ಸುದ್ದಿಗಳು

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡದೇ ಹೋದರೆ ಕಷ್ಟ: ಸಿಎಂ ಸಿದ್ದರಾಮಯ್ಯ

“ವಕೀಲರು ಕೋರ್ಟ್‌ನಲ್ಲಿ ಹೆಚ್ಚು ಮಾತನಾಡಬೇಕು ಎಂದು ನಮ್ಮ ಸೀನಿಯರ್‌ ಯಾವಾಗಲೂ ಹೇಳುತ್ತಿದ್ದರು. ಆದರೆ, ಇವತ್ತು ನಮ್ಮ ಸರ್ಕಾರಿ ವಕೀಲರು ಕೋರ್ಟ್‌ಗಳಲ್ಲಿ ಮಾತೇ ಆಡುವುದಿಲ್ಲ ಎಂಬುದನ್ನು ಕೇಳಿದ್ದೇನೆ” ಎಂದ ಸಿಎಂ. 

Bar & Bench

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡದೇ ಹೋದರೆ ಭಾರಿ ಕಷ್ಟವಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ದೇಶದ, ನಾಡಿನ ರಕ್ಷಣೆ ವಕೀಲರ ಕೈಯ್ಯಲ್ಲಿದೆ” ಎಂಬ ಅಭಿಪ್ರಾಯಪಟ್ಟರು.

ವಕೀಲರ ರಕ್ಷಣಾ ಕಾಯಿದೆ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘ (ಎಎಬಿ) ನೀಡಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

“ವಕೀಲರು ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದನ್ನು ಅನುಷ್ಠಾನಕ್ಕೆ ತರಲು ಮತ್ತು ಸಮಾಜದಲ್ಲಿನ ಆರ್ಥಿಕ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಬೇಕು” ಎಂದರು.

“ಬಹು ವರ್ಷಗಳಿಂದ ಬೇಡಿಕೆಯಲ್ಲಿದ್ದ ವಕೀಲರ ರಕ್ಷಣಾ ಕಾಯಿದೆಯನ್ನು ನನ್ನ ಅವಧಿಯಲ್ಲಿ ಜಾರಿಗೆ ತರಲಾಗಿದೆ. ಈ ಮೂಲಕ ಅವರಿಗೆ ರಕ್ಷಣೆಯ ಖಾತ್ರಿ ದೊರೆತಿದೆ ಎಂಬ ಸಮಾಧಾನ ನನಗಿದೆ” ಎಂದರು.

"ಇಂದು ಕೋರ್ಟ್‌ ಮೆಟ್ಟಿಲೇರಿ ನ್ಯಾಯ ಪಡೆಯುವುದು ದುಬಾರಿ ಆಗಿದೆ. ಇಂತಹ ದಿನಗಳಲ್ಲಿ ವಕೀಲರು ಕೇವಲ ಶುಲ್ಕ ಪಡೆಯಲು ವಕೀಲಿ ವೃತ್ತಿ ನಡೆಸದೆ, ಕಕ್ಷಿದಾರರ ಹಕ್ಕುಗಳನ್ನು ರಕ್ಷಿಸಲು, ಸಮಾಜದಲ್ಲಿನ ಅಸಮಾನತೆಯನ್ನು ತೊಲಗಿಸಲು ಮತ್ತು ತ್ವರಿತವಾಗಿ ನ್ಯಾಯದಾನ ಆಗುವಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು” ಎಂದರು.

“ನನಗೀಗ 78 ವರ್ಷ. ನಾನು ದೈಹಿಕ ಮತ್ತು ಮಾನಸಿಕವಾಗಿ ಓಕೆ” ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ ಸಿದ್ದರಾಮಯ್ಯ ಅವರು, ನಾನು ವಕೀಲನಾಗಿದ್ದಾಗ ಪೂರ್ಣ ಪ್ರಮಾಣದಲ್ಲಿ ವೃತ್ತಿ ನಡೆಸಲಿಲ್ಲ. ಒಂದು ಕಾಲು ವಕೀಲಿಕೆ ಇನ್ನೊಂದು ಕಾಲು ರಾಜಕೀಯದಲ್ಲಿ ಇರಿಸಿದ್ದೆ. ಒಂದು ಬಾರಿ ಮೈಸೂರು ವಕೀಲರ ಸಂಘದ ಕಾರ್ಯದರ್ಶಿಯೂ ಆಗಿದ್ದೆ” ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು.

“ನಾನು ಯಾವ‌ತ್ತೂ ಹಣ ಸಂಪಾದನೆಗೆ ವಕೀಲಿಕೆ ನಡೆಸಲೇ ಇಲ್ಲ. ಅವತ್ತಿನ ತಿಂಡಿ, ಊಟ ಪೂರೈಸಿದರೆ ಸಾಕು. ನಾಳಿನ ಯೋಚನೆಯನ್ನೇ ಮಾಡುತ್ತಿರಲಿಲ್ಲ” ಎಂದ ಅವರು, “ವಕೀಲರು ಕೋರ್ಟ್‌ನಲ್ಲಿ ಹೆಚ್ಚು ಮಾತನಾಡಬೇಕು ಎಂದು ನಮ್ಮ ಸೀನಿಯರ್‌ ಯಾವಾಗಲೂ ಹೇಳುತ್ತಿದ್ದರು. ಆದರೆ, ಇವತ್ತು ನಮ್ಮ ಸರ್ಕಾರಿ ವಕೀಲರು ಕೋರ್ಟ್‌ಗಳಲ್ಲಿ ಮಾತೇ ಆಡುವುದಿಲ್ಲ ಎಂಬುದನ್ನು ಕೇಳಿದ್ದೇನೆ” ಎಂದರು. 

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ಹಿರಿಯ ವಕೀಲ ಮತ್ತು ಶಾಸಕ ಎ ಎಸ್‌ ಪೊನ್ನಣ್ಣ ಅವರು “ವಕೀಲರು ಅನ್ಯಾಯವನ್ನು ಸಹಿಸಬಾರದು. ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಹೋರಾಟದ ಮನಃಸ್ಥಿತಿ ರೂಪಿಸಿಕೊಳ್ಳಬೇಕು” ಎಂದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಉಪಾಧ್ಯಕ್ಷ ಗಿರೀಶ್‌ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್‌ ವಿ ಪ್ರವೀಣ್‌ ಗೌಡ, ಖಜಾಂಚಿ ಶ್ವೇತಾ ರವಿಶಂಕರ್‌ ಮತ್ತಿತರರು ಉಪಸ್ಥಿತರಿದ್ದರು.