ಕಾಂಗ್ರೆಸ್ 
ಸುದ್ದಿಗಳು

ತೆರಿಗೆ ಬಾಕಿ ವಸೂಲಾತಿಗೆ ತಡೆ: ಕಾಂಗ್ರೆಸ್ ಮನವಿ ವಜಾಗೊಳಿಸಿದ ಐಟಿಎಟಿ

ಐಟಿ ಇಲಾಖೆ ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಕಾಂಗ್ರೆಸ್ ಹೇಳಿದ್ದ ಹಿನ್ನೆಲೆಯಲ್ಲಿ ಕಳೆದ ತಿಂಗಳು ವಿವಾದ ಭುಗಿಲೆದ್ದಿತ್ತು. ಆದರೆ, ಅಧಿಕಾರಿಗಳು ಈ ಆರೋಪ ನಿರಾಕರಿಸಿದ್ದರು.

Bar & Bench

2018-19ರ ತೆರಿಗೆ ನಿರ್ಧರಣಾ ಸಾಲಿನಲ್ಲಿ ಬಾಕಿ ಇರುವ 105 ಕೋಟಿ ರೂಪಾಯಿಗೂ ಹೆಚ್ಚಿನ ತೆರಿಗೆ ಮೊತ್ತ ವಸೂಲಿ ಮಾಡಲು ಆದಾಯ ತೆರಿಗೆ (ಐಟಿ) ಇಲಾಖೆ ನೀಡಿದ ನೋಟಿಸ್‌ಗೆ ತಡೆ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಶುಕ್ರವಾರ ವಜಾಗೊಳಿಸಿದೆ.

ಕಾಂಗ್ರೆಸ್‌ಗೆ ಆದಾಯ ತೆರಿಗೆ ವಿನಾಯಿತಿ ನಿರಾಕರಿಸುವ ವಿಚಾರದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಯಾವುದೇ ತಪ್ಪು ಮಾಡಿಲ್ಲ ಎಂದು ಉಪಾಧ್ಯಕ್ಷ ಜಿ ಎಸ್ ಪನ್ನು ಮತ್ತು ನ್ಯಾಯಾಂಗ ಸದಸ್ಯ ಅನುಭವ್ ಶರ್ಮಾ ಅವರಿದ್ದ ದೆಹಲಿ ಪೀಠ ತೀರ್ಪು ನೀಡಿದೆ.

ಅಧಿಕಾರಿಗಳ ವಿನಾಯಿತಿ ನಿರಾಕರಣೆ ವಿರುದ್ಧ ಬಲವಾದ ಪ್ರಾಥಮಿಕ ವಾದ ಮಂಡಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂದು ಅದು ಹೇಳಿದೆ.

ತನಗೆ ಯಾವುದೇ ಆದಾಯ ಬರುತ್ತಿಲ್ಲ ಎಂದು ಕಾಂಗ್ರೆಸ್‌ ಘೋಷಿಸಿದ್ದನ್ನು ಜುಲೈ 2021ರಲ್ಲಿ ನಿರಾಕರಿಸಿದ್ದ ಐಟಿ ಅಧಿಕಾರಿಗಳು ರೂ 105 ಕೋಟಿಗಿಂತಲೂ ಅಧಿಕ ತೆರಿಗೆ ಸಂದಾಯ ಮಾಡುವಂತೆ ಸೂಚಿಸಿದ್ದರು.

ನಿಗದಿತ ಅವಧಿ ಮೀರಿ ತೆರಿಗೆ ರಿಟರ್ನ್ ಸಲ್ಲಿಸಲಾಗಿದ್ದು ವಿವಿಧ ವ್ಯಕ್ತಿಗಳಿಂದ ಪಕ್ಷ 14,49,000 ರೂಪಾಯಿ ʼದೇಣಿಗೆʼ ಸ್ವೀಕರಿಸಿದೆ. ಪ್ರತಿಯೊಂದು ದೇಣಿಗೆ ಸ್ವೀಕಾರವೂ ರೂ 2,000ಕ್ಕಿಂತ ಹೆಚ್ಚಿನ ಮೊತ್ತದ್ದಾಗಿದೆ ಎಂಬ ಆಧಾರದ ಮೇಲೆ ತೆರಿಗೆ ಸಂದಾಯ ಮಾಡುವಂತೆ ನೋಟಿಸ್‌ ನೀಡಲಾಗಿತ್ತು.

ರಾಜಕೀಯ ಪಕ್ಷಗಳಿಗೆ ತೆರಿಗೆಯಿಂದ ವಿನಾಯಿತಿ ಪಡೆಯಲು ಅವಕಾಶ ಕಲ್ಪಿಸುವ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 13 ಎಯನ್ನು ಈ ನೋಟಿಸ್‌ ಉಲ್ಲಂಘಿಸುತ್ತದೆ ಎನ್ನಲಾಗಿತ್ತು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸಂಕಷ್ಟ ತಂದೊಡ್ಡುವ ಉದ್ದೇಶ ತೆರಿಗೆ ಇಲಾಖೆಯು ಆರಂಭಿಸಿರುವ ವಸೂಲಾತಿ ಪ್ರಕ್ರಿಯೆಯ ಹಿಂದೆ ಇದೆ ಎಂದು ಐಟಿಎಟಿ ಎದುರು ಕಾಂಗ್ರೆಸ್‌ ಅಳಲು ತೋಡಿಕೊಂಡಿತ್ತು.

ಆದರೆ ಈ ಉದ್ದೇಶವನ್ನು ತೆರಿಗೆ ನಿರ್ಧರಣಾಧಿಕಾರಿಗೆ ಆಪಾದಿಸಲಾಗಿದೆ ಎಂದು ಆಕ್ಷೇಪಿಸಿದ ಐಟಿ ಅಧಿಕಾರಿಗಳು ಜುಲೈ 2021ರಿಂದ ವಸೂಲಾತಿ ಪ್ರಕ್ರಿಯೆಗಳು ಬಾಕಿ ಉಳಿದಿವೆ ಎಂದು ವಾದ ಮಂಡಿಸಿದರು.

ಈ ಅಂಶ "ಸಾಕಷ್ಟು ವ್ಯಕ್ತಿನಿಷ್ಠ"ವಾಗಿದ್ದು ಪ್ರಕರಣವನ್ನು ಅರ್ಹತೆಯ ಆಧಾರದ ಮೇಲೆಯೇ ಪರಿಗಣಿಸಿದೆ ಎಂದು ಶುಕ್ರವಾರ ಹೊರಡಿಸಿದ ಆದೇಶದಲ್ಲಿ ಐಟಿಎಟಿ ತಿಳಿಸಿದೆ. ಅನಗತ್ಯ ಅವಸರದಿಂದ ವಸೂಲಾತಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂಬ ಊಹೆ ಸಮರ್ಥನೀಯವಲ್ಲ. ಅಲ್ಲದೆ ಕಾಂಗ್ರೆಸ್‌ ನಿಗದಿತ ಗಡುವಿನೊಳಗೆ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಬೇಕಿತ್ತು ಎಂದು ಅದು ಅಭಿಪ್ರಾಯಪಟ್ಟಿದೆ.

ಐಟಿ ಇಲಾಖೆ ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಕಾಂಗ್ರೆಸ್ ಹೇಳಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ವಿವಾದ ಭುಗಿಲೆದ್ದಿತ್ತು. ಆದರೆ, ಅಧಿಕಾರಿಗಳು ಈ ಆರೋಪ ನಿರಾಕರಿಸಿದ್ದರು. ತೆರಿಗೆ ಬಾಕಿ ಪಾವತಿಸುವಂತೆ ಮಾತ್ರ ಸೂಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Indian National Congress vs DCIT.pdf
Preview