ಮಾಹಿತಿ ತಂತ್ರಜ್ಞಾನ ನಿಯಮಾವಳಿಗಳು- 2021 ಮಾಹಿತಿ ತಂತ್ರಜ್ಞಾನ ಕಾಯಿದೆ- 2000 ರ ವ್ಯಾಪ್ತಿಯಲ್ಲಿಯೇ ಇದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಎದುರು ಪ್ರತಿಪಾದಿಸಿದೆ. ಅಲ್ಲದೆ ಈ ನಿಯಮಗಳು ಯಾವುದೇ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದು ಅದು ಹೇಳಿದೆ.
ನಿಯಮಾವಳಿಗಳ ಸಿಂಧುತ್ವ ಪ್ರಶ್ನಿಸಿ ಅದರಲ್ಲಿಯೂ ನಿಯಮಾವಳಿಗಳ ಭಾಗ ಮೂರರಲ್ಲಿ ಬರುವ ನೀತಿ ಸಂಹಿತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಮಾರು 150 ಪುಟಗಳಲ್ಲಿ ಪ್ರತಿಕ್ರಿಯೆ ನೀಡಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಭಾರತ ಸರ್ಕಾರದ ಉಪ ಕಾರ್ಯದರ್ಶಿಯಾಗಿರುವ ಅಮರೇಂದ್ರ ಸಿಂಗ್ ಅವರ ಮೂಲಕ ಕೇಂದ್ರ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಿದೆ.
ದಿ ವೈರ್ ಸುದ್ದಿ ಜಾಲತಾಣದ ಮಾತೃಸಂಸ್ಥೆಯಾದ ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂನ ನಿರ್ದೇಶಕರು ಮತ್ತು ದಿ ವೈರ್‌ನ ಸ್ಥಾಪಕ ಸಂಪಾದಕ ಎಂ ಕೆ ವೇಣು ಹಾಗೂ ದಿ ನ್ಯೂಸ್ ಮಿನಿಟ್‌ನ ಪ್ರಧಾನ ಸಂಪಾದಕಿ ಧನ್ಯ ರಾಜೇಂದ್ರನ್ ಅವರು ಈ ನಿಯಮಾವಳಿಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಇದೇ ನಿಯಮಾವಳಿಗಳನ್ನು ಪ್ರಶ್ನಿಸಿ ದಿ ಕ್ವಿಂಟ್, ಆಲ್ಟ್‌ನ್ಯೂಸ್ ಮತ್ತು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಕೂಡ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ.
ಐಟಿ ನಿಯಮಾವಳಿಗಳು- 2021 ಐಟಿ ಕಾಯಿದೆ-2000ರ ವ್ಯಾಪ್ತಿಯಲ್ಲಿವೆ. ಏಕೆಂದರೆ ಎಲೆಕ್ಟ್ರಾನಿಕ್ ಸಂವಹನದ ಮೂಲಕ ನಡೆಸುವ ವಹಿವಾಟು ತನ್ನ ವ್ಯಾಪ್ತಿಯಲ್ಲಿರುವುದನ್ನು ಐಟಿ ಕಾಯಿದೆಯ ಮುನ್ನುಡಿ ಸೂಚಿಸುತ್ತದೆ. ಎಲೆಕ್ಟ್ರಾನಿಕ್ ಸಂವಹನಕ್ಕಾಗಿ ಬಳಸುವ ಮಾಧ್ಯಮ ವಿಷಯಕ್ಕೂ ಕಾಯಿದೆಯ ವ್ಯಾಪ್ತಿ ವಿಸ್ತರಿಸಿದೆ. ಆದ್ದರಿಂದ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳು ಕೂಡ ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆ. ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಕಟವಾಗುವ ಅಥವಾ ಪ್ರಸಾರವಾಗುವ ಮಾಧ್ಯಮ ವಿಷಯದ ಕುರಿತು ಹಲವಾರು ನಿಬಂಧನೆಗಳು ಈಗಾಗಲೇ ಐಟಿ ಕಾಯಿದೆಯಲ್ಲಿವೆ. ಕಾಯಿದೆ ಖಾಸಗಿ ಮತ್ತು ಸಾರ್ವಜನಿಕ ಸಂವಹನವನ್ನು ಉಲ್ಲೇಖಿಸುತ್ತದೆ. ನಿಯಮಾವಳಿಗಳ ಮೂರನೇ ಭಾಗ ನಿಯಮಾವಳಿಗಳ ವ್ಯಾಪ್ತಿ ಮತ್ತು ಅವುಗಳನ್ನು ಜಾರಿಗೊಳಿಸುವ ದೃಷ್ಟಿಯಿಂದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಶಾಸಕಾಂಗ ಸಾಮರ್ಥ್ಯದೊಳಗೆ ಇದು ಇದೆ.
ನಿಯಮಾವಳಿಗಳು ಸುಳ್ಳು ಸುದ್ದಿ, ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ ತಡೆಯುತ್ತವೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಅಸ್ತಿತ್ವದಲ್ಲಿಲ್ಲದ ವ್ಯವಹಾರಗಳಿಂದ ಸಂಭವನೀಯ ದುರುಪಯೋಗ ತಡೆಯುವ ಉದ್ದೇಶ ತನಗಿದೆ ಎಂದು ಸ್ವತಃ ಐಟಿ ಕಾಯಿದೆಯೇ ಹೇಳುತ್ತದೆ. ಸೂಕ್ತ ಮಾಹಿತಿ ಪ್ರಸಾರ ಎಂಬುದು ಪ್ರಜಾಪ್ರಭುತ್ವ ಸಂವಾದದ ಹೃದಯಭಾಗದಲ್ಲಿದೆ. ಪ್ರಕಟಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರದಾಯಿತ್ವದ ಪ್ರಕ್ರಿಯೆಯಲ್ಲಿ ಅವಕಾಶ ನೀಡದೆ ನಾಗರಿಕರನ್ನು ನಿಷ್ಕ್ರಿಯ ಗ್ರಾಹಕರಂತೆ ನೋಡಲಾಗದು.
ನಿಯಮಾವಳಿಗಳು ಡಿಜಿಟಲ್ ಕ್ಷೇತ್ರಕ್ಕೆ ಇರದಿದ್ದ ಮಾರ್ಗಸೂಚಿಗಳ ಕೊರತೆ ನೀಗಿಸುತ್ತಿವೆ. ಐಟಿ ನಿಯಮಗಳ ಅಧಿಸೂಚನೆಗೆ ಮೊದಲು, ಡಿಜಿಟಲ್ ಸುದ್ದಿ ಮಾಧ್ಯಮ ಹೆಚ್ಚಾಗಿ ಅನಿಯಂತ್ರಿತವಾಗಿತ್ತು. ಡಿಜಿಟಲ್ ಮಾಧ್ಯಮ ಮಾರ್ಗಸೂಚಿಗಳ ಅನುಪಸ್ಥಿತಿಯಲ್ಲಿ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಅನ್ವಯವಾಗುವ ಮಾರ್ಗಸೂಚಿಗಳೇ ಡಿಜಿಟಲ್ ಮಾಧ್ಯಮ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಹೂರಣಕ್ಕೂ ಅನ್ವಯವಾಗುತ್ತಿವೆ.
ಸಾಂಪ್ರದಾಯಿಕ ಮತ್ತು ಡಿಜಿಟಲ್ ಮಾಧ್ಯಮಗಳ ನಡುವೆ ಸೇತುವಾಗಿ ನಿಯಮಾವಳಿಗಳು ಇವೆ. ಅಂತರ್ಜಾಲದಲ್ಲಿ ಮಾಧ್ಯಮ ವಿಷಯವನ್ನು ನಿರ್ವಹಿಸಲು ಪ್ರತ್ಯೇಕ ಸಾಂಸ್ಥಿಕ ಕಾರ್ಯವಿಧಾನವನ್ನು ಸ್ಥಾಪಿಸುವುದು ಸಂವಿಧಾನದ 14 ನೇ ವಿಧಿಯಡಿ ನೀಡಲಾದ ಸಮಾನತೆಯ ಹಕ್ಕಿನ ಉಲ್ಲಂಘನೆಯಲ್ಲ.
ನಿಯಮಾವಳಿ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಸರ್ಕಾರದ ವಿಚಕ್ಷಣೆಗೂ ಕಾರಣವಾಗದು. ನಿಯಮಾವಳಿಗಳು ನೀತಿ ಸಂಹಿತಗೆ ಸಂಬಂಧಿಸಿದ ಕುಂದುಕೊರತೆ ಪರಿಹರಿಸಿಕೊಳ್ಳಲು ನಾಗರಿಕ ವಿಧಾನ ಅಳವಡಿಸಿಕೊಳ್ಳುತ್ತದೆ. ಇದರಿಂದಾಗಿ ಪೊಲೀಸ್ ಅಧಿಕಾರ ಚಾಲ್ತಿಗೆ ಬರುವುದಿಲ್ಲ. ನೀತಿ ಸಂಹಿತೆಯ ಉಲ್ಲಂಘನೆ ಕ್ರಿಮಿನಲ್ ಶಿಕ್ಷೆಯಾಗುವುದಿಲ್ಲ. ನಿಯಮಾವಳಿಗಳು ಸ್ವಯಂ ಸೆನ್ಸಾರ್ ಅಥವಾ ವಾಕ್ ಸ್ವಾತಂತ್ರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಅರ್ಜಿದಾರರ ಪ್ರತಿಪಾದನೆಗೆ ಯಾವುದೇ ಪುರಾವೆಗಳಿಲ್ಲ. ಇದೊಂದು ಊಹೆ ಮಾತ್ರ. ನಿಯಮಾವಳಿಗಳಿಂದಾಗಿ ಕಂಟೆಂಟ್ (ವಿಷಯ) ಮೇಲೆ ಯಾವುದೇ ಸ್ಪಷ್ಟ ಪರಿಣಾಮ ಉಂಟಾಗುವುದಿಲ್ಲ ಎಂಬುದು ವಿಶ್ಲೇಷಣೆಗಳಿಂದ ತಿಳಿದು ಬಂದಿದ್ದು ಅನೇಕ ಸಂದರ್ಭಗಳಲ್ಲಿ ಕಂಟೆಂಟ್ ತಯಾರಿ ಹೆಚ್ಚಾಗಿದೆ. ಅಲ್ಲದೆ ಅನೇಕ ಪ್ರಕಾಶಕರು ಸ್ವಯಂ ಸೆನ್ಸಾರ್ ಸಂಸ್ಥೆ ರಚಿಸಲು ಮುಂದೆ ಬಂದಿದ್ದಾರೆ. ಪತ್ರಿಕಾ ಸ್ವಾತಂತ್ರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಭಾವನಾತ್ಮಕ ಮನವಿಯಾಗಿದೆಯೇ ವಿನಾ ಕಾನೂನುಬದ್ಧ ಸಮರ್ಥನೆಯಾಗಿಲ್ಲ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿ ಒದಗಿಸಲಾಗಿರುವ ಜನರ ಅರಿವಿನ ಹಕ್ಕಿಗೆ ಅನುಗುಣವಾಗಿ ನಿಯಮಾವಳಿಗಳು ಇವೆ.
ಅಂತರ್ ವಿಭಾಗೀಯ ಸಮಿತಿ ನಿಯಮಗಳಂತೆ ಅಂತರ್ಜಾಲ ವಿಷಯದಲ್ಲಿ ನಿರ್ಬಂಧಕ್ಕೆ ಶಿಫಾರಸು ಮಾಡಿದರೂ ಐಟಿ ಕಾಯಿದೆಯ ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ತಿಳಿಸಿರುವಂತೆ ಐಟಿ ಕಾಯಿದೆಯ ಸೆಕ್ಷನ್ 69 ಎ ಅಡಿ ಈಗಾಗಲೇ ಉಲ್ಲೇಖಿಸಿರುವ ಆಧಾರದ ಮೇಲೆ ಮಾತ್ರ ಹೀಗೆ ಮಾಡಬಹುದು. ಬಹು ಸದಸ್ಯರ ಸಮಿತಿ ಉಭಯ ಸುರಕ್ಷತೆಯಿಂದ ಕೂಡಿದ್ದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಒಪ್ಪಿಗೆ ಪಡೆಯುವುದು ಅಗತ್ಯವಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಥವಾ ತನ್ನದೇ ಇಂಟರ್‌ಫೇಸ್‌ನಲ್ಲಿ ಸುದ್ದಿ ಮತ್ತು ಪ್ರಚಲಿತ ವಿಷಯಗಳ ಪ್ರಕಾಶಕರು ಪ್ರಕಟಿಸಿದ ವಿಷಯವನ್ನು ನಿರ್ಬಂಧಿಸುವುದಕ್ಕೆ ಸಂಬಂಧಿಸಿದ ನಿಬಂಧನೆಗಳು ಹೊಸ ನಿಬಂಧನೆಯಲ್ಲ ಅದು ಕಾಯಿದೆಯ ವ್ಯಾಪ್ತಿಯಲ್ಲಿ ಈಗಾಗಲೇ ಇದೆ.
ಈ ಅಂಶಗಳ ಆಧಾರದಲ್ಲಿ, ಐಟಿ ನಿಯಮಾವಳಿ -2021ನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಜಾಗೊಳಿಸುವಂತೆ ಕೇಂದ್ರ ಹೈಕೋರ್ಟ್‌ಗೆ ಮನವಿ ಮಾಡಿದೆ.