ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ವಕೀಲ ಜೈ ಅನಂತ್ ದೇಹದ್ರಾಯ್ ಅವರು ಗುರುವಾರ ಹಿಂಪಡೆದಿದ್ದಾರೆ.
ಮೊಯಿತ್ರಾ ಮಾಡಿದ ಆರೋಪಗಳಿಂದಾಗಿ ತಮ್ಮ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದ್ದು ಇದರಿಂದಾಗಿ ತನ್ನ ಕಕ್ಷಿದಾರರನ್ನು ಕಳೆದುಕೊಂಡಿದ್ದಾಗಿ ವಕೀಲ ದೇಹದ್ರಾಯ್ ಮೊಕದ್ದಮೆ ಹೂಡಿದ್ದರು.
ಫಿರ್ಯಾದಿಯ ಪರ ವಕೀಲರು ಮೊಕದ್ದಮೆ ಹಿಂಡೆಯಲು ಅನುಮತಿ ಕೋರಿದ್ದು ಮೊಕದ್ದಮೆಯನ್ನು ಹಿಂಪಡೆಯಲು ಅನುಮತಿಸಿ ಅರ್ಜಿ ವಜಾಗೊಳಿಸಲಾಗಿದೆ ಎಂದು ನ್ಯಾ. ಪ್ರತೀಕ್ ಜಲನ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮಾಜಿ ಸಂಸದೆ ಮೊಯಿತ್ರಾ ಅವರು ದೇಹದ್ರಾಯ್ ವಿರುದ್ಧ ಅವಹೇಳನಕಾರಿ ಆರೋಪಗಳನ್ನು ಮಾಡಿದ್ದರು. ತಮ್ಮ ಕಕ್ಷಿದಾರ ದೇಹದ್ರಾಯ್ ಅವರನ್ನು ʼನಿರುದ್ಯೋಗಿʼ, ʼತಿರಸ್ಕೃತ (ಪ್ರೇಮಿ)' ಎಂದು ಆರೋಪಿಸಿ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರು. ದೇಹದ್ರಾಯ್ ವಿರುದ್ಧ ಸುಳ್ಳು ಹೇಳಿಕೆ ನೀಡುವುದಿಲ್ಲ ಎಂದು ಮೊಯಿತ್ರಾ ಘೋಷಿಸಿದರೆ ತನ್ನ ಕಕ್ಷಿದಾರರು ಮೊಕದ್ದಮೆ ಹಿಂಪಡೆಯಲು ಸಿದ್ಧ ಎಂದು ದೇಹ್ರದಾಯ್ ಪರ ವಕೀಲ ರಾಘವ್ ಅವಸ್ಥಿ ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೊಯಿತ್ರ ಅವರ ಪರ ವಕೀಲರಾದ ಸಮುದ್ರ ಸಾರಂಗಿ ತಮ್ಮ ಕಕ್ಷಿದಾರೆಯ ಅಭಿಪ್ರಾಯ ಪಡೆಯುವುದಾಗಿ ತಿಳಿಸಿದರು.
ಪರಸ್ಪರ ವೈಯಕ್ತಿಕ ಆರೋಪ ಮಾಡುವುದಿಲ್ಲ ಎಂದು ದೇಹದ್ರಾಯ್ ಮತ್ತು ಮೊಯಿತ್ರಾ ನಿರ್ಧರಿಸಿದರೆ ಹಾಗೂ ವಿವಾದವನ್ನು ಸಾರ್ವಜನಿಕ ಬದುಕಿನಿಂದ ಹಿಂಪಡೆಯುವುದಾದರೆ ಅದು ಎರಡೂ ಕಡೆಯವರಿಗೆ ಉಪಯುಕ್ತಕಾರಿಯಾಗುತ್ತದೆ ಎಂಬ ದೇಹದ್ರಾಯ್ ಪರ ವಕೀಲರ ಸಲಹೆ ಸಕಾರಾತ್ಮಕವಾಗಿದೆ ಎಂದು ನ್ಯಾ. ಜಲನ್ ತಿಳಿಸಿದರು.
ಎರಡು ಕಡೆಯ ವಕೀಲರು ಒಟ್ಟಿಗೆ ಕುಳಿತು ಇಬ್ಬರಿಗೂ ಅನ್ವಯವಾಗುವ ಆದೇಶದ ವಿಚಾರಗಳನ್ನು ಮಂಡಿಸಬಹುದು ಎಂದು ಅವರು ಸಲಹೆ ನೀಡಿದರು. ಈ ಹಂತದಲ್ಲಿ ಅವಸ್ಥಿ ಅವರು ಬೇಷರತ್ತಾಗಿ ಮೊಕದ್ದಮೆ ಹಿಂಪಡೆಯುತ್ತಿರುವುದಾಗಿ ತಿಳಿಸಿದರು. ಈ ಕೋರಿಕೆಯನ್ನು ನ್ಯಾಯಾಲಯ ಮನ್ನಿಸಿತು.
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಮೊಯಿತ್ರಾ ಲಂಚ ಸ್ವೀಕರಿಸಿದ್ದಾರೆ ಎಂದು ದೇಹದ್ರಾಯ್ ಈ ಹಿಂದೆ ಆರೋಪಿಸಿದ್ದರು. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಲೋಕಸಭೆ ಸ್ಪೀಕರ್ ಅವರಿಗೆ ದೂರು ಸಲ್ಲಿಸಿದ್ದರು.
ಮೊಯಿತ್ರಾ ನಂತರ ಮಾನನಷ್ಟಕ್ಕಾಗಿ ದೇಹದ್ರಾಯ್ ಮತ್ತು ದುಬೆ ವಿರುದ್ಧ ಮೊಕದ್ದಮೆ ಹೂಡಿದರು. ಆದರೆ, ಮಧ್ಯಂತರ ತಡೆಯಾಜ್ಞೆ ಕೋರಿ ಆಕೆ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ದೇಹದ್ರಾಯ್ ಕೂಡ ತಮ್ಮ ವಿರುದ್ಧ ಮೊಯಿತ್ರಾ ಸಾರ್ವಜನಿಕವಾಗಿ ನಿಂದನಕಾರಿ ಮಾತುಗಳನ್ನು ಆಡಿರುವುದನ್ನು ಮುಂದು ಮಾಡಿ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು.