂಲಕ ಭ್ರಷ್ಟಾಚಾರದ ಹಾವಳಿಗೆ ಕಡಿವಾಣ ಹಾಕಬೇಕಿದೆ” ಎಂದಿರುವ ಕರ್ನಾಟಕ ಹೈಕೋರ್ಟ್‌, ಬಿಜೆಪಿಯ ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರನಿಗೆ ಲಂಚ ನೀಡಿದ ಆರೋಪಕ್ಕೆ ತುತ್ತಾಗಿರುವ ಐವರ ವಿರುದ್ಧದ ಪ್ರಕರಣ ರದ್ದುಪಡಿಸಲು ಈಚೆಗೆ ನಿರಾಕರಿಸಿದೆ.

ಪ್ರಕರಣದಲ್ಲಿ ಐದನೇ ಆರೋಪಿಗಳಾಗಿರುವ ಬೆಂಗಳೂರಿನ ಕರ್ನಾಟಕ ಆರೋಮಾಸ್‌ ಕಂಪೆನಿಯ ಮಾಲೀಕರಾದ ಕೈಲಾಶ್‌ ಎಸ್.‌ ರಾಜ್‌, ವಿನಯ್‌ ಎಸ್.‌ ರಾಜ್‌ ಮತ್ತು ಚೇತನ್‌ ಮರ್ಲೇಚಾ ಹಾಗೂ ಎರಡನೇ ಆರೋಪಿ ಅಲ್ಬರ್ಟ್‌ ನಿಕೋಲಾಸ್‌ ಮತ್ತು ಮೂರನೇ ಆರೋಪಿ ಗಂಗಾಧರ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಲಂಚ ಪಡೆಯುವವರು ಮತ್ತು ಸ್ವೀಕರಿಸುವವರನ್ನು ಪ್ರಾಸಿಕ್ಯೂಷನ್‌ ಒಂದೇ ನೆಲೆಯಲ್ಲಿ ನಿಲ್ಲುವಂತೆ ಮಾಡುವ ರೀತಿಯಲ್ಲಿ 2018ರ ಜುಲೈ 26ರಂದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಮೇಲ್ನೋಟಕ್ಕೆ ಅರ್ಜಿದಾರರ ಪರ ಹಿರಿಯ ವಕೀಲರು ವಿವರಿಸಿರುವ ಕತೆಯನ್ನು ಒಪ್ಪಿಕೊಂಡರೆ ತನಿಖೆ ನಡೆಸದೇ ಹೊಟ್ಟೆಪಾಡಿಗೆ ಬರೆದ ಚಿತ್ರಕತೆಯನ್ನು ಒಪ್ಪಿದಂತಾಗಲಿದೆ. ಕತೆಯೊಳಗೆ ಕತೆ ಸೇರಿಕೊಂಡಿರುವುದರಿಂದ ಒಂದು ರೀತಿಯಲ್ಲಿ ರೋಚಕವಾಗಿದ್ದು, ಇದೊಂದು ಕಥಾ ಸಂಗಮವಾಗಿದೆ. ಇಲ್ಲಿ ಅರ್ಜಿದಾರರ ಕತೆ ಆಧರಿಸಿ ಅವರನ್ನು ಪ್ರಕರಣದಿಂದ ಕೈಬಿಟ್ಟರೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ಮಾಡಿ ಸೆಕ್ಷನ್‌ 8, 9 ಮತ್ತು 10 ಸೇರ್ಪಡೆಯು ನಿರರ್ಥಕವಾಗಲಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

“ದೇಶದ ಸಾರ್ವಜನಿಕ ಬದುಕಿನ ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರ ವ್ಯಾಪಿಸಿದ್ದು, ಎಲ್ಲೆಡೆಯಲ್ಲೂ ಸಮಸ್ಯೆ ಉಂಟಾಗಿದೆ. ಭ್ರಷ್ಟಾಚಾರ ಸಾಂವಿಧಾನಿಕ ಆಡಳಿತಕ್ಕೆ ಮಾರಕವಾಗಿ ಪರಿಣಮಿಸಿದೆ. ಭ್ರಷ್ಟಾಚಾರ ಹಲವು ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದನ್ನು ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಮಾಜಿ ಶಾಸಕ ಮಾಡಾಳ್‌ ಪುತ್ರ, ಸರ್ಕಾರಿ ಅಧಿಕಾರಿಯಾದ ಎಂ ವಿ ಪ್ರಶಾಂತ್‌ ಕುಮಾರ್‌ ಅವರ ಕಚೇರಿಯಲ್ಲಿ ನಿಕೋಲಸ್‌ ಮತ್ತು ಗಂಗಾಧರ್‌ ಅವರು ತಲಾ 45 ಲಕ್ಷ ರೂಪಾಯಿ ಮೌಲ್ಯದ ಬ್ಯಾಗ್‌ಗಳನ್ನು ಇಟ್ಟುಕೊಂಡು ಏಕೆ ಕುಳಿತಿದ್ದರು? ಇದು ತನಿಖೆಯಿಂದ ಹೊರಬರಬೇಕಿದೆ. ಅವರನ್ನು ವಶಕ್ಕೆ ಪಡೆದು ಪ್ರಶ್ನಿಸಿದ ಸಂದರ್ಭದಲ್ಲಿ ತಾವು ಆರೋಮಾಸ್‌ ಕಂಪೆನಿಯ ಉದ್ಯೋಗಿಗಳಾಗಿದ್ದು, ಪ್ರಶಾಂತ್‌ ಅವರನ್ನು ಭೇಟಿ ಮಾಡಬೇಕು ಎಂದು ಹೇಳಿದ್ದಾರೆ. ಈ ನಡುವೆ ದೀಪಕ್‌ ಜಾಧವ್‌ ಅವರು ಹಣ ತಮಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದಾರೆ. ಇದು ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ. ದೀಪಕ್‌ ಅವರು ಹಣ ತಮಗೆ ಸೇರಿದೆ ಎಂದ ಮಾತ್ರಕ್ಕೆ ಇತರೆ ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಲಾಗದು. ಇದೆಲ್ಲವೂ ಸಾಕ್ಷಿಯಿಂದ ಸಾಬೀತಾಗಬೇಕಾದ ಪ್ರಕರಣ” ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

“ನಿಕೋಲಸ್‌, ಗಂಗಾಧರ್‌ ಮತ್ತು ಜಾಧವ್‌ ಅವರ ವೇತನಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಪ್ರಶ್ನೆ ಹಾಕಲಾಗಿದ್ದು, ಈ ಇಬ್ಬರು ಆರೋಪಿಗಳು ಕಂಪೆನಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದು, 50 ಸಾವಿರ ರೂಪಾಯಿ ವೇತನ ಶ್ರೇಣಿ ಹೊಂದಿದ್ದಾರೆ. ದೀಪಕ್‌ ಜಾಧವ್‌ ಅವರು 1.5 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದರು ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಅದಾಗ್ಯೂ, 90 ಲಕ್ಷ ರೂಪಾಯಿ ಒಡೆತನವು ನ್ಯಾಯಾಲಯದಲ್ಲಿ ನಿರ್ಣಯವಾಗಬೇಕಿದ್ದು, ಪ್ರಕರಣವು ತನಿಖಾ ಹಂತದಲ್ಲಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಲೋಕಾಯುಕ್ತವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಬಿ ಪಾಟೀಲ್‌ ಅವರು “ಪ್ರಶಾಂತ್‌ ಮತ್ತು ಇತರೆ ಆರೋಪಿಗಳ ನಡುವೆ ಸಾಕಷ್ಟು ಸಂಭಾಷಣೆ ವಾಟ್ಸಾಪ್‌ನಲ್ಲಿ ನಡೆದಿದೆ. ಇದನ್ನು ಉಲ್ಲೇಖಿಸಿದರೆ ಅದು ಪ್ರಶಾಂತ್‌ ಮತ್ತು ಇತರೆ ಆರೋಪಿಗಳ ಪ್ರಕರಣದ ಮೇಲೆ ಗಂಭೀರ ಪೂರ್ವಾಗ್ರಹ ಉಂಟು ಮಾಡಲಿದೆ” ಎಂದು ಹೇಳಿದ್ದರು.

ಆರೋಮಾ ಕಂಪೆನಿಯ ಮಾಲೀಕರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಆರೋಮಾಸ್‌ ಕಂಪೆನಿಯ ಮಾಲೀಕರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ, ಅವರು ಐದು ಅಥವಾ ಆರನೇ ಆರೋಪಿಗಳೇ ಎಂಬುದು ಗೊತ್ತಿಲ್ಲ. ನಿಕೋಲಸ್‌, ಗಂಗಾಧರ್‌ ಮತ್ತು ದೀಪಕ್‌ ಅವರು ಆರೋಮಾಸ್‌ ಕಂಪೆನಿಯ ಉದ್ಯೋಗಿಗಳು ಎಂಬ ಕಾರಣಕ್ಕೆ ಮಾಲೀಕರನ್ನು ಎಳೆದು ತರಲಾಗಿದೆ. ದೀಪಕ್‌ ಅವರು ಹಣ ತಮಗೆ ಸೇರಿದ್ದು ಎಂದು ಒಪ್ಪಿಕೊಂಡಿರುವುದರಿಂದ ತಮ್ಮನ್ನು ಇಲ್ಲಿಗೆ ಎಳೆದು ತರಬಾರದು” ಎಂದು ವಾದಿಸಿದ್ದರು.

ಕಂಪೆನಿಯ ಉದ್ಯೋಗಿಗಳನ್ನು ಪ್ರತಿನಿಧಿಸಿದ್ದ ವಕೀಲ ವಿ ಭರತ್‌ ಕುಮಾರ್ ಅವರು “ನಿಕೋಲಸ್‌ ಮತ್ತು ಗಂಗಾಧರ್‌ ಅವರು ದೀಪಕ್‌ ಜಾಧವ್‌ ಪರವಾಗಿ ಪ್ರಶಾಂತ್‌ ಅವರ ಕಚೇರಿಯಲ್ಲಿ ಕುಳಿತಿದ್ದು, ದೀಪಕ್‌ ಅವರು ತಮ್ಮ ಹಂಚಿಕೆಯನ್ನು (ಡಿಸ್ಟ್ರಿಬ್ಯೂಟರ್‌ಶಿಪ್‌) ಖಾತರಿಪಡಿಸಬೇಕಿತ್ತು. ಹಣವು ದೀಪಕ್‌ಗೆ ಸೇರಿದೆ. ಹೀಗಾಗಿ, ಪ್ರಕರಣ ವಜಾ ಮಾಡಬೇಕು” ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ ರಾಸಾಯನಿಕ ತೈಲ ಪೂರೈಕೆ ಮಾಡುವುದಕ್ಕೆ ಬಿಲ್‌ ಪಾವತಿಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದ ಬಿಜೆಪಿ ಮಾಜಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ಪುತ್ರ, ಸರ್ಕಾರಿ ಅಧಿಕಾರಿಯಾದ ಪ್ರಶಾಂತ್‌ ಕುಮಾರ್‌ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಆರೋಪವಾಗಿದೆ. ಈ ಸಂದರ್ಭದಲ್ಲಿ ಲಂಚ ನೀಡಲು ತಂದಿದ್ದ ಹಣವು ಲೋಕಾಯುಕ್ತ ಪೊಲೀಸರ ಶೋಧನೆಯ ವೇಳೆ ನಿಕೋಲಸ್‌, ಗಂಗಾಧರ್ ಅವರ ಬಳಿ ದೊರೆತಿತ್ತು. ವಾಣಿಜ್ಯ ಕಂಪೆನಿಯಾದ ಆರೋಮಾಸ್‌ ಸಂಸ್ಥೆಯ ಉದ್ಯೋಗಿಗಳಾದ ಈ ಇಬ್ಬರು ತಲಾ 45 ಲಕ್ಷ ರೂಪಾಯಿ ಮೊತ್ತದ ಎರಡು ಬ್ಯಾಗ್‌ಗಳನ್ನು ಮಾಡಾಳ್‌ ಪುತ್ರ ಪ್ರಶಾಂತ್‌ ಅವರ ವೈಯಕ್ತಿಕ ಕಚೇರಿಯಲ್ಲಿ ಇಟ್ಟುಕೊಂಡಿದ್ದನ್ನು ಒಪ್ಪಿಕೊಂಡಿದ್ದರು. ಈ ಸಂಬಂಧ ಕಂಪೆನಿಯ ಮಾಲೀಕರು ಮತ್ತು ಉದ್ಯೋಗಿಗಳ ವಿರುದ್ಧ ದಾಖಲಾಗಿರುವ ಪ್ರತ್ಯೇಕ ಎರಡು ಪ್ರಕರಣಗಳನ್ನು ವಜಾ ಮಾಡುವಂತೆ ಅರ್ಜಿದಾರರು ಕೋರಿದ್ದರು. ಆದರೆ, ಹೈಕೋರ್ಟ್‌ ಇದಕ್ಕೆ ನಿರಾಕರಿಸಿದೆ.

Kailash S Raj and others Vs State of Karnataka.pdf
Preview