Karnataka HC and Justice Suraj Govindaraj 
ಸುದ್ದಿಗಳು

ಒಳಚರಂಡಿಯ ಮೂಲಕ ಬಡಾವಣೆಗಳ ಕೊಳಚೆ ನೀರು ರಾಜಕಾಲುವೆ ಸೇರಲು ಅನುಮತಿ ಇಲ್ಲ: ಕರ್ನಾಟಕ ಹೈಕೋರ್ಟ್‌

ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ನಿರ್ಮಿಸಬೇಕು ಎಂಬ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶವು ವಸತಿ ಬಡಾವಣೆಗಳಿಗೂ ಸಮಾನವಾಗಿ ಅನ್ವಯಿಸಲಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

Siddesh M S

“ಒಳಚರಂಡಿಯ ಮೂಲಕ ಬಡಾವಣೆಗಳ ಕೊಳಚೆ ನೀರು ರಾಜಕಾಲುವೆ ಸೇರಲು ಅನುಮತಿ ನೀಡಲಾಗಿಲ್ಲ. ಹೀಗೆ ಮಾಡುವುದರಿಂದ ಹೂಳು ಸಂಗ್ರಹವಾಗುವುದು, ನೀರು ತುಂಬಿಕೊಳ್ಳುವುದರ ಜೊತೆಗೆ ಇನ್ನೂ ಹಲವು ಅಡ್ಡ ಪರಿಣಾಮಗಳು ಉಂಟಾಗಲಿವೆ” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದ್ದು, ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಳ್ಳಲು ಸದರಿ ಪ್ರಕರಣ ಮತ್ತು ಆದೇಶವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸುವಂತೆ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನಿರ್ದೇಶಿಸಿದೆ.

ಬೆಂಗಳೂರಿನ ಆನೇಕಲ್‌ ತಾಲ್ಲೂಕಿನ ನಾಯ್ಡು ಲೇಔಟ್‌ನ ಎಸ್‌ ರಾಮಸ್ವಾಮಿ, ಎಂ ಚಂದ್ರ ಮೋಹನ್‌ ಮತ್ತು ಲೋಕೇಶ್‌ ಕುಮಾರ್‌ ಅವರು ವಿಚಾರಣಾಧೀನ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಒಳಚರಂಡಿಯ ಮೂಲಕ ಬಡಾವಣೆಗಳ ಕೊಳಚೆ ನೀರು ರಾಜಕಾಲುವೆ ಸೇರಲು ಅನುಮತಿ ನೀಡಲಾಗಿಲ್ಲ. ಹೀಗೆ ಮಾಡುವುದರಿಂದ ಹೂಳು ಸಂಗ್ರಹವಾಗುವುದರ ಜೊತೆಗೆ ನೀರು ತುಂಬಿಕೊಳ್ಳಲಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲ್ಯುಎಸ್‌ಎಸ್‌ಬಿ) ಅಗತ್ಯ ಒಳಚರಂಡಿ ವ್ಯವಸ್ಥೆ ಮಾಡದೇ ಯಾವುದೇ ಲೇಔಟ್‌ಗಳಿಗೆ ಅನುಮತಿ ನೀಡುವಂತಿರಲಿಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲದಿದ್ದರೆ ಕೊಳಚೆ ನೀರು ಸಂಸ್ಕರಣೆಗೆ ಅಗತ್ಯವಾದ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪಿಸಬೇಕು. ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ನಿರ್ಮಿಸಬೇಕು ಎಂಬ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶವು ವಸತಿ ಬಡಾವಣೆಗಳಿಗೂ ಸಮಾನವಾಗಿ ಅನ್ವಯಿಸಲಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಹಾಲಿ ದೂರಿನಲ್ಲಿನ ಆರೋಪಗಳು ದೂರಗಾಮಿ ಪರಿಣಾಮ ಉಂಟು ಮಾಡಲಿದ್ದು, ಸಾರ್ವಜನಿಕ ದೃಷ್ಟಿಯಿಂದ ಬಹುಮುಖ್ಯವಾಗಿವೆ. ಹೀಗಾಗಿ, ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡು, ಸಂಬಂಧಿತ ಸರ್ಕಾರಿ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಲು ಪ್ರಕರಣದ ದಾಖಲೆ ಮತ್ತು ಆದೇಶವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ರಿಜಿಸ್ಟ್ರಾರ್‌ ಜನರಲ್‌ ಅವರು ಮಂಡಿಸಬೇಕು” ಎಂದು ಪೀಠವು ಆದೇಶಿಸಿದೆ.

“ಖಾಸಗಿ ಬಡಾವಣೆಗಳಲ್ಲಿ ರಾಜ್ಯ ಸರ್ಕಾರ ಅಥವಾ ಸಂಬಂಧಿತ ಸಂಸ್ಥೆಗಳು ಒಳಚರಂಡಿ ನಿರ್ಮಿಸಿದ್ದು, ಇವುಗಳ ಮೂಲಕ ಕೊಳಚೆ ನೀರು ಮತ್ತು ಘನತ್ಯಾಜ್ಯವು ರಾಜಕಾಲುವೆಯ ಮೂಲಕ ಬೆಂಗಳೂರಿನ ವಿವಿಧ ಕೆರೆಗಳಿಗೆ ಸೇರುತ್ತಿದೆ ಎಂಬುದು ಸೇರಿದಂತೆ ಹಲವು ಆಘಾತಕಾರಿ ಆರೋಪಗಳನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಡೆಸಿರುವ ತನಿಖೆಯು ಅಗತ್ಯವಾಗಿರುವುದನ್ನು ಬಿಟ್ಟಿದ್ದು, ಎಡವಟ್ಟು ಮಾಡಿದೆ. ಒಳಚರಂಡಿ ನಿರ್ಮಿಸಲು ಅನುಮತಿಸಿದವರು ಯಾರು, ಒಳಚರಂಡಿ ನಿರ್ಮಿಸಿದವರು ಯಾರು, ಇದಕ್ಕೆ ಹಣ ಪಾವತಿಸಿದವರು ಯಾರು, ಇಂಥ ನಿರ್ಮಾಣಕ್ಕೆ ಯಾವ ರೀತಿಯ ಒಪ್ಪಿಗೆ ಪಡೆಯಲಾಗಿದೆ. ಇದಕ್ಕೆ ಅನುಮತಿಸಿದವರು ಯಾರು ಮತ್ತು ಯಾವ ಆಧಾರದಲ್ಲಿ ಅನುಮತಿ ನೀಡಲಾಗಿದೆ, ಬಡಾವಣೆಗೆ ಒಪ್ಪಿಗೆ ದೊರೆತಿದೆಯೇ, ಒಂದೊಮ್ಮೆ ಒಪ್ಪಿಗೆ ದೊರೆತಿದ್ದರೆ ಕೊಳಚೆ ನೀರು ವ್ಯವಸ್ಥೆ ಇತ್ಯಾದಿ ಪರಿಶೀಲಿಸದೆಯೇ ಅನುಮತಿ ನೀಡಲಾಗಿದೆಯೇ ಎಂಬುದು ತಿಳಿಯಬೇಕಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಹೀಗಾಗಿ, ರಾಜಕಾಲುವೆಗೆ ಕೊಳಚೆ ನೀರು ಸೇರಲು ಒಳಚರಂಡಿ ನಿರ್ಮಿಸಲು ಗ್ರಾಮ ಪಂಚಾಯಿತಿ ಅನುಮತಿಸಿದೆಯೇ ಮತ್ತು ಯಾವ ಆಧಾರದಲ್ಲಿ ಇದಕ್ಕೆ ಅನುಮತಿಸಲಾಗಿದೆ. ಇದಕ್ಕೆ ಯಾರೆಲ್ಲಾ ಕಾರಣರು, ಇಂಥವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 277 ಮತ್ತು 278ರ ಪ್ರಕ್ರಿಯೆ ಆರಂಭಿಸಬೇಕಿದೆ. ಅಪರಾಧಿಗಳು ಸರ್ಕಾರಿ ಅಥವಾ ಖಾಸಗಿ ವ್ಯಕ್ತಿ, ಯಾರೇ ಆಗಿದ್ದರೂ ಕಾನೂನು ಅನ್ವಯಿಸಲಿದೆ. ಹೀಗಾಗಿ, ಸಿಆರ್‌ಪಿಸಿ ಸೆಕ್ಷನ್‌ 173ರಲ್ಲಿನ ಉಪ ಸೆಕ್ಷನ್‌ 8ರ ಅಡಿ ತನಿಖೆ ನಡೆಸಲು ಇದು ಸೂಕ್ತ ಪ್ರಕರಣವಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

“ಪೊಲೀಸ್‌ ಮಹಾನಿರ್ದೇಶಕರು ಡಿಸಿಪಿ ಶ್ರೇಣಿಯ ಅಧಿಕಾರಿಯನ್ನು ತನಿಖೆಗೆ ನಿಯೋಜಿಸಬೇಕು. ಪಂಚಾಯತ್‌ ರಾಜ್‌ ಇಲಾಖೆ, ಬಿಬಿಎಂಪಿ, ಕಂದಾಯ ಇಲಾಖೆ, ಸರ್ವೆ ಸೆಟ್ಲ್‌ಮೆಂಟ್‌ ಕಚೇರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ಇತ್ಯಾದಿ ಸಂಸ್ಥೆಗಳು ತನಿಖಾಧಿಕಾರಿಗೆ ಸಹಕಾರ ನೀಡಬೇಕು. ಅಗತ್ಯ ಬಿದ್ದರೆ ಜಲ ವಿಜ್ಞಾನಿ ಅಥವಾ ಇನ್ಯಾವುದೇ ತಜ್ಞರ ನೆರವನ್ನು ತನಿಖಾಧಿಕಾರಿಗಳು ಪಡೆಯಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಆರೋಪ ಪಟ್ಟಿಯನ್ನು 2023ರ ಜನವರಿ 2ರ ಒಳಗೆ ಸಲ್ಲಿಸೇಕು. ತನಿಖೆ ಪೂರ್ಣಗೊಳ್ಳುವವರೆಗೆ ಅರ್ಜಿದಾರರ ವಿರುದ್ಧ ಯಾವುದೇ ತೆರನಾದ ದುರುದ್ದೇಶಪೂರಿತ ಕ್ರಮಕೈಗೊಳ್ಳಬಾರದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ವಿಚಾರಣೆಯನ್ನು ಜನವರಿ ೪ಕ್ಕೆ ಮುಂದೂಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿ ಲಕ್ಷ್ಮಿನಾರಾಯಣ ಅವರು “ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುದಾನದ ಅಡಿ ಪಂಚಾಯತ್‌ ರಾಜ್‌ ಇಲಾಖೆಯು ಕೊಳಚೆ ನೀರು ಹರಿದು ರಾಜಕಾಲುವೆ ಸೇರಲು ಒಳಚರಂಡಿ ನಿರ್ಮಿಸಲು ಅನುಮತಿಸಿದೆ. ಇದಕ್ಕಾಗಿ ಅರ್ಜಿದಾರರನ್ನು ಹೊಣೆಗಾರರನ್ನಾಗಿಸಲಾಗದು. ವಿನಾಯಕ ಬಡಾವಣೆ ಮಾತ್ರವಲ್ಲ, ಇತರೆ ಹಲವು ಬಡಾವಣೆಗಳಲ್ಲಿ ರಾಜಕಾಲುವೆಗೆ ಕೊಳಚೆ ನೀರು ಸೇರಲು ಒಳಚರಂಡಿ ನಿರ್ಮಿಸಲಾಗಿದೆ. ಬಿಡಬ್ಲ್ಯುಎಸ್‌ಎಸ್‌ಬಿ ಅಥವಾ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯು ಒಳಚರಂಡಿ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಸಾಮಾನ್ಯವಾಗಿ ಹೀಗೆ ಮಾಡಲಾಗುತ್ತಿದೆ” ಎಂದರು. ಇದನ್ನು ಪರಿಗಣಿಸಿ ಪೀಠವು ಆದೇಶ ಮಾಡಿದೆ.