Supreme Court 
ಸುದ್ದಿಗಳು

ಐದು ರಾಜ್ಯಗಳ ಮತಾಂತರ ವಿರೋಧಿ ಕಾಯಿದೆಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಜಾಮಿಯತ್ ಉಲಾಮಾ- ಇ- ಹಿಂದ್

ಅಂತರ್ಧರ್ಮೀಯ ವಿವಾಹವಾದ ಜೋಡಿಗೆ ಕಿರುಕುಳ ನೀಡಲೆಂದು ಮತ್ತು ಅವರನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸಲೆಂದು ಕಾಯಿದೆ ಜಾರಿಗೆ ತರಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

Bar & Bench

ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ಉತ್ತರಾಖಂಡ ಹಾಗೂ ಮಧ್ಯಪ್ರದೇಶದಲ್ಲಿ ಜಾರಿಗೆ ತಂದಿರುವ ಮತಾಂತರ ತಡೆಗೆ ಸಂಬಂಧಿಸಿದ ವಿವಿಧ ಕಾಯಿದೆಗಳನ್ನು ಪ್ರಶ್ನಿಸಿ ದೇಶದ ಪ್ರಮುಖ ಮುಸ್ಲಿಂ ವಿದ್ವಾಂಸರ ಸಂಘಟನೆ ಜಾಮಿಯತ್‌ ಉಲಾಮಾ- ಇ- ಹಿಂದ್‌ ಗುರುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯಿದೆ- 2021, ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ- 2018,  ಹಿಮಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ- 2019, ಮಧ್ಯ ಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ- 2021, ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯಿದೆ- 2021ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಇದಾಗಿದೆ.

ಅಂತರ್‌ಧರ್ಮೀಯ ವಿವಾಹವಾದ ಜೋಡಿಗೆ ಕಿರುಕುಳ ನೀಡಲೆಂದು ಮತ್ತು ಅವರನ್ನು ಕ್ರಿಮಿನಲ್‌ ಪ್ರಕರಣಗಳಲ್ಲಿ ಸಿಲುಕಿಸಲೆಂದು ಕಾಯಿದೆ ಜಾರಿಗೆ ತರಲಾಗಿದೆ ಎಂದು ವಕೀಲ ಎಜಾಜ್ ಮಕ್ಬೂಲ್ ಅವರ ಮೂಲಕ ಸಲ್ಲಿಸಲಾದ ಮನವಿ ಕಳವಳ ವ್ಯಕ್ತಪಡಿಸಿದೆ.

ಈ ಎಲ್ಲಾ ಕಾಯಿದೆಗಳು ಒಬ್ಬ ವ್ಯಕ್ತಿ ನಂಬಿರುವ ಧರ್ಮವನ್ನು ಬಹಿರಂಗಪಡಿಸುವಂತೆ ಒತ್ತಾಯಿಸುತ್ತವೆ ಮತ್ತು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುತ್ತವೆ. ಜೊತೆಗೆ ಅಂತರ್‌ ಧರ್ಮೀಯ ವಿವಾಹವಾಗುವ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಎಫ್‌ಐಆರ್‌ ದಾಖಲಿಸಲು ಅವಕಾಶ ನೀಡಿ ಮತಾಂತರಗೊಂಡವರಿಗೆ ಕಿರುಕುಳ ನೀಡಲು ಕಾಲ್ಪನಿಕವಾದ ಹೊಸ ಸಾಧನವೊಂದನ್ನು ಒದಗಿಸುತ್ತವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇಂಡಿಯಾ ಟುಡೆ ಆಂಗ್ಲ ನಿಯತಕಾಲಿಕ ಡಿಸೆಂಬರ್ 29, 2020 ರಂದು ಪ್ರಕಟಿಸಿರುವ ವರದಿ ಪ್ರಕಾರ ಉತ್ತರ ಪ್ರದೇಶದಲ್ಲಿ ಮತಾಂತರ ತಡೆ ಕುರಿತ ಸುಗ್ರೀವಾಜ್ಞೆ (ನಂತರ ಇದನ್ನು ಕಾಯಿದೆಯಾಗಿ ಬದಲಿಸಲಾಯಿತು) ಹೊರಡಿಸಿದ ಒಂದು ತಿಂಗಳೊಳಗೆ ಕಾಯಿದೆಯನ್ನು ಅಂತರ್‌ಧರ್ಮೀಯ ವಿವಾಹವಾದವರ ಕುಟುಂಬ ಸದಸ್ಯರು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ವಿಚಾರ ಸ್ಪಷ್ಟವಾಗಿದೆ. ದಾಖಲಿಸಲಾಗಿದ್ದ 14 ಪ್ರಕರಣಗಳಲ್ಲಿ ಕೇವಲ 2 ಮಾತ್ರ ಸಂತ್ರಸ್ತರ ದೂರುಗಳನ್ನು ಆಧರಿಸಿದ್ದವು. ಉಳಿದ ದೂರುಗಳು ಕುಟುಂಬ ಸದಸ್ಯರಿಗೆ ಸಂಬಂಧಿಸಿದ್ದವು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಎಲ್ಲಾ ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ?

ಈ ಕಾನೂನು ಮತ್ತು ಸುಗ್ರೀವಾಜ್ಞೆ ಪ್ರಶ್ನಿಸಿ ಈಗಾಗಲೇ ದೇಶದ ವಿವಿಧ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಬಾಕಿ ಇದೆ. ಬುಧವಾರ ಮತಾಂತರ ತಡೆಗೆ ಸಂಬಂಧಿಸಿದ ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶ ಕಾಯಿದೆಗಳನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಸಿಜೆಐ ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠ ವಿವಿಧ ಹೈಕೋರ್ಟ್‌ಗಳಲ್ಲಿರುವ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕೆ ಎಂಬ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿತ್ತು.