ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ (ಯುಜಿಸಿ) ಹಣ ಪಡೆಯಲು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವ ವಿದ್ಯಾಲಯ, ನ್ಯಾಯಾಲಯಗಳನ್ನು ಗುರಾಣಿಯಾಗಿ ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ. [ಪ್ರೊ. ಸಬಿಹಾ ಹುಸೇನ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ನಡುವಣ ಪ್ರಕರಣ].
ಆ ಮೂಲಕ ಸರೋಜಿನಿ ನಾಯ್ಡು ಮಹಿಳಾ ಅಧ್ಯಯನ ಕೇಂದ್ರಕ್ಕೆ ಯುಜಿಸಿ ಹಣ ಬಿಡುಗಡೆ ಮಾಡುವಂತೆ ನಿರ್ದೇಶಿಸಬೇಕು ಎಂದು ವಿವಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿತು.
ಯುಜಿಸಿ ಯಾವುದೇ ಹಣ ಬಾಕಿ ಉಳಿಸಿಕೊಂಡಿದ್ದರೆ ಜಾಮಿಯಾ ವಿವಿ ಸೂಕ್ತ ಕಾನೂನು ಆಶ್ರಯ ಪಡೆದು ಹೊಸ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ತನಗೆ ಜಾಮಿಯಾ ವಿಶ್ವವಿದ್ಯಾಲಯ ವೇತನ ನೀಡುತ್ತಿಲ್ಲ ಎಂದು ಪ್ರೊ. ಸಬಿಹಾ ಹುಸೇನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದ್ದು ಇದಕ್ಕೆ ಸಂಬಂಧಿಸಿದಂತೆ ಜಾಮಿಯಾ ವಿವಿ ಮನವಿ ಸಲ್ಲಿಸಿತ್ತು.
ವಿಶ್ವವಿದ್ಯಾಲಯದ ಉಪ ಕುಲಪತಿ, ರಿಜಿಸ್ಟ್ರಾರ್ ಹಾಗೂ ಇತರೆ ಅಧಿಕಾರಿಗಳು ಸಂಬಳ ಪಡೆಯುತ್ತಿರುವುದನ್ನು ಅರಿತ ನ್ಯಾಯಾಲಯ “ಹಾಗಿದ್ದರೆ ವಿವಿ ತನ್ನ ಆಸ್ತಿ ಮಾರಾಟ ಮಾಡಿ ಪ್ರಾಧ್ಯಾಪಕರಿಗೆ ಹಣ ಪಾವತಿಸಬಹುದು ಅಥವಾ ಉಪ ಕುಲಪತಿ ಮತ್ತು ರಿಜಿಸ್ಟ್ರಾರ್‌ಗಳು ವೇತನ ಪಡೆಯುವುದನ್ನು ನಿಲ್ಲಿಸಿ ಶಿಕ್ಷಕರಿಗೆ ಹಣ ಪಾವತಿಸಬೇಕು” ಎಂದು ಖಾರವಾಗಿ ನುಡಿಯಿತು. ಅರ್ಜಿದಾರೆ ಪ್ರೊಫೆಸರ್‌ಗೆ ಬಾಕಿ ವೇತನ ಪಾವತಿಸುವುದಾಗಿ ಹಿಂದಿನ ವಿಚಾರಣೆ ವೇಳೆ ಭರವಸೆ ನೀಡಿದ್ದನ್ನು ಇದೇ ವೇಳೆ ನ್ಯಾಯಾಲಯ ಗಮನಿಸಿತು.