Justice Siddaiah Rachaiah, Karnataka High Court 
ಸುದ್ದಿಗಳು

ಅಕ್ರಮ ಶೆಡ್‌ ತೆರವು ಕಾರ್ಯಾಚರಣೆ ವೇಳೆ ʼಜೈ ಬಾಂಗ್ಲಾʼ ಘೋಷಣೆ: ಪಶ್ಚಿಮ ಬಂಗಾಳದ ಮಹಿಳೆಗೆ ಜಾಮೀನು ಮಂಜೂರು

ಪ್ರಕರಣದ ಸತ್ಯಾಸತ್ಯತೆ ಹಾಗೂ ಸಂದರ್ಭ ಪರಿಗಣಿಸಿ ಹಾಗೂ ಅರ್ಜಿದಾರೆಗೆ ಇಬ್ಬರು ಅಪ್ರಾಪ್ತ ಮಕ್ಕಳಿದ್ದು ಅವರನ್ನು ಆಕೆಯೇ ನೋಡಿಕೊಳ್ಳಬೇಕಿರುವುದರಿಂದ, ಸೂಕ್ತ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಬಹುದು ಎಂದ ಹೈಕೋರ್ಟ್‌.

Bar & Bench

ಬೆಂಗಳೂರಿನ ಹೆಬ್ಬಗೋಡಿಯಲ್ಲಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಶೆಡ್‌ಗಳ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ "ಜೈ ಬಾಂಗ್ಲಾ" ಎಂದು ಘೋಷಣೆ ಕೂಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳ ಮೂಲದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಪಶ್ಚಿಮ ಬಂಗಾಳದ ನಿವಾಸಿ ಸದ್ಯ ಆನೇಕಲ್ ತಾಲ್ಲೂಕಿನ ಹುಲಿಮಂಗಲ ಪೊಡು ಗ್ರಾಮದಲ್ಲಿ ನೆಲೆಸಿರುವ ಸರ್ಬಾನು ಖಾತೂನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಪ್ರಕರಣದ ದೂರಿನ ಸಾರಾಂಶ ಪರಿಶೀಲಿಸಿದರೆ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ಅಧಿಕಾರಿಗಳು ತೆರವುಗೊಳಿಸುತ್ತಿದ್ದ ಪ್ರಕ್ರಿಯೆಯನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸುತ್ತಿದ್ದರು. ಆ ಸಮಯದಲ್ಲಿ, ವ್ಯಕ್ತಿಯೊಬ್ಬರು ಅರ್ಜಿದಾರೆಯನ್ನು "ಜೈ ಭಾರತ್ ಮಾತಾ ಕಿ ಜೈ" ಎಂದು ಘೋಷಣೆ ಕೂಗುವಂತೆ ಪ್ರಚೋದಿಸಿದ್ದರು. ಈ ವೇಳೆ, "ಜೈ ಬಾಂಗ್ಲಾ" ಎಂದು ಕೂಗಿದ ಮಹಿಳೆ ಆನಂತರ ಮೂರು ಬಾರಿ "ಜೈ ಭಾರತ್ ಮಾತಾ ಕಿ ಜೈ" ಎಂದು ಘೋಷಣೆ ಕೂಗಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಹಾಗೂ ಸಂದರ್ಭಗಳನ್ನು ಪರಿಗಣಿಸಿ ಹಾಗೂ ಅರ್ಜಿದಾರೆಗೆ ಇಬ್ಬರು ಅಪ್ರಾಪ್ತ ಮಕ್ಕಳಿದ್ದು ಅವರನ್ನು ಆಕೆಯೇ ನೋಡಿಕೊಳ್ಳಬೇಕಿರುವುದರಿಂದ, ಸೂಕ್ತ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರ ಮಹಿಳೆ ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಂದು ಸ್ಥಳೀಯ ಭದ್ರತೆ ಒದಗಿಸಬೇಕು. ಅರ್ಜಿದಾರರು ಇಂಥದೇ ಪ್ರಕರಣದಲ್ಲಿ ಭಾಗಿಯಾಗಬಾರದು. ವಿಚಾರಣಾಧೀನ ನ್ಯಾಯಾಲಯಕ್ಕೆ ಪ್ರಕರಣದ ಎಲ್ಲ ವಿಚಾರಣಾ ದಿನಾಂಕಗಳಂದು ತಪ್ಪದೇ ಹಾಜರಾಗಬೇಕು. ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ತಿರುಚಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯವು ಇವುಗಳಲ್ಲಿ ಯಾವುದೇ ಷರತ್ತು ಉಲ್ಲಂಘನೆಯಾದರೂ ಅರ್ಜಿದಾರರ ಜಾಮೀನು ರದ್ದುಪಡಿಸಲು ಕೋರಿ ಅರ್ಜಿ ಸಲ್ಲಿಸಲು ಪ್ರಾಸಿಕ್ಯೂಷನ್ ಮುಕ್ತ ಅವಕಾಶ ಹೊಂದಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಮಹಿಳೆಯ ಪರ ವಕೀಲ ಎಂ ಮೊಹಮ್ಮದ್‌ ರಶೀಫ್‌ ಅವರು “ಅರ್ಜಿದಾರೆ ಪಶ್ಚಿಮ ಬಂಗಾಳದ ಖಾಯಂ ನಿವಾಸಿಯಾಗಿದ್ದು, ಹೆಬ್ಬಗೋಡಿಯಲ್ಲಿ ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದಾರೆ. ಭಾರತೀಯರ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ಉದ್ದೇಶ ಆಕೆಗೆ ಇರಲಿಲ್ಲ. ಆಕೆಗೆ ಪ್ರಚೋದನೆ ನೀಡಿ, ಕೆರಳಿಸುವ ಮೂಲಕ ಕೃತ್ಯ ಎಸಗುವಂತೆ ಮಾಡಲಾಗಿದೆ. "ಜೈ ಭಾರತ್ ಮಾತಾ ಕಿ ಜೈ" ಎಂದು ಘೋಷಣೆ ಕೂಗುವಂತೆ ಪ್ರಚೋದಿಸಿದಾಗ, ಮುಂದಿನ ಸಂಘರ್ಷ ತಪ್ಪಿಸಲು ಆಕೆ ಅಂತಹ ಘೋಷಣೆ ಕೂಗಿರಬಹುದು. ಅರ್ಜಿದಾರೆ ಸುಮಾರು 25 ವರ್ಷ ವಯಸ್ಸಿನ ಮಹಿಳೆಯಾಗಿದ್ದು, ಇಬ್ಬರು ಅಪ್ರಾಪ್ತ ಮಕ್ಕಳಿದ್ದಾರೆ. ಆಕೆಯೇ ಮಕ್ಕಳ ಆರೈಕೆ ಮಾಡಬೇಕಿದೆ. ಆದ್ದರಿಂದ, ಸೂಕ್ತ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದ್ದರು.

​ಪ್ರಕರಣದ ಹಿನ್ನೆಲೆ: ಪ್ರಾಸಿಕ್ಯೂಷನ್ ದಾಖಲೆಗಳ ಪ್ರಕಾರ, 2026ರ ಜನವರಿಯಲ್ಲಿ ಹೆಬ್ಬಗೋಡಿಯಲ್ಲಿ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ನಡೆದಿದ್ದೆನ್ನಲಾದ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಅದರಲ್ಲಿ ಮಹಿಳೆಯೊಬ್ಬರಿಗೆ "ಜೈ ಭಾರತ್ ಮಾತಾ ಕಿ ಜೈ" ಎಂದು ಹೇಳುವಂತೆ ಒತ್ತಾಯಿಸಲಾಗಿತ್ತು. ಆ ಸಮಯದಲ್ಲಿ ಆಕೆ ಮೊದಲು "ಜೈ ಬಾಂಗ್ಲಾ" ಎಂದು ಘೋಷಣೆ ಕೂಗಿದ್ದು, "ಜೈ ಭಾರತ್ ಮಾತಾ ಕಿ ಜೈ" ಎಂದು ಹೇಳಿದ್ದರು.

ಈ ವಿಡಿಯೊ ಗಮನಿಸಿದ್ದ ಹೆಬ್ಬಗೋಡಿ ಠಾಣೆಯ ಮುಖ್ಯಪೇದೆ ವೃಷಭೇಂದ್ರ ಅವರು ಜನವರಿ 11ರಂದು ದೂರು ನೀಡಿ, ಭಾರತೀಯರ ಭಾವನೆಗಳಿಗೆ ಧಕ್ಕೆ ತಂದು ಶಾಂತಿ ಭಂಗ ಉಂಟು ಮಾಡಿದ ಹಾಗೂ ಉದ್ದೇಶಪೂರ್ವಕವಾಗಿ ಜೈ ಬಾಂಗ್ಲಾ ಎಂದು ಘೋಷಣೆ ಕೂಗುವ ಮೂಲಕ ರಾಷ್ಟ್ರೀಯ ಏಕತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ತಂದ ಆರೋಪದಲ್ಲಿ ಅಪರಿಚಿತ ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದರಲ್ಲದೆ, ಆಕೆಯನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು. ಆನಂತರ ಸರ್ಭಾನು ಖಾತೂನ್‌ನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ‌ಧೀನ ನ್ಯಾಯಾಲಯ ವಜಾಗೊಳಿಸಿದ್ದರಿಂದ ಆರೋಪಿ ಮಹಿಳೆ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು.

Sarabanu Khatun Vs State of Karnataka.pdf
Preview