Kamakumar Nandi Maharaj 
ಸುದ್ದಿಗಳು

ಜೈನಮುನಿ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳನ್ನು ಜುಲೈ 17ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದ ಚಿಕ್ಕೋಡಿ ನ್ಯಾಯಾಲಯ

ಮುನಿಶ್ರೀಗಳು ಗುರುವಾರ ನಾಪತ್ತೆಯಾಗಿದ್ದು, ಈ ಸಂಬಂಧ ಭಕ್ತರು ಚಿಕ್ಕೋಡಿ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದರು. ಅವರ ಮೃತದೇಹವು ಶುಕ್ರವಾರ ರಾತ್ರಿ ಪತ್ತೆಯಾಗಿತ್ತು.

Bar & Bench

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜ ಕೊಲೆ ಪ್ರಕರಣದಲ್ಲಿನ ಆರೋಪಿಗಳಾದ ನಾರಾಯಣ ಮಾಳಿ, ಹಸನ್‌ಸಾಬ್‌ ದಲಾಯತ್‌ ಅವರನ್ನು ಏಳು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ಚಿಕ್ಕೋಡಿಯ ಪ್ರಧಾನ ಸಿವಿಲ್‌ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಆರೋಪಿಗಳನ್ನು ಪೊಲೀಸರು ಚಿಕ್ಕೋಡಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಚಿದಾನಂದ ಬಡಿಗೇರ್‌ ಅವರ ಮುಂದೆ ಹಾಜರುಪಡಿಸಿ, ಘಟನೆಯ ವಿವರ ನೀಡಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಕೋರಿದರು. ಇದನ್ನು ಆಲಿಸಿದ ನ್ಯಾಯಾಧೀಶರು ಆರೋಪಿಗಳನ್ನು ಜುಲೈ 17ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ.

ಮುನಿಶ್ರೀಗಳು ಗುರುವಾರ ನಾಪತ್ತೆಯಾಗಿದ್ದು, ಈ ಸಂಬಂಧ ಭಕ್ತರು ಚಿಕ್ಕೋಡಿ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದರು. ಮೃತದೇಹವು ಶುಕ್ರವಾರ ರಾತ್ರಿ ಪತ್ತೆಯಾಗಿತ್ತು. ಹಣದ ವಿಚಾರದಲ್ಲಾದ ಮನಸ್ತಾಪದಿಂದ ಕಾಮಕುಮಾರ ನಂದಿ ಮಹಾರಾಜರನ್ನು ಕೊಲೆ ಮಾಡಿರುವುದಾಗಿ ಆರೋಪಿಗಳಾದ ಮಾಳಿ ಮತ್ತು ಹಸನ್‌ಸಾಬ್‌ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ಮುನಿಶ್ರೀ ಅವರನ್ನು ಹತ್ಯೆ ಮಾಡಿ, ದೇಹವನ್ನು ತುಂಡರಿಸಿ ರಾಯಭಾಗದ ಖಟಕಭಾವಿ ಗ್ರಾಮದ ಬಳಿಯಿರುವ ಕೊಳವೆ ಬಾವಿಗೆ ಎಸೆದಿರುವುದಾಗಿ ವಿವರಿಸಿದ್ದಾರೆ ಎನ್ನಲಾಗಿದೆ.